ಮಾನವೀಯತೆಗೂ SIRಗೂ ಸಂಬಂಧವೇನು? ಪ್ರಜಾಪ್ರಭುತ್ವದ ಹಕ್ಕು, ದಾಖಲೆಗಳ ಗೊಂದಲ-ಉತ್ತರ ಸಿಗದ ಪ್ರಶ್ನೆಗಳು

Date:

ಸಮಗ್ರ ಮತದಾರರ ವಿಶೇಷ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಮೂಲ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದು. ಮೃತರು, ಸ್ಥಳಾಂತರಗೊಂಡವರು, ನಕಲಿ ಹೆಸರುಗಳು ಅಥವಾ ಅನರ್ಹ ದಾಖಲೆಗಳನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಚುನಾವಣಾ ಆಯೋಗದ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆದರೆ ಈ ಪ್ರಕ್ರಿಯೆ ಅನುಷ್ಠಾನಗೊಳ್ಳುವ ರೀತಿಯ ಬಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಕೇಳಿಬರುತ್ತಿರುವ ಅನುಭವಗಳು ಮತ್ತು ಪ್ರಶ್ನೆಗಳು ಕೇವಲ ಆಡಳಿತಾತ್ಮಕ ಸಮಸ್ಯೆಗಳಲ್ಲ; ಅವು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನೇ ಸ್ಪರ್ಶಿಸುವಂತಿವೆ.

- Advertisement -

ಭಾರತದ ಸಂವಿಧಾನವು ಎಲ್ಲ ನಾಗರಿಕರಿಗೂ ಸಮಾನತೆ, ನ್ಯಾಯ ಮತ್ತು ಕಾನೂನಿನ ಮುಂದೆ ಸಮಾನ ಅವಕಾಶಗಳನ್ನು ನೀಡುವ ಆಶಯ ಹೊಂದಿದೆ. ಮತದಾನದ ಹಕ್ಕು ಸಂವಿಧಾನದಲ್ಲಿ ನೇರವಾಗಿ ಮೂಲಭೂತ ಹಕ್ಕಾಗಿ ಉಲ್ಲೇಖವಾಗದಿದ್ದರೂ, ಅದು ಜನಪ್ರತಿನಿಧಿಗಳ ಕಾಯ್ದೆ, 1950 ಮತ್ತು 1951ರಡಿ ರಕ್ಷಿಸಲ್ಪಟ್ಟಿರುವ ಅತ್ಯಂತ ಮಹತ್ವದ ಶಾಸನಬದ್ಧ ಹಕ್ಕಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸುವುದು ಅಥವಾ ತೆಗೆದುಹಾಕುವುದು ಸಂಪೂರ್ಣವಾಗಿ ದಾಖಲೆ, ಕಾನೂನು ಮತ್ತು ನೈಸರ್ಗಿಕ ನ್ಯಾಯದ ತತ್ವಗಳ ಆಧಾರದ ಮೇಲೆಯೇ ನಡೆಯಬೇಕು. ಈ ಹಿನ್ನೆಲೆಯಲ್ಲಿ ‘ಮಾನವೀಯತೆ’ ಎಂಬ ಪದಕ್ಕೆ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಎಷ್ಟು ಸ್ಥಾನವಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಮಾನವೀಯತೆ’ ಹೆಸರಿನಲ್ಲಿ ಫಾರಂ ಭರ್ತಿ ಮಾಡಿದರೆ ಅದು ಸಹಾಯವೇ ಅಥವಾ ಅಪಾಯವೇ?

