ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಆಧಾರ ಮತದಾರರ ಪಟ್ಟಿ. ಆ ಪಟ್ಟಿಯೇ ನಿಖರವಾಗಿದ್ದರೆ ಮಾತ್ರ ಚುನಾವಣೆಯ ವಿಶ್ವಾಸಾರ್ಹತೆ ಉಳಿಯುತ್ತದೆ. ಈ ಉದ್ದೇಶದಿಂದಲೇ ಚುನಾವಣಾ ಆಯೋಗ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಕೈಗೊಂಡಿದೆ. ಉದ್ದೇಶ ಉತ್ತಮವಾಗಿದ್ದರೂ, ನೆಲಮಟ್ಟದಲ್ಲಿ ಅದರ ಅನುಷ್ಠಾನ ನಡೆಯುತ್ತಿರುವ ರೀತಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಮತದಾರರಲ್ಲಿ ಮಾತ್ರವಲ್ಲ, ಈ ಕೆಲಸ ನಿರ್ವಹಿಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳಾದ (BLO) ಮತ್ತು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರಲ್ಲಿಯೂ (BLA) ಗೊಂದಲವೇ ಹೆಚ್ಚಾಗಿದೆ.
ಇಂದು ಅನೇಕ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರಂ ವಿತರಣೆ ನಡೆಯುತ್ತಿದೆ. ಆದರೆ ಫಾರಂ ನೀಡುವವರಿಗೂ, ಪಡೆಯುವವರಿಗೂ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದು ಅತ್ಯಂತ ಆತಂಕಕಾರಿ ಸಂಗತಿ. ಚುನಾವಣಾ ಆಯೋಗವು ಪ್ರಗತಿಯ ಶೇಕಡಾವಾರು ಅಂಕಿಅಂಶಗಳನ್ನು ಪ್ರಕಟಿಸುತ್ತಿರುವಾಗ, ನೆಲಮಟ್ಟದಲ್ಲಿ ಕಂಡುಬರುವ ಸಮಸ್ಯೆಗಳು ಆ ಅಂಕಿಅಂಶಗಳ ಹಿಂದೆ ಇರುವ ವಾಸ್ತವ ಚಿತ್ರವನ್ನು ಪ್ರಶ್ನಿಸುವಂತಿವೆ.
ತರಬೇತಿಯ ಕೊರತೆ: ಬಿಎಲ್ಒಗಳ ತಪ್ಪಲ್ಲ, ವ್ಯವಸ್ಥೆಯ ವೈಫಲ್ಯ
ಬಿಎಲ್ಒಗಳು ಸರ್ಕಾರದ ವಿವಿಧ ಇಲಾಖೆಗಳ ನೌಕರರು. ಚುನಾವಣಾ ಕೆಲಸ ಅವರ ಮೂಲ ಕರ್ತವ್ಯವಲ್ಲ. ಚುನಾವಣೆಯ ಸಮಯದಲ್ಲಿ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತದೆ. ಆದ್ದರಿಂದ ಸಮರ್ಪಕ ತರಬೇತಿ, ಸ್ಪಷ್ಟ ಮಾರ್ಗಸೂಚಿ ಮತ್ತು ತಾಂತ್ರಿಕ ಮಾಹಿತಿ ನೀಡುವುದು ಚುನಾವಣಾ ವ್ಯವಸ್ಥೆಯ ಹೊಣೆಗಾರಿಕೆ.
ಆದರೆ ಅನೇಕ ಕಡೆಗಳಲ್ಲಿ ಬಿಎಲ್ಒಗಳಿಗೆ ಸಂಪೂರ್ಣ ತರಬೇತಿ ಸಿಕ್ಕಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಕೆಲವರಿಗೆ ಯಾವ ಮತದಾರರ ಪಟ್ಟಿಯನ್ನು ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವರು 2025ರ ಅಂತಿಮ ಮತದಾರರ ಪಟ್ಟಿಯನ್ನು ಬಳಸುತ್ತಿದ್ದರೆ, ಇನ್ನೂ ಕೆಲವರು ಹಳೆಯ 2024ರ ಕರಡು ಪಟ್ಟಿಯನ್ನೇ ಹಿಡಿದು ಮನೆ ಮನೆಗೆ ತೆರಳುತ್ತಿರುವ ಉದಾಹರಣೆಗಳೂ ಕಂಡುಬರುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಬಿಎಲ್ಒಗಳ ಮೇಲೆ ತಪ್ಪು ಹೊರಿಸುವುದು ನ್ಯಾಯಸಮ್ಮತವಲ್ಲ. ಅವರಿಗೆ ನೀಡಿರುವ ಸಮಯ ಕಡಿಮೆ, ಕೆಲಸದ ಒತ್ತಡ ಹೆಚ್ಚು, ಸಾರ್ವಜನಿಕರ ಪ್ರಶ್ನೆಗಳು ಅನೇಕ. ಈ ಒತ್ತಡದ ನಡುವೆ ಅಸಹನೆಯ ವಾತಾವರಣ ನಿರ್ಮಾಣವಾಗುವುದು ಸಹಜ.
