ಮರೆಯಬಾರದ ಚೇತನ | ನಂಬಿದ ಆದರ್ಶದಂತೆ ಬದುಕಿದ ಚಂದ್ರಶೇಖರ ಹೊಸಮನಿ

Date:

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ವಿಮೋಚನಾ ಚಳವಳಿಯಿಂದ ಪ್ರಭಾವಿತರಾದ ಮುಂಬೈ ಕರ್ನಾಟಕ ಭಾಗದ ಅನೇಕರು ಅವರ ಹೋರಾಟಕ್ಕೆ ಕೈಜೋಡಿಸಿದ್ದರು. ಅಂಥವರಲ್ಲಿ ಚಂದ್ರಶೇಖರ ಹೊಸಮನಿ ಅವರೂ ಒಬ್ಬರು. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಬಾಬಾಸಾಹೇಬರಿಂದ ಪ್ರೇರಿತರಾಗಿದ್ದ ಅವರು ವಿಜಾಪುರ ಜಿಲ್ಲೆಯಲ್ಲಿ ಅಂಬೇಡ್ಕರ್ ಚಳುವಳಿಯು ಗಟ್ಟಿಗೊಳ್ಳುವುದಕ್ಕಾಗಿ ಇಡೀ ಬದುಕನ್ನು ಮುಡಿಪಾಗಿಟ್ಟರು. 70ರ ದಶಕದಲ್ಲಿ ‘ಪರಿವರ್ತಕ’ ಎಂಬ ಹೆಸರಿನ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಮೂಲಕ ಭಗವಾನ್ ಬುದ್ಧರ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಮನೆಮನೆಗೆ ತಲುಪಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡರು. ಬಾಬಾಸಾಹೇಬರ ವಿಚಾರಧಾರೆಯ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದರೂ ಆ ಕೃತಿಗಳು ಈಗ ಲಭ್ಯವಿಲ್ಲ.

ಮೂಲತಃ ಸಿಂದಗಿ ತಾಲೂಕಿನ ಆಲಮೇಲ ಗ್ರಾಮದವರಾದ ಚಂದ್ರಶೇಖರ ಹೊಸಮನಿಯವರು 1932ರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ತಂದೆ ಕಾಸಪ್ಪ, ತಾಯಿ ಲಕ್ಕಮ್ಮ. ಆ ಕಾಲದಲ್ಲಿಯೇ 24 ಎಕರೆ ಸ್ವಂತ ಜಮೀನು ಹೊಂದಿದ್ದ ಕಾಸಪ್ಪ ಅವರದು ಒಕ್ಕಲುತನದ ಕುಟುಂಬ. ಭೂಮಿ ಒಡೆತನವಿದ್ದರೂ ಹುಟ್ಟಿದ ಜಾತಿಯ ಕಾರಣಕ್ಕೆ ಅಸ್ಪೃಶ್ಯತೆಯು ಬೆನ್ನಿಗಂಟಿಕೊಂಡು ಬಂದಿತ್ತು. ಲಕ್ಕಮ್ಮನವರ ಅಣ್ಣ ಶಿವಣಗಿಯ ಜಾನಪ್ಪ ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿ ‘ಸಾಲಿ ಜಾನಪ್ಪ’ ಎಂದೇ ಪ್ರಖ್ಯಾತರಾಗಿದ್ದರು. ಅವರ ಪ್ರೇರಣೆಯಿಂದ ಅನಕ್ಷರಸ್ಥರಾಗಿದ್ದ ಕಾಸಪ್ಪ-ಲಕ್ಕಮ್ಮ ಅವರು ತಮ್ಮ ಹಿರಿಯ ಮಗ ಚಂದ್ರಶೇಖರನನ್ನು ಶಾಲೆಗೆ ಸೇರಿಸಿದರು. ಆಲಮೇಲದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಚಂದ್ರಶೇಖರ, ಹೈಸ್ಕೂಲು ಶಿಕ್ಷಣಕ್ಕಾಗಿ ವಿಜಾಪುರಕ್ಕೆ ಬಂದು, ಕಾಕಾ ಕಾರಖಾನೀಸರ ಹಾಸ್ಟೆಲಿನಲ್ಲಿದ್ದುಕೊಂಡು ಪ್ರತಿಷ್ಠಿತ ಪಿಡಿಜೆ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮತ್ತು ವಿಜಯ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದರು.