ಮೈಸೂರು ನಗರದಲ್ಲಿ ಕೇಳಿಬಂದಿರುವ ಒಂದು ಘಟನೆಯು ಈ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿ ಇದ್ದ ಮತದಾರರ ಮನೆಗೆ BLO ಭೇಟಿ ನೀಡಿದ್ದಾರೆ. ಮನೆಗೆ ಯಾರೂ ಸಿಗದ ಕಾರಣ ನೆರೆಹೊರೆಯವರಿಂದ ಮಾಹಿತಿ ಪಡೆದು ಹಿಂದಿರುಗಿದ್ದಾರೆ ಎನ್ನಲಾಗಿದೆ. ನಂತರ ಮತದಾರರು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ನೀವು ಬ್ಯುಸಿಯಾಗಿರುತ್ತೀರಿ, ಮಾನವೀಯತೆಯ ದೃಷ್ಟಿಯಿಂದ ನಾನೇ ನಿಮ್ಮ ಎನ್ಯುಮರೇಷನ್ ಫಾರಂ ಭರ್ತಿ ಮಾಡಿದ್ದೇನೆ” ಎಂದು BLO ಹೇಳಿರುವುದಾಗಿ ತಿಳಿದುಬಂದಿದೆ.

ಇಲ್ಲಿ ಉದ್ಭವಿಸುವ ಮೊದಲ ಪ್ರಶ್ನೆ – ಮತದಾರರ ಆಧಾರ್ ಸಂಖ್ಯೆ, EPIC ಸಂಖ್ಯೆ, ಜನ್ಮ ವಿವರ, ಕುಟುಂಬದ ಮಾಹಿತಿ, ಸಂಬಂಧಿತ ದಾಖಲೆಗಳು ಅಥವಾ ವ್ಯಕ್ತಿಯ ದೃಢೀಕರಣವಿಲ್ಲದೆ ಫಾರಂ ಹೇಗೆ ಪೂರ್ಣಗೊಂಡಿತು? ವ್ಯಕ್ತಿಯೇ ನೀಡದ ಮಾಹಿತಿಯನ್ನು ಯಾರು ಯಾವ ಆಧಾರದ ಮೇಲೆ ದಾಖಲಿಸಿದರು? ಮಾನವೀಯತೆ ಎಂದರೆ ವ್ಯಕ್ತಿಯ ಪರವಾಗಿ ಊಹಿಸಿ ಮಾಹಿತಿ ಬರೆಯುವುದೇ, ಅಥವಾ ವ್ಯಕ್ತಿಗೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ಪರಿಶೀಲಿಸಿ ದಾಖಲೆ ಮಾಡಿಕೊಳ್ಳುವುದೇ?

ಚುನಾವಣಾ ಪ್ರಕ್ರಿಯೆಯಲ್ಲಿ ಸಹಾನುಭೂತಿ ಇರಬಹುದು; ಆದರೆ ನಿಖರತೆಯನ್ನು ಬಿಟ್ಟು ಸಹಾನುಭೂತಿಯನ್ನು ಮುಂದಿಟ್ಟರೆ ಅದರ ಪರಿಣಾಮ ಅತ್ಯಂತ ಗಂಭೀರವಾಗಬಹುದು. ತಪ್ಪಾದ ಮಾಹಿತಿ ದಾಖಲೆಯಾದರೆ ಅದರ ಹೊರೆ ಅಂತಿಮವಾಗಿ ಮತದಾರನೇ ಹೊರುತ್ತಾನೆ. ಭವಿಷ್ಯದಲ್ಲಿ ನೋಟಿಸ್ ಬಂದಾಗ, ಆ ಮಾಹಿತಿಯನ್ನು ತಿದ್ದಿಕೊಳ್ಳಲು ಸಾಕಷ್ಟು ದಾಖಲೆಗಳಿಲ್ಲದಿದ್ದರೆ ಮತದಾರನೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಉಂಟಾಗಬಹುದು. ಹಾಗಿದ್ದರೆ ಇಲ್ಲಿ ‘ಮಾನವೀಯತೆ’ ಮತದಾರರ ಹಕ್ಕನ್ನು ಕಾಪಾಡುತ್ತಿದೆಯೇ, ಅಥವಾ ಅಪಾಯಕ್ಕೆ ತಳ್ಳುತ್ತಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

2002ರ ದಾಖಲೆ ಕಾಣದಿದ್ದರೆ ಮತದಾರನ ಅಸ್ತಿತ್ವವೇ ಪ್ರಶ್ನೆಯೇ?