ಫಾರಂ ನೀಡಲಾಗುತ್ತಿದೆ, ಆದರೆ ಮಾಹಿತಿ ನೀಡಲಾಗುತ್ತಿಲ್ಲ
ಎನ್ಯುಮರೇಷನ್ ಫಾರಂ ವಿತರಣೆ ಕೇವಲ ಕಾಗದ ಹಂಚುವ ಪ್ರಕ್ರಿಯೆಯಾಗಬಾರದು. ಆ ಫಾರಂ ಯಾಕೆ? ಅದನ್ನು ಹೇಗೆ ಭರ್ತಿ ಮಾಡಬೇಕು? ಯಾವ ದಾಖಲೆ ಬೇಕು? ತಪ್ಪಾದರೆ ಪರಿಣಾಮ ಏನು? ಸಲ್ಲಿಸುವ ಕೊನೆಯ ದಿನಾಂಕ ಯಾವುದು? ಎಂಬ ಮಾಹಿತಿ ಕೂಡ ಮತದಾರರಿಗೆ ನೀಡಬೇಕು.
ಆದರೆ ಅನೇಕ ಕಡೆಗಳಲ್ಲಿ ‘ಇದು ಫಾರಂ… ತುಂಬಿ ಕೊಡಿ’ ಎನ್ನುವುದರಲ್ಲಿಯೇ ಪ್ರಕ್ರಿಯೆ ಮುಗಿಯುತ್ತಿದೆ. ಇದರಿಂದ ಸಾಮಾನ್ಯ ನಾಗರಿಕರಲ್ಲಿ ಗೊಂದಲ ಇನ್ನಷ್ಟು ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಅರಿವು ಕಡಿಮೆ ಇರುವವರಿಗೆ ಇದು ಮತ್ತಷ್ಟು ಸಂಕಷ್ಟವನ್ನುಂಟು ಮಾಡುತ್ತಿದೆ.
ಗೊಂದಲದ ಮೂಲ: 2025ರ ಅಂತಿಮ ಮತದಾರರ ಪಟ್ಟಿಯ ಬಳಕೆ
ಈ ಸಂಪೂರ್ಣ ಪ್ರಕ್ರಿಯೆಯಲ್ಲಿರುವ ಅತ್ಯಂತ ಪ್ರಮುಖ ಪ್ರಶ್ನೆಯೆಂದರೆ ಚುನಾವಣಾ ಆಯೋಗ ಬಳಸುತ್ತಿರುವ ಮೂಲ ಪಟ್ಟಿ.
ಪ್ರಸ್ತುತ ಎನ್ಯುಮರೇಷನ್ ಫಾರಂ ವಿತರಣೆ ಮುಖ್ಯವಾಗಿ 2025ರ ಜನವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿ (Final Roll) ಆಧಾರದ ಮೇಲೆ ನಡೆಯುತ್ತಿದೆ. ಆದರೆ 2025ರ ಜನವರಿಯಿಂದ 2026ರ ಜುಲೈವರೆಗೆ ಸುಮಾರು ಒಂದೂವರೆ ವರ್ಷದ ಅವಧಿ ಕಳೆದಿದೆ.
ಈ ಅವಧಿಯಲ್ಲಿ ಸಾವಿರಾರು ಜನರು ಹೊಸದಾಗಿ ಮತದಾರರಾಗಿ ಸೇರ್ಪಡೆಯಾಗಿದ್ದಾರೆ.
- ಕೆಲವರು 18 ವರ್ಷ ಪೂರ್ಣಗೊಳಿಸಿ ಹೆಸರು ಸೇರಿಸಿದ್ದಾರೆ.
- ಮದುವೆಯಾಗಿ ಬೇರೆ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.