ಆ ಸಮಯದಲ್ಲಿ ಅಪ್ಪಟ ಗಾಂಧಿವಾದಿಯಾಗಿದ್ದ ಕಾಕಾ ಕಾರಖಾನೀಸರು ಮಹಾತ್ಮಾ ಗಾಂಧಿಯವರ ‘ಹರಿಜನ ಸೇವಕ ಸಂಘ’ದ ಅಡಿಯಲ್ಲಿ ಅಸ್ಪೃಶ್ಯ ಮಕ್ಕಳಿಗಾಗಿ ವಿಜಯಪುರದಲ್ಲಿ ಹಾಸ್ಟೆಲ್ ತೆರೆದಿದ್ದರು. ಅದನ್ನು ಕಾಕಾ ಬೋರ್ಡಿಂಗ್ ಎಂದೇ ಕರೆಯಲಾಗುತ್ತಿತ್ತು. ತುಂಬಾ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದ ಕಾಕಾ ಕಾರಖಾನೀಸರು ಮಕ್ಕಳಿಗೆ ಊಟ ಹಾಕುವುದರ ಜೊತೆಗೆ ಅಭ್ಯಾಸದಲ್ಲಿಯೂ ತೊಡಗಿಸುತ್ತಿದ್ದರು. ಚಂದ್ರಶೇಖರ ಹೊಸಮನಿ, ಸಿದ್ಧಾರ್ಥ ಅರಕೇರಿ, ಬಿ. ಶಂಕರಾನಂದರಂಥ ನಂತರ ದಿಗ್ಗಜ ದಲಿತ ನಾಯಕರೆನಿಸಿಕೊಂಡವರು ಕಾಕಾ ಹಾಸ್ಟೆಲಿನಿಂದಲೇ ಬಂದಿದ್ದವರು. ಗಾಂಧಿವಾದಿ ಕಾಕಾ ಕಾರಖಾನೀಸರ ಒಡನಾಟದಲ್ಲಿದ್ದ ಅವರೆಲ್ಲ ನಂತರ ಅಂಬೇಡ್ಕರವಾದಿಗಳಾಗಿ ರೂಪುಗೊಂಡರೆಂಬುದು ಆ ಕಾಲದ ಸೋಜಿಗ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಂದ್ರಶೇಖರ ಹೊಸಮನಿಯವರು ಬಾಲ್ಯದಿಂದಲೂ ಚುರುಕಾಗಿದ್ದರು. ಸುತ್ತಮುತ್ತಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರು ಆಲಮೇಲದಲ್ಲಿ ಆರನೆಯ ತರಗತಿ ಕಲಿಯುತ್ತಿರುವಾಗ ಒಂದು ಘಟನೆ ನಡೆಯಿತು. ಆಲಮೇಲವು ಆಗಲೇ ವ್ಯಾಪಾರೀ ಕೇಂದ್ರವೆಂದು ಕರೆಸಿಕೊಳ್ಳುತ್ತಿತ್ತು. ಶುಕ್ರವಾರ ಮತ್ತು ಶನಿವಾರ ಸಂತೆ ನೆರೆಯುತ್ತಿತ್ತು. ದನಗಳ ಸಂತೆ ಪ್ರಸಿದ್ಧವಾಗಿತ್ತು. ಅಲ್ಲಿ ಅಸ್ಪೃಶ್ಯತೆ ಆಚರಣೆಯೂ ಪ್ರಖರವಾಗಿತ್ತು. ಊರೊಳಗಿನ ದೊಡ್ಡ ಬಾವಿ ಇಡೀ ಊರಿಗೇ ಕುಡಿಯುವ ನೀರಿನ ಮೂಲವಾಗಿತ್ತು. ಅದು ಹೊಕ್ಕು ತುಂಬುವ ಬಾವಿ. ಸುತ್ತಲೂ ದೊಡ್ಡ ಕಂಪೌಂಡ ಕಟ್ಟಲಾಗಿತ್ತು. ಮೆಟ್ಟಲಿಳಿದು ಹೋಗಿ ನೀರು ತುಂಬಿಕೊಂಡು ಬರಬೇಕಾಗಿತ್ತು. ಆದರೆ ಅಸ್ಪೃಶ್ಯ ಜಾತಿಗಳವರಿಗೆ ಬಾವಿಯಲ್ಲಿ ನೀರು ತುಂಬುವುದಕ್ಕೆ ನಿಷೇಧವಿತ್ತು. ಮೇಲ್ಜಾತಿಯವರು ನೀರು ಎತ್ತಿ ಹಾಕಿದಾಗಲೇ ಇವರ ಕೊಡಗಳು ತುಂಬುತ್ತಿದ್ದವು. ಅಲ್ಲಿಯವರೆಗೆ ಬಾವಿಯ ಹತ್ತಿರ ಕಾಯಬೇಕಾಗಿತ್ತು. ಒಮ್ಮೆ ಚಂದ್ರಶೇಖರ ತನ್ನ ತಂಗಿಯನ್ನು ಕರೆದುಕೊಂಡು ಊರಿನ ಬಾವಿಗೆ ಹೋಗಿದ್ದ. ಬಹು ಹೊತ್ತಿನವರೆಗೆ ಮೇಲ್ಜಾತಿಯ ಯಾರೂ ನೀರಿಗೆ ಬರಲಿಲ್ಲ. ಧೈರ್ಯ ಮಾಡಿ ಇಬ್ಬರೂ ಬಾವಿಯೊಳಗೆ ಇಳಿದು ನೀರು ತುಂಬಿಕೊಂಡು ಮನೆಗೆ ಬಂದರು. ‘ಹೊಲೆಯರ ಹುಡುಗರು ಬಾವಿ ಮುಟ್ಟಿದ್ದಾರೆ’ ಎಂಬ ಸುದ್ದಿ ಊರ ತುಂಬಾ ಹಬ್ಬಿತು. ಊರ ಜನರೆಲ್ಲ ಬಾವಿಯ ಹತ್ತಿರ ಜಮಾಯಿಸಿದರು. ಕಾಸಪ್ಪನನ್ನೂ ಕರೆಸಿದರು. ನ್ಯಾಯ ಪಂಚಾಯತಿ ನಡೆದು ಕೊನೆಗೆ ಊರ ಪ್ರಮುಖರಾಗಿದ್ದ ಮರಾಠಾ ಸಮಾಜದ ಮುಖಂಡ ಮಾನಕರ ಎಂಬುವವರು ಅಸ್ಪೃಶ್ಯರಿಗೆ ಇನ್ನು ಮುಂದೆ ಬಾವಿಯನ್ನು ಮುಕ್ತಗೊಳಿಸುವ ನಿರ್ಧಾರ ಮಾಡಿ ಊರವರ ಮನವೊಲಿಸಿ, ಹೊಲೆಯರನ್ನು ಕರೆದು ಸಾರ್ವಜನಿಕವಾಗಿ ಬಾವಿಯೊಳಗೆ ಇಳಿಸಿ ನೀರು ತುಂಬಲು ಹಚ್ಚಿದರು. ಅಲ್ಲಿಂದ ಮುಂದೆ ಕೆರೆ, ಬಾವಿ, ಹೊಟೇಲು ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಅಸ್ಪೃಶ್ಯರಿಗೆ ಮುಕ್ತ ಪ್ರವೇಶ ಪ್ರಾರಂಭವಾಯಿತು. ಇದೊಂದು ಐತಿಹಾಸಿಕ ಘಟನೆ. ಅದು ತಮ್ಮ ಜೀವನದ ಅತ್ಯಂತ ಪ್ರಮುಖ ಕ್ಷಣವೆಂದು ಚಂದ್ರಶೇಖರ ಹೊಸಮನಿಯವರು ಸ್ಮರಿಸಿಕೊಳ್ಳುತ್ತಿದ್ದರು.