ಮೈಸೂರಿನ ಹೂಟಗಳ್ಳಿ ವ್ಯಾಪ್ತಿಯ ಕೂರ್ಗಳ್ಳಿ ಪ್ರದೇಶದಲ್ಲಿ ಐದು ಕುಟುಂಬಗಳ ಕುರಿತು ಕೇಳಿಬಂದಿರುವ ಮಾಹಿತಿ ಇನ್ನೊಂದು ಗಂಭೀರ ಸಮಸ್ಯೆಯನ್ನು ಎತ್ತಿಹಿಡಿಯುತ್ತದೆ. ಸ್ಥಳೀಯರೇ ಆಗಿರುವ ಈ ಕುಟುಂಬಗಳು ಹಲವು ವರ್ಷಗಳಿಂದ ಅಲ್ಲೇ ವಾಸಿಸುತ್ತಿವೆ. ಅವರ ಬಳಿ ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿವೆ. 2002ರ ಚುನಾವಣೆಯಲ್ಲಿಯೂ ಮತ ಚಲಾಯಿಸಿರುವ ದಾಖಲೆಗಳಿವೆ ಎಂದು ಹೇಳಲಾಗುತ್ತಿದೆ.

ಆದರೆ ಹಳೆಯ ದಾಖಲೆಗಳನ್ನು ಪರಿಶೀಲಿಸುವ ವೇಳೆ 123 ಮತ್ತು 125 ಭಾಗ ಸಂಖ್ಯೆಗಳು ಲಭ್ಯವಾಗುತ್ತಿದ್ದು, 124ನೇ ಭಾಗದ ಮಾಹಿತಿ ಕಾಣುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬೇರೆ ಭಾಗ ಸಂಖ್ಯೆಗಳಲ್ಲಿಯೂ ಹುಡುಕಿದರೂ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ.

ಒಂದು ಆಡಳಿತಾತ್ಮಕ ದಾಖಲೆ ಕಾಣೆಯಾಗಿರುವುದು ನಾಗರಿಕನ ತಪ್ಪೇ? ಸರ್ಕಾರದ ದಾಖಲೆಗಳ ದೋಷಕ್ಕೆ ಮತದಾರನೇ ಹೊಣೆಗಾರನೇ? ಸರ್ಕಾರದ ದಾಖಲೆಗಳಲ್ಲಿ ಉಂಟಾಗಿರುವ ತಾಂತ್ರಿಕ ಅಥವಾ ಆಡಳಿತಾತ್ಮಕ ಕೊರತೆಯ ಪರಿಣಾಮವಾಗಿ ಮತದಾರ ತನ್ನ ಅಸ್ತಿತ್ವವನ್ನೇ ಮತ್ತೆ ಸಾಬೀತುಪಡಿಸಬೇಕಾದರೆ ಅದು ನ್ಯಾಯೋಚಿತ ಪ್ರಕ್ರಿಯೆಯೇ ಎಂಬ ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ.

ಸಾಧಕರ ಹೆಸರಿನ ಮುಂದೆ ‘ಡಾ.’ ಸೇರಿದ್ದರೆ ಅದು ಅಪರಾಧವೇ?

ಸಮಾಜದಲ್ಲಿ ತಮ್ಮದೇ ಆದ ಸಾಧನೆಯ ಮೂಲಕ ಗೌರವ ಪಡೆದ ಅನೇಕ ಮಂದಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕಲಾವಿದರೊಬ್ಬರಿಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರು ಮಾಡಿರುವವರು. ಆದರೆ ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ. ಅವರ ತಂದೆ-ತಾಯಿಯೂ ವಿದ್ಯಾವಂತರಾಗಿರಲಿಲ್ಲ.

