ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆಯನ್ನು ಮುಂದುವರೆಸಿದೆ. ವಿಚಾರಣೆ ವೇಳೆ ಸಿಬಿಐ ಮತ್ತು ರಾಜ್ಯ ಸರ್ಕಾರದ ಪರ ವಕೀಲರು ಗೈರಾಗಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. ಈ ಹಿಂದೆ ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ, ಸಿಬಿಐಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನು ಓದಿದ್ದೀರಾ? BREAKING NEWS | ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್
ಇಂದು ವಿಚಾರಣೆಯನ್ನು ಮುಂದುವರೆಸಿದ್ದು, ಸೌಜನ್ಯ ತಾಯಿ ಪರ ವಕೀಲರು ಸಿಬಿಐ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ್ ರಾವ್ ಪರ ವಕೀಲರೂ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಸೌಜನ್ಯ ಮೃತದೇಹದ ಛಾಯಾಚಿತ್ರವನ್ನು ಪರಿಶೀಲಿಸಿದ್ದಾರೆ. ವಕೀಲರು ಸೌಜನ್ಯ ಬಟ್ಟೆ ಮೇಲಿದ್ದ DNAಯನ್ನು ವೈದ್ಯರು ಸಂಗ್ರಹಿಸಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಮಧ್ಯಾಹ್ನ ನಂತರ ವಿಚಾರಣೆ ಮತ್ತೆ ಮುಂದುವರಿಯಲಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು.
ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆಯೇ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಕೊಲೆ, ನಿಗೂಢ ಸಾವು, ನಾಪತ್ತೆ ಪ್ರಕರಣಗಳು ಮುನ್ನೆಲೆಗೆ ಬಂದಿತ್ತು.
ಇದನ್ನು ಓದಿದ್ದೀರಾ? ಹೋರಾಟಕ್ಕೆ ಗೌರವ, ಬೆಂಬಲ: ಸೌಜನ್ಯ ತಾಯಿ ಕುಸುಮಾವತಿಗೆ ಪತ್ರ ಬರೆದ ‘ಕೊಂದವರು ಯಾರು’ ತಂಡ
ಸೌಜನ್ಯ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ನಂತರ 2015ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ನಡುವೆ ಪ್ರಕರಣದ ಸಾಕ್ಷಿಯಾಗಿದ್ದ ರವಿ ಪೂಜಾರಿ ಎಂಬುವವರು ನಿಗೂಢವಾಗಿ ಸಾವನ್ನಪ್ಪಿದ್ದರು. ಸೌಜನ್ಯ ಅತ್ಯಾಚಾರ ಕೊಲೆ ನಡೆದ ಎರಡು ದಿನದಲ್ಲೇ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಸುಮಾರು 11 ವರ್ಷಗಳ ಕಾಲ ಸಂತೋಷ್ ಜೈಲಿನಲ್ಲಿದ್ದರು.
ಆದರೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ ಸಂತೋಷ್ ಅವರು 2023ರಲ್ಲಿ ಸಂತೋಷ ರಾವ್ ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿದ್ದರು. ಇವಿಷ್ಟು ನಡೆಯುತ್ತಿದ್ದಂತೆ ನಿಜಕ್ಕೂ ಈ ನೀಚ ಕೃತ್ಯವನ್ನು ಎಸಗಿದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಸೌಜನ್ಯ ತಾಯಿ ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.