- ಮನೆ ಬದಲಾಯಿಸಿ ಹೊಸ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.
- ಮರಣ ಹೊಂದಿದವರ ಹೆಸರು ತೆಗೆದುಹಾಕಲಾಗಿದೆ.
- ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆ (Shift/Transfer) ಆಗಿದೆ.
- ಹಲವರು ವಿಳಾಸ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ.
ಈ ಎಲ್ಲ ಬದಲಾವಣೆಗಳು ನಡೆದಿದ್ದರೂ, ಬಿಎಲ್ಒ ಕೈಯಲ್ಲಿರುವ ಮೂಲ ಪಟ್ಟಿಯಲ್ಲಿ ಆ ಮಾಹಿತಿ ಕಾಣಿಸದಿರುವುದು ಸಮಸ್ಯೆಯ ಕೇಂದ್ರಬಿಂದುವಾಗಿದೆ.
ಮತದಾರರ ಬಳಿ ವೋಟರ್ ಐಡಿ ಇದೆ… ಆದರೆ ಪಟ್ಟಿಯಲ್ಲಿ ಹೆಸರು ಇಲ್ಲ!
ಇದರಿಂದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಮತದಾರರ ಬಳಿ ಮಾನ್ಯ ಮತದಾರರ ಗುರುತಿನ ಚೀಟಿ (EPIC) ಇರುತ್ತದೆ. ಅವರು ಕಾನೂನುಬದ್ಧ ಮತದಾರರಾಗಿರುತ್ತಾರೆ. ಆದರೆ ಬಿಎಲ್ಒ ಕೈಯಲ್ಲಿರುವ ಪಟ್ಟಿಯಲ್ಲಿ ಅವರ ಹೆಸರು ಕಾಣಿಸುವುದಿಲ್ಲ. ಬಿಎಲ್ಒ ಪಟ್ಟಿಯಲ್ಲಿ ಹುಡುಕುತ್ತಾರೆ. ಹೆಸರು ಸಿಗುವುದಿಲ್ಲ. ಆಗ ಅವರು ಹೇಳುವುದು ಒಂದೇ ಮಾತು; ‘ಪಟ್ಟಿಯಲ್ಲಿ ಹೆಸರು ಇಲ್ಲ’.
ಆದರೆ ಮತದಾರರ ಪ್ರಶ್ನೆ ಬೇರೆ; ‘ನನ್ನ ಬಳಿ ಮಾನ್ಯ ಮತದಾರ ಗುರುತಿನ ಚೀಟಿ ಇದೆ. ಹಾಗಿದ್ದರೆ ಹೆಸರು ಎಲ್ಲಿಗೆ ಹೋಯಿತು?’. ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಯಾರ ಬಳಿಯೂ ಇಲ್ಲ. ತಾಲ್ಲೂಕು ಕಚೇರಿಯಲ್ಲೂ ಸ್ಪಷ್ಟತೆ ಇಲ್ಲ. ಸಾಮಾನ್ಯವಾಗಿ ಮತದಾರರು ಬಿಎಲ್ಒ ಬಳಿ ಉತ್ತರ ಸಿಗದಿದ್ದರೆ ತಾಲ್ಲೂಕು ಚುನಾವಣಾ ಶಾಖೆ ಅಥವಾ ತಹಶೀಲ್ದಾರ್ ಕಚೇರಿಗೆ ಹೋಗುತ್ತಾರೆ. ಆದರೆ, ಅಲ್ಲಿಯೂ ಅನೇಕ ಬಾರಿ ಒಂದೇ ಉತ್ತರ ಸಿಗುತ್ತದೆ. ‘ಆನ್ಲೈನ್ನಲ್ಲಿ ನೋಡಿಕೊಳ್ಳಿ.’
ಆದರೆ, ಆನ್ಲೈನ್ನಲ್ಲಿ ಯಾವ ಪಟ್ಟಿಯನ್ನು ನೋಡಬೇಕು? 2025ರ ಅಂತಿಮ ಪಟ್ಟಿ? ಅಥವಾ ನಂತರ ಸೇರ್ಪಡೆಯಾದ ಮಾಹಿತಿಯ ಪ್ರತ್ಯೇಕ ದಾಖಲೆ? ಅದನ್ನು ಹೇಗೆ ಪಡೆಯಬೇಕು? ಎಂಬ ಬಗ್ಗೆ ಸ್ಪಷ್ಟ ಮಾರ್ಗದರ್ಶನ ಎಲ್ಲೆಡೆ ದೊರೆಯುತ್ತಿಲ್ಲ. ಹಾಗೆ ಹುಡುಕಿದಲ್ಲಿ ಉಪ ಚುನಾವಣೆ ನಡೆದ ಕ್ಷೇತ್ರಗಳ ಪಟ್ಟಿ ಮಾತ್ರ 2026ರ ಇದುವರಿಗಿನ ಮಾಹಿತಿ ಲಭ್ಯವಿದೆ. ಉಳಿದಂತೆ ಸಿಗುವುದಿಲ್ಲ. ಇದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗುತ್ತಿದೆ.