2002ರಲ್ಲಿ ಅವರು ಮತದಾನ ಮಾಡಿದ್ದಾರೆ. ಆ ಕಾಲದ ದಾಖಲೆಗಳಲ್ಲಿ ಅವರ ಹೆಸರಿನ ಮುಂದೆ ‘ಡಾ.’ ಇರಲಿಲ್ಲ. ಬಳಿಕ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್‌ನಿಂದ ಹೆಸರಿನ ಮುಂದೆ ‘ಡಾ.’ ಸೇರಿದೆ.

ಈಗ ಪ್ರಶ್ನೆ ಏನೆಂದರೆ, ಹಳೆಯ ದಾಖಲೆಯಲ್ಲಿ ಹೆಸರು ಮಾತ್ರ ಇದ್ದು, ಹೊಸ ದಾಖಲೆಯಲ್ಲಿ ‘ಡಾ.’ ಸೇರಿದ್ದರೆ ಅದು ಹೆಸರು ವ್ಯತ್ಯಾಸವೇ? ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ದಾಖಲೆಯನ್ನು ಪೂರಕ ದಾಖಲೆಯಾಗಿ ಪರಿಗಣಿಸಲಾಗುತ್ತದೆಯೇ? ತಂದೆ-ತಾಯಿಯ ದಾಖಲೆಗಳಿಲ್ಲದಿರುವ ಸಂದರ್ಭದಲ್ಲಿ, ಅವರ ಹೆಸರಿನ ನಿರಂತರತೆಯನ್ನು ಯಾವ ದಾಖಲೆಯ ಮೂಲಕ ಸಾಬೀತುಪಡಿಸಬೇಕು? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗದೆ ಹಲವರು ಗೊಂದಲದಲ್ಲಿದ್ದಾರೆ.

ಹೆಸರು ಬದಲಾಗುತ್ತಾ ಬಂದ ಜೀವನ, ಆದರೆ ದಾಖಲೆಗಳು ಒಂದೇ ಮಾದರಿಯಲ್ಲ

ಮತ್ತೊಂದು ಉದಾಹರಣೆ ನಿವೃತ್ತ ಪ್ರಾಧ್ಯಾಪಕರದು. ಬಾಲ್ಯದಲ್ಲಿ ಶಾಲಾ ದಾಖಲೆಯಲ್ಲಿ ಕೇವಲ ಹೆಸರು ಮಾತ್ರ ಇತ್ತು. ಕಾಲೇಜು ಶಿಕ್ಷಣದ ವೇಳೆಗೆ ಇನಿಷಿಯಲ್ ಸೇರಿತು. ಉದ್ಯೋಗ ಸಿಕ್ಕ ನಂತರ ‘ಪ್ರೊ.’ ಎಂಬ ಗೌರವ ಸೂಚಕ ಪದ ಬಳಕೆಗೆ ಬಂತು. ನಂತರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ ಮೇಲೆ ‘ಪ್ರೊ.’ ಬದಲಿಗೆ ‘ಡಾ.’ ಬಳಕೆಯಾಗತೊಡಗಿತು.

ಈಗ ಯಾವ ದಾಖಲೆ ಸಲ್ಲಿಸಬೇಕು? ಶಾಲಾ ದಾಖಲೆ ಕೊಡಬೇಕೇ? ಉದ್ಯೋಗದ ದಾಖಲೆಯಲ್ಲಿ ಇರುವ ‘ಪ್ರೊ.’ ಹೆಸರಿನ ದಾಖಲೆ ಕೊಡಬೇಕೇ? ಅಥವಾ ವಿಶ್ವವಿದ್ಯಾಲಯದ ‘ಡಾ.’ ಹೆಸರಿನ ದಾಖಲೆಯನ್ನು ಕೊಡಬೇಕೇ? ವ್ಯಕ್ತಿಯ ಜೀವನದಲ್ಲಿ ಸಹಜವಾಗಿ ಸಂಭವಿಸಿದ ಈ ಬದಲಾವಣೆಗಳು ಕಾನೂನು ಸಮಸ್ಯೆಯಾಗಿ ಪರಿಣಮಿಸುವುದು ಆಡಳಿತದ ಉದ್ದೇಶವಾಗಿರಬಾರದು. ದಾಖಲೆಗಳ ಉದ್ದೇಶ ವ್ಯಕ್ತಿಯ ಗುರುತನ್ನು ದೃಢೀಕರಿಸುವುದೇ ಹೊರತು, ಗೌರವ ಸೂಚಕ ಪದಗಳನ್ನು ಆಧರಿಸಿ ಅನುಮಾನಿಸುವುದಲ್ಲ.

