ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ದೇಶದಲ್ಲಿಯೇ ಮಹತ್ವಪೂರ್ಣ ನಿರ್ಧಾರ ಇದಾಗಿದೆ. ರೋಸ್ಟರ್ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆದಿದೆ. ಎಡ, ಬಲ ಹಾಗೂ ಇತರೆ (ಸ್ಪೃಶ್ಯ) ಸಮುದಾಯಗಳಿಗೆ ಕ್ರಮವಾಗಿ ಶೇ.5.25, ಶೇ.5.25, ಶೇ.4.5 ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ಲಭಿಸಿದೆ. ಈ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವ ಹೈಕೋರ್ಟ್ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿಯನ್ನು ಮರು ನಿಗದಿಪಡಿಸಿ ಪರಿಶಿಷ್ಟ ಜಾತಿಗೆ 15% ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇ3 ರಷ್ಟು ಮೀಸಲಾತಿ ನೀಡಲಾಗಿದೆ” ಎಂದರು.
ಇದನ್ನು ಓದಿದ್ದೀರಾ? BREAKING NEWS | ಒಳಮೀಸಲಾತಿ ಹಂಚಿಕೆ: ಮೂರು ಸೂತ್ರಗಳ ಫೈನಲ್ ಮಾಡಿದ ಸಚಿವ ಸಂಪುಟ
” ಒಳಮೀಸಲಾತಿಗೆ ರಚಿಸಲಾಗಿದ್ದ ಕಾಯ್ದೆಗೆ ಅನುಗುಣವಾಗಿ 17 % ಮೀಸಲಾತಿಗೆ 6:6:5 ಇದ್ದರೆ, ಇದೀಗ 15 % ಮೀಸಲಾತಿಗೆ 5.3, 5.3 ಹಾಗೂ 4.4 ಮೀಸಲಾತಿಯನ್ನು ನಿಗದಿ ಮಾಡಿ ವರದಿ ನೀಡಲಾಗಿದೆ. ಅಂತಿಮವಾಗಿ ಸಚಿವ ಸಂಪುಟ ಸಭೆಯು ಎಡಗೈ ಸಂಬಂಧಿತ ಜಾತಿಗಳಿಗೆ 5.25, ಬಲಗೈ ಜಾತಿಗಳಿಗೆ 5.25 ಬೋವಿ , ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5 ಮೀಸಲಾತಿ ನೀಡಲು ತೀರ್ಮಾನಿಸಿದೆ” ಎಂದರು.
“ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ. ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಬೇಕು. ಶೇ. ಆರರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರೆಗೆ ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು” ಎಂದು ತಿಳಿಸಿದರು.
ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ನಿರ್ಧಾರ
“ಒಳಮೀಸಲಾತಿ ಕುರಿತು ಬಹುಕಾಲದಿಂದ ಅನೇಕ ಹೋರಾಟಗಳು ನಡೆದಿವೆ. ನಂತರ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳು ಸೇರಿದಂತೆ ಅಲೆಮಾರಿ ಸೇರಿದಂತೆ 59 ಜಾತಿಗಳ ಪ್ರತಿನಿಧಿಗಳು ಪಾಲ್ಗೊಂಡು ಒಳಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು. ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಣಾಳಿಕಾ ಸಮಿತಿಯಲ್ಲಿಯೂ ಒಳಮೀಸಲಾತಿಯನ್ನು ಸರ್ಕಾರ ನೀಡಲಿದೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದಿದ್ದರೆ ಮೀಸಲಾತಿಯ ಉದ್ದೇಶವೇ ವಿಫಲ: ಸಿದ್ದರಾಮಯ್ಯ
“ಸುಪ್ರೀಂ ಕೋರ್ಟ್ ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಆಯಾ ರಾಜ್ಯಗಳೇ ತೆಗೆದುಕೊಳ್ಳಬಹುದು ಎಂದು ಆದೇಶ ನೀಡಿದ ಕಾರಣ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಯಿತು. ಅವರು ನೀಡಿದ ವರದಿ ಆಧರಿಸಿ ಸಚಿವ ಸಂಪುಟವು ಪರಿಶಿಷ್ಟ ಜಾತಿಯ ಬಲ, ಎಡ ಸಮುದಾಯಗಳು ಹಾಗೂ ಇತರೆ ಅಲೆಮಾರಿ ಜಾತಿಗಳಿಗೆ ಕ್ರಮವಾಗಿ 6:6:5 ಮೀಸಲಾತಿ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಪರಿಶಿಷ್ಟ ಜಾತಿಗೆ ಒಟ್ಟು 24 % ಅಂದರೆ, ಶೇ 7% ರಷ್ಟು ಎಸ್‌ಟಿಗೆ ಹಾಗೂ 17% ಎಸ್‌ಸಿ ಸಮುದಾಯಗಳಿಗೆ ಮೀಸಲಿಡಲಾಯಿತು. ಹೀಗಾಗಿ ಒಟ್ಟು ಶೇ 56% ರಷ್ಟು ಮೀಸಲಾತಿ ನೀಡಿದಂತಾಯಿತು ನ್ಯಾಯಾಲಯವು ಇಂದಿರಾ ಸಹಾನಿ ಪ್ರಕರಣವನ್ನು ಉಲ್ಲೇಖಿಸಿ ಮೀಸಲಾತಿ ಶೇ 50 ರಷ್ಟು ಮೀರಬಾರದು ಎಂದು ಪುನರುಚ್ಛರಿಸಿತ್ತು” ಎಂದು ಸಿಎಂ ತಿಳಿಸಿದ್ದಾರೆ.