ಒಬ್ಬ ಪತ್ರಕರ್ತನ ಅನುಭವ ಹೇಳುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆ ಕೇವಲ ಸಾಮಾನ್ಯರಿಗಷ್ಟೇ ಸೀಮಿತವಲ್ಲ. ನನ್ನದೇ ಅನುಭವ ಇದಕ್ಕೆ ಜೀವಂತ ಉದಾಹರಣೆ. ನಾನು 2025ರ ನವೆಂಬರ್ನಲ್ಲಿ ಮನೆ ಬದಲಾಯಿಸಿ ಹೊಸ ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ನೋಂದಣಿ ವರ್ಗಾವಣೆ ಮಾಡಿಸಿಕೊಂಡಿದ್ದೇನೆ. ನನ್ನ ಬಳಿ ಮಾನ್ಯ ಮತದಾರ ಗುರುತಿನ ಚೀಟಿ ಇದೆ. ಆದರೆ ಬಿಎಲ್ಒ ಕೈಯಲ್ಲಿದ್ದ 2025ರ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ನಾನು ಬಿಎಲ್ಒ ಬಳಿ ಕೇಳಿದಾಗ ಅವರು ಹೇಳಿದ್ದು ಒಂದೇ ಮಾತು; ‘ಪಟ್ಟಿಯಲ್ಲಿ ಹೆಸರು ಇಲ್ಲ. ನಾನು ಏನು ಮಾಡಲಿ?’. ಅದು ಅವರ ತಪ್ಪಲ್ಲ. ಅವರ ಕೈಯಲ್ಲಿದ್ದ ಮಾಹಿತಿಯ ಮಿತಿಯೇ ಅದಕ್ಕೆ ಕಾರಣ.
ಕೊನೆಗೆ ಸಿಕ್ಕ ಪರಿಹಾರ… ಆದರೆ ಎಲ್ಲರಿಗೂ ಸಾಧ್ಯವೇ?
ಪತ್ರಕರ್ತನಾಗಿ ಮಾಹಿತಿ ಹುಡುಕುವ ಹವ್ಯಾಸ ಮತ್ತು ಅನುಭವದಿಂದ ನಾನು ವಿವಿಧ ವಿಧಾನಗಳನ್ನು ಪ್ರಯತ್ನಿಸಿದೆ. ವಿಧಾನಸಭಾ ಕ್ಷೇತ್ರ, ಭಾಗ ಸಂಖ್ಯೆ (Part Number), ಕ್ರಮ ಸಂಖ್ಯೆ (Serial Number) ಆಧಾರದ ಮೇಲೆ ಅವರಲ್ಲಿರುವ ಎನ್ಯುಮರೇಷನ್ ಫಾರಂ ಹುಡುಕಿದಾಗ ಕೊನೆಗೆ ನನ್ನ ಮಾಹಿತಿ ಪತ್ತೆಯಾಯಿತು. ಈ ವಿಧಾನವನ್ನು ನಾನು ಬಿಎಲ್ಒ ಅವರಿಗೆ ತಿಳಿಸಿದ ಬಳಿಕ, ಹಲವು ದಿನಗಳ ಪ್ರಯತ್ನದ ನಂತರ ಮಾಹಿತಿ ದೊರೆಯಿತು. ಮತದಾರ ಪಟ್ಟಿ ಅಲ್ಲದೆ ಎನ್ಯುಮರೇಷನ್ ಫಾರಂ ಇದಿಯಾ? ಇಲ್ಲವಾ? ಎಂದು ಹುಡುಕಿ ನಂತರ ತೀರ್ಮಾನ ಮಾಡುವಂತೆ ತಿಳಿಸಿದೆ. ಒಬ್ಬ ಬಿಎಲ್ಒ ಈ ಮಾಹಿತಿ ತಿಳಿದರೆ ಸಾಲದು ಎಲ್ಲರಿಗೂ ಅದರ ಮಾಹಿತಿ ಇರಬೇಕು.