ಸಾಧನೆಯ ದಾಖಲೆಗಿಂತ ದಾಖಲೆಗಳ ಸಾಧನೆ ಮುಖ್ಯವಾಗಿಬಿಟ್ಟಿದೆಯೇ?

ವೈದ್ಯಕೀಯ ಪದವಿ ಪಡೆದವರು ಅಥವಾ ಪಿಎಚ್‌ಡಿ ಮಾಡಿದವರು ತಮ್ಮ ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ತೋರಿಸಬಹುದು. ಆದರೆ ಗೌರವ ಡಾಕ್ಟರೇಟ್ ಪಡೆದ ಅನೇಕ ಸಾಧಕರ ಬಳಿ ಹೆಸರು ಬದಲಾವಣೆಗೆ ಸಂಬಂಧಿಸಿದ ಪ್ರತಿಯೊಂದು ಹಂತದ ದಾಖಲೆಗಳು ಇರಲೇಬೇಕೆಂಬ ನಿಯಮವಿಲ್ಲ.

ಇಂದು ಪ್ರಶ್ನೆಯಾಗಿರುವುದು ಸಾಧನೆಯ ಮಾನ್ಯತೆ ಅಲ್ಲ; ದಾಖಲೆಗಳ ಹೊಂದಾಣಿಕೆ. ಒಬ್ಬ ವ್ಯಕ್ತಿ ಈ ದೇಶದಲ್ಲಿ ಹುಟ್ಟಿ, ಬದುಕಿ, ಸಮಾಜಕ್ಕೆ ಕೊಡುಗೆ ನೀಡಿ, ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಂದ ಗೌರವ ಪಡೆದು, ಚುನಾವಣೆಯಲ್ಲಿ ಮತ ಹಾಕಿ ಬಂದಿದ್ದರೂ, ಇಂದು ‘ನಾನು ಈ ದೇಶದ ಮತದಾರ’ ಎಂದು ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾದರೆ ಅದು ಕೇವಲ ಆಡಳಿತಾತ್ಮಕ ವಿಚಾರವಾಗಿರದೆ, ಪ್ರಜಾಪ್ರಭುತ್ವದ ವಿಶ್ವಾಸವನ್ನೇ ಪ್ರಶ್ನಿಸುವ ಸಂಗತಿಯಾಗಿದೆ.

BLOಗಳಿಗೆ ಸಮರ್ಪಕ ತರಬೇತಿ ಸಿಕ್ಕಿದೆಯೇ?