ಬಿ.ಎ. ಪದವಿ ಪಡೆದ ನಂತರ ಅನೇಕ ಸರಕಾರಿ ನೌಕರಿಗಳು ಚಂದ್ರಶೇಖರ ಹೊಸಮನಿಯವರ ಮನೆಬಾಗಿಲಿಗೆ ಬಂದವು. ಈಗಿನ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಕಾರವಾರ ಜಿಲ್ಲೆಯ ಹಳಿಯಾಳಗಳಲ್ಲಿ ಮುನಸಿಪಲ್ ಹೈಸ್ಕೂಲುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅಸ್ಪೃಶ್ಯ ಸಮುದಾಯದ ಹುಡುಗನೊಬ್ಬ ಬಿ.ಎ. ಪಾಸಾಗಿರುವ ಸುದ್ದಿ ತಿಳಿದ ಆಗಿನ ಕೆ.ಪಿ.ಎಸ್.ಸಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಆರ್. ಭರಣಯ್ಯ ಅವರು ಇವರನ್ನು ಕರೆಸಿಕೊಂಡು ‘ಮೈಸೂರು ಸ್ಟೇಟ್ ವೇರ್ ಹೌಸಿಂಗ್ ಕಾರ್ಪೋರೇಷನ್’ನ ಮ್ಯಾನೇಜರ ಹುದ್ದೆಗೆ ನೇಮಕ ಮಾಡಿದರು. (ನಂತರ ಚಂದ್ರಶೇಖರ ಹೊಸಮನಿಯವರು ಇದೇ ಆರ್. ಭರಣಯ್ಯ ಅವರ ಮಗಳು ನಾಗರತ್ನ ಅವರನ್ನು ತಮ್ಮ ಗೆಳೆಯ ಸಿದ್ಧಾರ್ಥ ಅರಕೇರಿಯವರ ಬಾಳಸಂಗಾತಿಯನ್ನಾಗಿಸಿ ವಿವಾಹ ನಡೆಸಿದರು. ಸಿದ್ಧಾರ್ಥ ಅರಕೇರಿಯವರು ಎಂ.ಎ. ಎಲ್.ಎಲ್.ಬಿ. ಪದವಿ ಪಡೆದು ಮುಂಬೈನಲ್ಲಿ ವಕೀಲಿ ವೃತ್ತಿಯಲ್ಲಿದ್ದರು).

