ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ವಿಧಾನಸೌಧ, ಸುವರ್ಣಸೌಧ, ಮೈಸೂರು ಅರಮನೆ ಸೇರಿದಂತೆ ಹಲವು ಕಟ್ಟಡಗಳು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದೆ.
ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ ಮಾತ್ರವಲ್ಲದೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನ ರಥ, ಮಂಗಳೂರಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣ (ಪಿಂಕ್ ಲೈಟ್)ದ ಬೆಳಕಿನಲ್ಲಿ ಕಂಗೊಳಿಸಿದವು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿದ್ಯುದ್ದೀಪಾಲಂಕಾರ ಆಯೋಜಿಸುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ | ಫಲಾನುಭವಿಗಳ ಖಾತೆಗೆ ಹಣ ಬಂದಾಗಲೇ ಗ್ಯಾರಂಟಿ!
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಇದೇ ಆ.30ಕ್ಕೆ ಮೂರು ವರ್ಷಗಳನ್ನು ಪೂರೈಸಿದೆ.
ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ (PINK) ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಇದುವರೆಗೂ ಈ ಯೋಜನೆ ಅಡಿ 1.20 ಕೋಟಿ ಫಲನುಭವಿಗಳ ಖಾತೆಗೆ 76,500 ಕೋಟಿಗೂ ಹೆಚ್ಚು ಹಣ ಪಾವತಿಸಲಾಗಿದೆ ಎಂದು ಸರ್ಕಾರವು ತಿಳಿಸಿದೆ.