ಎಸ್‌ಐಆರ್ ಪ್ರಕ್ರಿಯೆಯ ಯಶಸ್ಸು ಕೇವಲ ಫಾರಂ ವಿತರಣೆ ಅಥವಾ ಡಿಜಿಟಲೀಕರಣದ ಶೇಕಡಾವಾರು ಮೇಲೆ ನಿರ್ಧಾರವಾಗುವುದಿಲ್ಲ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ BLOಗಳೇ ಈ ಪ್ರಕ್ರಿಯೆಯ ಪ್ರಮುಖ ಕೊಂಡಿ. ಅವರಿಗೆ ಪ್ರತಿಯೊಂದು ಕಾನೂನು ಪ್ರಶ್ನೆ, ಹೆಸರು ಬದಲಾವಣೆ, ದತ್ತು, ಮರುಮದುವೆ, ಧಾರ್ಮಿಕ ಮತಾಂತರ, ಗೌರವ ಪದವಿ, ಹಳೆಯ ದಾಖಲೆಗಳ ವ್ಯತ್ಯಾಸ, ದಾಖಲೆಗಳ ಕೊರತೆ ಇತ್ಯಾದಿ ವಿಷಯಗಳಲ್ಲಿ ಸ್ಪಷ್ಟ ಮಾರ್ಗಸೂಚಿ ಮತ್ತು ತರಬೇತಿ ಇಲ್ಲದಿದ್ದರೆ ನೆಲಮಟ್ಟದಲ್ಲಿ ಗೊಂದಲ ಉಂಟಾಗುವುದು ಸಹಜ.

ಒಬ್ಬ BLOಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಗೊತ್ತಿರಬೇಕೆಂಬ ನಿರೀಕ್ಷೆ ವಾಸ್ತವಿಕವಲ್ಲ. ಆದರೆ ಅವರಿಗೆ ಸರಿಯಾದ ತರಬೇತಿ, ಲಿಖಿತ ಮಾರ್ಗಸೂಚಿ ಮತ್ತು ತಕ್ಷಣದ ತಾಂತ್ರಿಕ ನೆರವು ದೊರೆಯಬೇಕು. ಇಲ್ಲವಾದರೆ ಪ್ರತಿಯೊಬ್ಬ BLO ತನ್ನದೇ ವ್ಯಾಖ್ಯಾನದಲ್ಲಿ ಕೆಲಸ ಮಾಡುವ ಅಪಾಯವಿದೆ.

ಪ್ರಜಾಪ್ರಭುತ್ವದಲ್ಲಿ ನಿಖರತೆ ಮುಖ್ಯವೇ, ಸಂಖ್ಯೆಗಳ ಸಾಧನೆ ಮುಖ್ಯವೇ?

ಇತ್ತೀಚಿನ ದಿನಗಳಲ್ಲಿ ವಿವಿಧ ಜಿಲ್ಲೆಗಳು ಶೇ.100 ಫಾರಂ ವಿತರಣೆ, ಶೇ.100 ಡಿಜಿಟಲೀಕರಣ ಎಂಬ ಸಾಧನೆಗಳನ್ನು ಘೋಷಿಸುತ್ತಿವೆ. ಆದರೆ ನೆಲಮಟ್ಟದಲ್ಲಿ ದಾಖಲೆಗಳ ಗೊಂದಲ, 2002ರ ಮಾಹಿತಿ ಕಾಣೆಯಾಗಿರುವ ಪ್ರಕರಣಗಳು, ಹೆಸರು ಬದಲಾವಣೆಯ ಸಮಸ್ಯೆಗಳು, ವ್ಯಕ್ತಿಯನ್ನು ಭೇಟಿ ಮಾಡದೆ ಫಾರಂ ಭರ್ತಿ ಮಾಡಿದ ಆರೋಪಗಳು ಕೇಳಿಬರುತ್ತಿದ್ದರೆ ಕೇವಲ ಶೇಕಡಾವಾರು ಸಾಧನೆಗಳನ್ನು ಯಶಸ್ಸಿನ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಯಶಸ್ಸು ಎಂದರೆ ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕು ಸುರಕ್ಷಿತವಾಗಿರುವುದು. ಪ್ರತಿಯೊಬ್ಬ ನಾಗರಿಕನಿಗೆ ತನ್ನ ಮಾತು ಹೇಳುವ ಅವಕಾಶ ದೊರೆಯುವುದು. ತಪ್ಪಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸಮರ್ಪಕ ವ್ಯವಸ್ಥೆ ಇರುವುದು. ಆಡಳಿತದ ಗುರಿ ಸಂಖ್ಯೆಗಳ ಸಾಧನೆಯಾಗಿರದೆ, ನಾಗರಿಕರ ವಿಶ್ವಾಸ ಗಳಿಸುವುದಾಗಿರಬೇಕು.