ವೇರ್ ಹೌಸಿಂಗ್ ಕಾರ್ಪೋರೇಶನ್ ಅಧಿಕಾರಿಯಾಗಿ ಹಳಿಯಾಳ, ಸೇಡಂ, ಚಿತ್ತಾಪುರ, ಇಂಡಿ, ಜಮಖಂಡಿ ಮುಂತಾದೆಡೆ ಸೇವೆ ಸಲ್ಲಿಸುವಾಗ ಅನೇಕ ಅಂಬೇಡ್ಕರವಾದಿ ದಲಿತ ಮುಖಂಡರ ಸಂಪರ್ಕಕ್ಕೆ ಬಂದರು. ನಿಪ್ಪಾಣಿಯ ದತ್ತಾ ಅಪ್ಪಾರಾವ ಕಟ್ಟಿಯವರು ಆಗ ಆರ್ಪಿಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರು ೧೯೫೭ರಲ್ಲಿ ಚಿಕ್ಕೋಡಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಜಾಪುರದ ಹಾವಿನಾಳ ಗ್ರಾಮದ ಶಿವಪ್ಪ ಕಾಂಬಳೆ ಆರ್.ಪಿ.ಐ ಜಿಲ್ಲಾಧ್ಯಕ್ಷರಾಗಿದ್ದರು. ಇವರ ಒಡನಾಡಿಗಳಾಗಿದ್ದ ತೊರವಿಯ ಲಕ್ಕಪ್ಪ ಪೋತೆ, ಬಿಜ್ಜರಗಿಯ ರಾಮಚಂದ್ರ ಔದಿ, ಎಲ್‌ಎಸ್. ಮೂಕಿಹಾಳ, ಅಂಬೇಡ್ಕರ್ ಜೀವಿತ ಅವಧಿಯಲ್ಲಿ ಶಾಸಕರಾಗಿದ್ದ ರೇವಪ್ಪ ಕಾಳೆ, ಶಿಕ್ಷಕರಾಗಿದ್ದ ಜಿ.ಎಂ. ಗೌರ ಗುರೂಜಿ ಮುಂತಾದವರ ಒಡನಾಟದಲ್ಲಿದ್ದ ಚಂದ್ರಶೇಖರ ಹೊಸಮನಿಯವರು ಸರಕಾರಿ ಸೇವೆ ಮಾಡುತ್ತಲೇ ಆರ್.ಪಿ.ಐ ಬೆಳವಣಿಗೆಗೆ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಇಂಡಿಯಲ್ಲಿ ನೌಕರಿ ಮಾಡುವಾಗ ೧೯೬೭ರಲ್ಲಿ ತಮ್ಮ ಬಾಲ್ಯದ ಗೆಳೆಯ ಸಿದ್ಧಾರ್ಥ ಅರಕೇರಿಯವರನ್ನು ಕರೆತಂದು ಬಳ್ಳೊಳ್ಳಿ ಮೀಸಲು ಕ್ಷೇತ್ರಕ್ಕೆ ಆರ್.ಪಿ.ಐ. ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಮನೆಯೇ ಚುನಾವಣೆ ಕಚೇರಿಯಾಯಿತು. ಕಾರ್ಯಕರ್ತರು ಸೈಕಲ್ ಮೇಲೆ ಸಂಚರಿಸಿ ಪ್ರಚಾರ ಕಾರ್ಯ ಮಾಡಿದರು. ಸರಕಾರಿ ನೌಕರನಾಗಿ ರಾಜಕೀಯ ಮಾಡುತ್ತಿದ್ದಾರೆಂದು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಜೆ.ಎಲ್. ಕಬಾಡೆಯವರು ಮಾಡಿದ ಆರೋಪದ ಮೇರೆಗೆ ನಿಪ್ಪಾಣಿಗೆ ವರ್ಗ ಮಾಡಲಾಗುತ್ತದೆ. ಅಲ್ಲಿಗೆ ಹೋಗಿ ಹಾಜರಾಗಿ ರಜೆಯ ಮೇಲೆ ಬಂದು ಚುನಾವಣೆ ಪ್ರಚಾರದಲ್ಲಿ ತೊಡಗಿದರು. ಕೊನೆಗೆ ಅವರ ಶ್ರಮದ ಫಲವಾಗಿ ಸಿದ್ಧಾರ್ಥ ಅರಕೇರಿಯವರು ಶಾಸಕರಾಗಿ ಆಯ್ಕೆಯಾದರು.