ಆದರೆ ಇಲ್ಲಿ ಪ್ರಶ್ನೆ ಏನೆಂದರೆ- ಒಬ್ಬ ಪತ್ರಕರ್ತನಿಗೆ ನಾಲ್ಕು ದಿನ ಹಿಡಿದರೆ, ಡಿಜಿಟಲ್ ಜ್ಞಾನವಿಲ್ಲದ ಗ್ರಾಮೀಣ ಹಿರಿಯ ನಾಗರಿಕರಿಗೆ ಹೇಗೆ ಸಾಧ್ಯ?, ಅಕ್ಷರ ಜ್ಞಾನ ಕಡಿಮೆ ಇರುವವರಿಗೆ?, ನಗರದಿಂದ ನಗರಕ್ಕೆ ಉದ್ಯೋಗಕ್ಕಾಗಿ ಸ್ಥಳಾಂತರಗೊಂಡ ಕಾರ್ಮಿಕರಿಗೆ?, ವೃದ್ಧರಿಗೆ?, ಅಂಗವಿಕಲರಿಗೆ? ಇಂತಹ ಸಾವಿರಾರು ಜನರ ಸಮಸ್ಯೆಗೆ ಯಾರು ಉತ್ತರ? ಕೊಡುತ್ತಾರೆ.
ಶೇ.100 ಸಾಧನೆ ಎಂದರೆ ಏನು?
ಚುನಾವಣಾ ಆಯೋಗ ಜಿಲ್ಲಾವಾರು ಎನ್ಯುಮರೇಷನ್ ವಿತರಣೆಯ ಶೇಕಡಾವಾರು ಅಂಕಿಅಂಶಗಳನ್ನು ಪ್ರಕಟಿಸುತ್ತಿದೆ. ಕೆಲವು ಕಡೆಗಳಲ್ಲಿ ಶೇ.100ರಷ್ಟು ವಿತರಣೆ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿ ಮೂಲ ಪ್ರಶ್ನೆ ಬೇರೆ.
ಫಾರಂ ಮನೆಗೆ ತಲುಪಿದರೆ ಸಾಕೇ? ಅಥವಾ, ಸರಿಯಾದ ವ್ಯಕ್ತಿಗೆ ತಲುಪಿದೆಯೇ?, ಪಟ್ಟಿಯಲ್ಲಿ ಹೆಸರು ಸರಿಯಾಗಿದೆಯೇ ಹೊಸದಾಗಿ ಸೇರ್ಪಡೆಯಾದವರ ಮಾಹಿತಿ ಸೇರಿಸಲಾಯಿತೇ?, ವರ್ಗಾವಣೆಗೊಂಡವರ ಮಾಹಿತಿ ಸರಿಹೊಂದಿದೆಯೇ?, ಮತದಾರರಿಗೆ ಪ್ರಕ್ರಿಯೆ ಅರ್ಥವಾಗಿದೆಯೇ?, ಬಿಎಲ್ಒಗಳಿಗೆ ಅಗತ್ಯ ಮಾಹಿತಿ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಇದ್ದರೆ, ಕೇವಲ ಶೇಕಡಾವಾರು ಸಾಧನೆಯನ್ನು ಯಶಸ್ಸಿನ ಮಾನದಂಡವೆಂದು ಪರಿಗಣಿಸುವುದು ಸಮಂಜಸವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಚುನಾವಣಾ ಆಯೋಗ ಮಾಡಬೇಕಾದ ತುರ್ತು ಕ್ರಮಗಳು
ಈ ಗೊಂದಲ ನಿವಾರಣೆಗೆ ಚುನಾವಣಾ ಆಯೋಗ ಕೆಲವು ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
- 2025ರ ಅಂತಿಮ ಪಟ್ಟಿಯ ಜೊತೆಗೆ ಅದರ ನಂತರ ಸೇರ್ಪಡೆ, ವರ್ಗಾವಣೆ ಮತ್ತು ಅಳಿಸಲಾದ ಮತದಾರರ ನವೀಕೃತ ಮಾಹಿತಿಯನ್ನು ಬಿಎಲ್ಒಗಳಿಗೆ ಒದಗಿಸಬೇಕು.
- ಎಲ್ಲಾ ಬಿಎಲ್ಒಗಳಿಗೆ ಏಕರೂಪದ ಮರುತರಬೇತಿ ನೀಡಬೇಕು.