ಉತ್ತರಿಸಬೇಕಿರುವ ಪ್ರಶ್ನೆಗಳು

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೆಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಅಗತ್ಯವಾಗಿದೆ. ವ್ಯಕ್ತಿಯ ಸಮ್ಮುಖವಿಲ್ಲದೆ ಅಥವಾ ದೃಢೀಕರಣವಿಲ್ಲದೆ ಫಾರಂ ಭರ್ತಿ ಮಾಡುವುದು ನಿಯಮಬದ್ಧವೇ? 2002ರ ದಾಖಲೆಗಳು ಆಡಳಿತದ ದೋಷದಿಂದ ಕಾಣೆಯಾಗಿದ್ದರೆ ಅದರ ಹೊಣೆ ಯಾರದು? ಗೌರವ ಡಾಕ್ಟರೇಟ್, ಹೆಸರು ಬದಲಾವಣೆ ಅಥವಾ ಗೌರವ ಸೂಚಕ ಪದಗಳ ವ್ಯತ್ಯಾಸವನ್ನು ಹೇಗೆ ಪರಿಗಣಿಸಲಾಗುತ್ತದೆ? ಇಂತಹ ಪ್ರಕರಣಗಳಿಗೆ ಪ್ರತ್ಯೇಕ ಮಾರ್ಗಸೂಚಿ ಇದೆಯೇ? BLOಗಳಿಗೆ ಈ ವಿಷಯಗಳ ಕುರಿತು ಸಮರ್ಪಕ ತರಬೇತಿ ನೀಡಲಾಗಿದೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗದವರೆಗೆ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳು ದೂರವಾಗುವುದು ಕಷ್ಟ.

ಮೈಸೂರು ಜಿಲ್ಲೆಯ SIR ಪ್ರಕ್ರಿಯೆ

ಮೈಸೂರು ಜಿಲ್ಲೆಯಲ್ಲಿ ಎನ್ಯುಮರೇಷನ್ ಫಾರ್ಮ್‌ಗಳ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಲಾಗಿದೆ. ಆಗಸ್ಟ್‌ 4ರ ಸಂಜೆ 4 ಗಂಟೆಯವರೆಗಿನ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಜಿಲ್ಲೆಯ ಎಲ್ಲ 27,99,693 ಮತದಾರರ ವಿವರಗಳನ್ನು ಒಳಗೊಂಡ ಎನ್ಯುಮರೇಷನ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 22,23,350 ಎನ್ಯುಮರೇಷನ್ ಫಾರ್ಮ್‌ಗಳು ಡಿಜಿಟಲೀಕರಣಗೊಂಡಿದ್ದು, ಇದು ಶೇ.79.41ರಷ್ಟು ಪ್ರಗತಿಯನ್ನು ಸೂಚಿಸುತ್ತದೆ. ಉಳಿದ ದಾಖಲೆಗಳ ಡಿಜಿಟಲೀಕರಣ ಕಾರ್ಯವೂ ವೇಗವಾಗಿ ಮುಂದುವರಿದಿದೆ.