1969ರಲ್ಲಿ ಸರ್ಕಾರಿ ನೌಕರಿಯನ್ನು ತ್ಯಜಿಸಿದ ಚಂದ್ರಶೇಖರ ಹೊಸಮನಿಯವರು ಸಮಾಜ ಸೇವೆಯಲ್ಲಿ ಸಂಪೂರ್ಣ ತೊಡಗಿಕೊಂಡರು. ರಾಜ್ಯದಲ್ಲಿ ಆರ್.ಪಿ.ಐ ಪಕ್ಷವನ್ನು ಗಟ್ಟಿಗೊಳಿಸಲು ಶ್ರಮಿಸಿದರು. ಆರ್.ಪಿ.ಐ. ಕರ್ನಾಟಕ ಘಟಕದ ಉಪಾಧ್ಯಕ್ಷರಾದರು. ಅಂಬೇಡ್ಕರ್ ಸಿದ್ಧಾಂತ ಮತ್ತು ಆರ್.ಪಿ.ಐ. ಸಂಘಟನೆ ಅವರ ಗುರಿಯಾಯಿತು. ‘ಪರಿವರ್ತಕ’ ಎಂಬ ಹೆಸರಿನ ವಾರಪತ್ರಿಕೆಯನ್ನು ಪ್ರಾರಂಭಿಸಿ ಭಗವಾನ ಬುದ್ಧ, ಫುಲೆ, ಶಾಹು, ಅಂಬೇಡ್ಕರ್ ವಿಚಾರಗಳನ್ನು ಮನೆಮನೆಗೆ ತಲುಪಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡರು. ಹಲವಾರು ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದರು. “ಚುನಾವಣೆಯಲ್ಲಿ ಗೆಲುವೇ ಮುಖ್ಯವಲ್ಲ, ಸ್ಪರ್ಧೆ ಮುಖ್ಯ” ಎಂಬುದು ಅವರ ವಾದವಾಗಿತ್ತು. ಇವರ ಸಂಘಟನಾ ಶಕ್ತಿಯನ್ನು ಗಮನಿಸಿದ ಆಗಿನ ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮನವೊಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿದ್ದ ಹಿಂದುಳಿದ ವರ್ಗಗಳ ನಾಯಕರೆಲ್ಲರ ಆಗ್ರಹದ ಮೇರೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅಲ್ಲಿಂದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆ ವಿಜಾಪುರ ಜಿಲ್ಲೆಯಲ್ಲಿ ಬಲಗೊಳ್ಳಲು ಚಂದ್ರಶೇಖರ ಹೊಸಮನಿಯವರು ವಹಿಸಿದ ಶ್ರಮ ಅವಿಸ್ಮರಣೀಯ.