“ಆದರೆ ಈ ಮೀಸಲಾತಿಗೆ ಅಪಸ್ವರಗಳು ಎದ್ದ ನಂತರ ಗೊಂದಲ ನಿವಾರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ವರದಿಯನ್ನು ಪಡೆಯಲಾಗಿದೆ. ಅದರಂತೆ ಕೋರ್ಟ್ ಆದೇಶದ ಶೇಕಡ 50 ಮಿತಿಗೆ ಒಳಪಟ್ಟು ಇಂದಿನ ಸಚಿವ ಸಂಪುಟದಲ್ಲಿ ಎಡ, ಬಲ ಹಾಗೂ ಇತರೆ ಸಮುದಾಯಗಳಿಗೆ 5.25:5.25:4.5 ಮೀಸಲಾತಿ ಕಲ್ಪಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದರು.
ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭ: ಸಿಎಂ
“ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ, ತುರ್ತು ಕ್ರಮ ಕೈಗೊಳ್ಳಲಾಗುವುದು. ನೇಮಕಾತಿಗಳಲ್ಲಿ ಶೇಕಡ 50ರ ಮೀಸಲಾತಿಯು ನ್ಯಾಯಾಲಯವು ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ನಮ್ಮ ಸರ್ಕಾರವು ಈಗಾಗಲೇ ಶೇಕಡ 56ರ ಮೀಸಲಾತಿ ನೀಡಬೇಕೆನ್ನುವ ನಿರ್ಧಾರಕ್ಕೆ ಬದ್ಧವಾಗಿದೆ. ಸಿ ಕೆಟಗರಿಯಲ್ಲಿ ನೇಮಕಾತಿಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ.20ರಷ್ಟು 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಈಗ ಪ್ರಸಕ್ತ ತೀರ್ಮಾನದಂತೆ ಸಿ ಕೆಟಗರಿಗೆ 4.5 ಮೀಸಲಾತಿ ಕಲ್ಪಿಸಲಾಗಿದೆ” ಎಂದರು.
ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಗೆ ಬದ್ಧವಾಗಿದೆ. ನೀಡಿದ ವಚನದಂತೆ ನಡೆದು ಕೊಂಡಿದ್ದೇವೆ. ದಲಿತ ಸಂಘಟನೆಗಳು ಸೇರಿದಂತೆ ಇತರ ಸಮುದಾಯಗಳು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
“ನಮ್ಮ ಸರ್ಕಾರವು ಶೇಕಡ 24 ಮೀಸಲಾತಿಗೆ ಅಂದರೆ ಪರಿಶಿಷ್ಟ ಜಾತಿ- ಶೇಕಡ 17 ಮತ್ತು ಪರಿಶಿಷ್ಟ ಪಂಗಡ ಶೇಕಡಾ -7 ತೀರ್ಮಾನಕ್ಕೆ ಬದ್ಧವಾಗಿದೆ. ಭವಿಷ್ಯದಲ್ಲಿ ಶೇಕಡ 17ರಷ್ಟು ಮೀಸಲಾತಿ ಕಲ್ಪಿಸಬಹುದು ಎಂದು ಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ 6:6:5 ಮೀಸಲಾತಿ ತೀರ್ಮಾನದಂತೆ ಶೇಕಡ 6ನ್ನು ಬ್ಯಾಕ್ ಲಾಗ್ ಎಂದು ತೀರ್ಮಾನಿಸಲಾಗುವುದು” ಎಂದರು.