ಇದೇ ವೇಳೆ, ASDDO (Uncountable Enumeration Forms) ವಿಭಾಗದಲ್ಲಿ ಮೈಸೂರು ಜಿಲ್ಲೆಯಲ್ಲಿ 5,76,343 ಅರ್ಜಿಗಳು (ಶೇ.20.59) ಗುರುತಿಸಲ್ಪಟ್ಟಿವೆ. ಇವುಗಳೂ ಒಟ್ಟಾರೆ ಪ್ರಕ್ರಿಯೆಯಲ್ಲಿ ಸೇರಿರುವುದರಿಂದ, ಎನ್ಯುಮರೇಷನ್, ಡಿಜಿಟಲೀಕರಣ ಹಾಗೂ ASDDO ಸೇರಿ ಶೇ.100ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ಜಿಲ್ಲೆಯಲ್ಲಿ ನಾಗರಿಕರು ಸ್ವಯಂ ಆನ್‌ಲೈನ್ ಮೂಲಕ ಸಲ್ಲಿಸಿರುವ ಫಾರ್ಮ್‌ಗಳ ಸಂಖ್ಯೆ 42,944 ಆಗಿದ್ದು, ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು BLOಗಳು ಪರಿಶೀಲಿಸಿದ್ದಾರೆ. ಕುಟುಂಬ ಮ್ಯಾಪಿಂಗ್ ಪ್ರಕ್ರಿಯೆಯಲ್ಲೂ ಹೆಚ್ಚಿನ ಪ್ರಗತಿ ದಾಖಲಾಗಿದ್ದು, 9,34,830 ಮತದಾರರು ‘Self’, 11,02,657 ಮತದಾರರು ‘Progeny’ ವಿಭಾಗದಲ್ಲಿ ಮ್ಯಾಪ್ ಆಗಿದ್ದಾರೆ. No Mapping ವಿಭಾಗದಲ್ಲಿ 1,83,959 (ಶೇ.6.57) ದಾಖಲೆಗಳಿದ್ದು, ಅವುಗಳ ಪರಿಶೀಲನೆಯೂ ಮುಂದುವರಿದಿದೆ.

ಕೊನೆಯ ಮಾತು

ಪ್ರಜಾಪ್ರಭುತ್ವದಲ್ಲಿ ಮತದಾರನ ಮೇಲಿನ ವಿಶ್ವಾಸವೇ ಚುನಾವಣಾ ವ್ಯವಸ್ಥೆಯ ಬಲ. ಮತದಾರನು ತನ್ನ ಪೌರತ್ವವನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಆಡಳಿತದ ಹೊಣೆಗಾರಿಕೆ. ಎಸ್‌ಐಆರ್ ಪ್ರಕ್ರಿಯೆ ನಿಖರವಾದ ಮತದಾರರ ಪಟ್ಟಿಗಾಗಿ ನಡೆಯಬೇಕೇ ಹೊರತು, ಅರ್ಹ ಮತದಾರರಲ್ಲಿ ಆತಂಕ ಉಂಟುಮಾಡುವ ಪ್ರಕ್ರಿಯೆಯಾಗಬಾರದು.

ಈ ವಿಶೇಷ ಸುದ್ದಿ ಓದಿದ್ದೀರಾ?ಚಾಮರಾಜನಗರ ಜಿಲ್ಲೆಯ ‘SIR’ ಪ್ರಕ್ರಿಯೆ ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?

ಕಾಣದ ಸಮಸ್ಯೆಗಳನ್ನು ಗುರುತಿಸಿ, ಕಾನೂನುಬದ್ಧ ಪರಿಹಾರ ನೀಡುವುದು, ದಾಖಲೆಗಳ ವ್ಯತ್ಯಾಸಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವುದು ಮತ್ತು ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಗೌರವವು ಶೇಕಡಾವಾರು ಸಾಧನೆಯಲ್ಲಿ ಅಲ್ಲ; ಪ್ರತಿಯೊಬ್ಬ ಮತದಾರನ ಹಕ್ಕು ಅಕ್ಷುಣ್ಣವಾಗಿರುವುದರಲ್ಲಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ರಾಯಚೂರು | ಕೆ. ಶಾಂತಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಸಂತಸದ ವಿಚಾರ: ಬೋಸರಾಜು

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅವರು ಜವಾಬ್ದಾರಿ...

ಉಡುಪಿ | ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ

ಕಾರ್ಕಳ–ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ವ್ಯಾಪ್ತಿಯಲ್ಲಿ ಮಾಜಿ ಸಚಿವ ರಮಾನಾಥ ರೈ...