1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿ.ಇ. ಚೌಧರಿ ಸಂಸದರಾಗಿ ಆಯ್ಕೆಯಾದರು. 1977 ಮತ್ತು 1980ರ ಲೋಕಸಭಾ ಚುನಾವಣೆಯಲ್ಲಿ ಕಾಳಿಂಗಪ್ಪ ಚೌಧರಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಗೆಲುವಿನ ಹಿಂದೆ ಚಂದ್ರಶೇಖರ ಹೊಸಮನಿಯವರ ಸಂಘಟನಾ ಚಾತುರ್ಯವಿತ್ತು. ಕಾಳಿಂಗಪ್ಪ ಚೌಧರಿ ಮತ್ತು ಬಿ. ಬಸವಲಿಂಗಪ್ಪ ಅವರ ಬೆಂಬಲದಿಂದ 1978ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳೊಳ್ಳಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಚಂದ್ರಶೇಖರ ಹೊಸಮನಿಯವರು ಅಲ್ಪ ಅಂತರದಲ್ಲಿ ಸೋತರು. ಹಣದ ಕೊರತೆ ಮತ್ತು ಮೇಲ್ಜಾತಿಗಳ ಪ್ರಬಲ ವಿರೋಧ ಈ ಸೋಲಿಗೆ ಕಾರಣವಾಯಿತು. ಅಚ್ಚರಿಯ ಸಂಗತಿಯೆಂದರೆ ಈ ಚುನಾವಣೆಯಲ್ಲಿ ಅವರ ಆಪ್ತಮಿತ್ರ ಸಿದ್ಧಾರ್ಥ ಅರಕೇರಿಯವರೇ ಇವರಿಗೆ ಎದುರಾಳಿಯಾಗಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು.

ಸಂಸದರಾಗಿದ್ದ ಕಾಳಿಂಗಪ್ಪ ಚೌಧರಿಯವರ ಅಕಾಲ ನಿಧನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಬದಲಾವಣೆಗಳ ಕಾರಣ, ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ಸ್ವಾಭಿಮಾನಿ ಚಂದ್ರಶೇಖರ ಹೊಸಮನಿಯವರು ಕಾಂಗ್ರೆಸ್ ಪಕ್ಷ ತೊರೆದು ಮತ್ತೆ ಆರ್.ಪಿ.ಐ.ಗೆ ಮರಳಿದರು. ಭೂನ್ಯಾಯ ಮಂಡಳಿ ಸದಸ್ಯರಾಗಿ, ಶಿಕ್ಷಕರ ಆಯ್ಕೆ ಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. ದೇವರಾಜ ಅರಸು ಅವರ ಭೂಸುಧಾರಣಾ ಕಾಯ್ದೆಯನ್ವಯ ನೂರಾರು ಭೂಹೀನ ದಲಿತರಿಗೆ ಭೂಮಿ ಸಿಗುವಂತೆ ಮಾಡಿದರು. ಸ್ವತಃ ತಾವೇ ಭೂಹೀನರಾದರು. ನೂರಾರು ಮಂದಿಗೆ ಸರಕಾರಿ ಉದ್ಯೋಗ ಕೊಡಿಸಿದರು. ದಲಿತ ಮಕ್ಕಳು ವಿದ್ಯಾವಂತರಾಗಲು ಸಹಾಯ ಮಾಡಿದರು. ನೌಕರಿ ಕೊಡಿಸುವ ಅಧಿಕಾರ ತಮ್ಮ ಬಳಿಯೇ ಇದ್ದಾಗಲೂ ತಮ್ಮ ಮಕ್ಕಳಿಗೆ ಸರಕಾರಿ ನೌಕರಿ ಕೊಡಿಸಲಿಲ್ಲ. ಮೇಣದ ಬತ್ತಿಯಂತೆ ತಮ್ಮನ್ನು ತಾವೇ ಸುಟ್ಟುಕೊಂಡು ಸಮಾಜದ ಕಟ್ಟಕಡೆಯ ಜನರಿಗೆ ಬೆಳಕಾದರು.

ತಮ್ಮದೇ ಸ್ವಂತ ಮುದ್ರಣಾಲಯ, ಪ್ರಕಾಶನ ಸಂಸ್ಥೆ, ಶಿಕ್ಷಣ ಸಂಸ್ಥೆ, ಪತ್ರಿಕೆಗಳಿರಬೇಕು. ಬಾಬಾಸಾಹೇಬರು ತೋರಿಸಿದ ಭಗವಾನ್ ಬುದ್ಧರತ್ತ ಜನರ ಒಲವು ಹೆಚ್ಚಿಸಲು ಬುದ್ಧವಿಹಾರಗಳನ್ನು ಸ್ಥಾಪನೆ ಮಾಡಬೇಕು ಎಂಬಿತ್ಯಾದಿ ಕನಸುಗಳನ್ನು ಚಂದ್ರಶೇಖರ ಹೊಸಮನಿ ಕಂಡಿದ್ದರು. ತಮ್ಮದೇ ಮುದ್ರಣಾಲಯದಲ್ಲಿ, ತಮ್ಮದೇ ಪತ್ರಿಕೆಯ ಮೂಲಕ ಬಾಬಾಸಾಹೇಬರ ತತ್ವ-ಸಿದ್ಧಾಂತಗಳ ಪ್ರಚಾರ ಮಾಡಿದರು. ಮಕ್ಕಳಿಗೆ ಪ್ರಾಮಾಣಿಕವಾಗಿ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಅವರ ಕುಟುಂಬ ವರ್ಗ ಸಾಗುತ್ತಿದೆ. ಅವರ ಮಗ ಅನಿಲ ಹೊಸಮನಿಯವರು ಪತ್ರಕರ್ತರಾಗಿ, ಸಾಮಾಜಿಕ ಕಾಯ್ಕರ್ತರಾಗಿ, ಬುದ್ಧಮಾರ್ಗಿಯಾಗಿ ಮುನ್ನಡೆಯುತ್ತಿದ್ದಾರೆ. ಅವರ ಹೆಸರಿನಲ್ಲಿ ‘ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ’ ಪ್ರಶಸ್ತಿಯನ್ನು ಮೇ ಸಾಹಿತ್ಯ ಮೇಳದಲ್ಲಿ ಕೊಡುತ್ತಿದ್ದಾರೆ. ಈ ಸಲ ಹಿರಿಯ ಪತ್ರಕರ್ತ, ಹೋರಾಟಗಾರ, ಸಂಘಟಕ ಇಂದೂಧರ ಹೊನ್ನಾಪುರ ಅವರಿಗೆ ಈ ಪ್ರಶಸ್ತಿ ಕೊಡುತ್ತಿರುವುದು `ಮೇ ಸಾಹಿತ್ಯ ಮೇಳ ಬಳಗ’ಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನ ಪರಿಷತ್ | ನೂತನವಾಗಿ ಆಯ್ಕೆಯಾದ 17 ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ವಿಧಾನ ಪರಿಷತ್​ಗೆ ನೂತನವಾಗಿ ಆಯ್ಕೆಯಾದ 17 ಸದಸ್ಯರು ಸೋಮವಾರ (ಜೂ.24) ಪ್ರಮಾಣ...

ಕಲಬುರಗಿ: ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೋಮವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು,...

ಭದ್ರತೆ ದೃಷ್ಟಿಯಿಂದ ನಟ ದರ್ಶನ್‌ ಬೇರೆ ಜೈಲಿಗೆ ವರ್ಗಾವಣೆ ಸಾಧ್ಯತೆ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ...

ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್‌...