- ಮತದಾರರಿಗೆ ಸರಳ ಭಾಷೆಯಲ್ಲಿ ಮಾರ್ಗದರ್ಶಿ ಪ್ರಕಟಿಸಬೇಕು.
- ಸಹಾಯವಾಣಿ ಮತ್ತು ತಾಲ್ಲೂಕು ಮಟ್ಟದ ನೆರವು ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.
- “ವೋಟರ್ ಐಡಿ ಇದ್ದರೂ ಹೆಸರು ಕಾಣಿಸದಿದ್ದರೆ ಏನು ಮಾಡಬೇಕು?” ಎಂಬ ಪ್ರಶ್ನೆಗೆ ಸ್ಪಷ್ಟ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು.
- ನೆಲಮಟ್ಟದ ಸಮಸ್ಯೆಗಳನ್ನು ಸಂಗ್ರಹಿಸಿ ತಕ್ಷಣ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು.
ಮತದಾರರ ಪಟ್ಟಿ ಎನ್ನುವುದು ಕೇವಲ ಆಡಳಿತಾತ್ಮಕ ದಾಖಲೆ ಅಲ್ಲ; ಅದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಅಧಿಕೃತ ಗುರುತು. ಆ ಪಟ್ಟಿಯಲ್ಲಿ ಉಂಟಾಗುವ ಯಾವುದೇ ಗೊಂದಲ ನೇರವಾಗಿ ಪ್ರಜಾಪ್ರಭುತ್ವದ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.
ಆದ್ದರಿಂದ SIR ಪ್ರಕ್ರಿಯೆಯ ಯಶಸ್ಸನ್ನು ಕೇವಲ ವಿತರಿಸಿದ ಫಾರಂಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಮತದಾರರು ಗೊಂದಲವಿಲ್ಲದೆ, ತಮ್ಮ ಹೆಸರು ಸರಿಯಾಗಿ ದಾಖಲಾಗಿರುವ ವಿಶ್ವಾಸದೊಂದಿಗೆ ಚುನಾವಣೆಯಲ್ಲಿ ಭಾಗವಹಿಸುವಂತಾಗುವುದೇ ನಿಜವಾದ ಯಶಸ್ಸಿನ ಮಾನದಂಡ.
ಚುನಾವಣಾ ಆಯೋಗದ ಉದ್ದೇಶ ನಿಸ್ಸಂದೇಹವಾಗಿ ಶ್ಲಾಘನೀಯ. ಆದರೆ ಅದರ ಅನುಷ್ಠಾನದಲ್ಲಿ ಕಾಣುತ್ತಿರುವ ಮಾಹಿತಿ ಕೊರತೆ, ತರಬೇತಿಯ ಅಭಾವ, ಹಳೆಯ ಪಟ್ಟಿಗಳ ಅವಲಂಬನೆ ಮತ್ತು ಸಾರ್ವಜನಿಕ ಸಂಪರ್ಕದ ದೌರ್ಬಲ್ಯಗಳನ್ನು ತಕ್ಷಣ ಸರಿಪಡಿಸದಿದ್ದರೆ, ಈ ಪ್ರಕ್ರಿಯೆ ಮತದಾರರ ವಿಶ್ವಾಸವನ್ನು ಹೆಚ್ಚಿಸುವ ಬದಲು ಗೊಂದಲವನ್ನು ಮತ್ತಷ್ಟು ವಿಸ್ತರಿಸುವ ಅಪಾಯವಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಶುಂಠಿ ಕೃಷಿ: ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಲಾಭದಾಯಕ ಬೆಳೆ; ಪರಿಸರಕ್ಕೆ ಎಚ್ಚರಿಕೆಯ ಗಂಟೆಯೂ ಹೌದು
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಅಮೂಲ್ಯ. ಆ ಮತದ ಹಿಂದೆ ನಿಂತಿರುವ ಪ್ರತಿಯೊಬ್ಬ ಮತದಾರನೂ ವ್ಯವಸ್ಥೆಯ ಮುಂದೆ ಗೊಂದಲದಲ್ಲಲ್ಲ, ವಿಶ್ವಾಸದಲ್ಲಿ ನಿಲ್ಲುವಂತೆ ಮಾಡುವುದು ಚುನಾವಣಾ ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ.
ಸಂಚಿಕೆ ಮುಂದುವರೆಯಲಿದೆ…





