ಚಾಮರಾಜನಗರ ಜಿಲ್ಲೆಯ ‘SIR’ ಪ್ರಕ್ರಿಯೆ ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?

Date:

ವಿಶೇಷ ತೀವ್ರ ಮತದಾರರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಚಾಮರಾಜನಗರ ಜಿಲ್ಲೆ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ವಿತರಣೆ ಹಾಗೂ ಶೇ.90ಕ್ಕೂ ಅಧಿಕ ಡಿಜಿಟಲೀಕರಣ ಸಾಧಿಸಿದೆ ಎಂಬ ಜಿಲ್ಲಾಡಳಿತದ ವರದಿ ಮೊದಲ ನೋಟಕ್ಕೆ ಗಮನಾರ್ಹ ಸಾಧನೆಯಂತೆ ಕಾಣುತ್ತದೆ. ಆದರೆ ಈ ಅಂಕಿಅಂಶಗಳ ಹಿಂದೆ ನಿಜವಾಗಿ ನಡೆದಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರೆ, ಹಲವು ಆಡಳಿತಾತ್ಮಕ ಪ್ರಶ್ನೆಗಳು, ಕಾನೂನು ಸಂಬಂಧಿ ಆತಂಕಗಳು ಹಾಗೂ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಬಂಧಿಸಿದ ಗಂಭೀರ ಚರ್ಚೆಗಳು ಎದುರಾಗುತ್ತವೆ.

- Advertisement -

SIR ಪ್ರಕ್ರಿಯೆಯ ಮೂಲ ಉದ್ದೇಶ ಕೇವಲ ಮತದಾರರಿಗೆ ಒಂದು ಫಾರ್ಮ್ ತಲುಪಿಸುವುದು ಅಥವಾ ಡಿಜಿಟಲೀಕರಣ ಪೂರ್ಣಗೊಳಿಸುವುದಲ್ಲ. ಪ್ರತಿಯೊಬ್ಬ ಮತದಾರರ ಗುರುತು, ವಿಳಾಸ, ಅರ್ಹತೆ ಹಾಗೂ ಮತದಾರರ ಪಟ್ಟಿಯಲ್ಲಿನ ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ, ಯಾವುದೇ ಅರ್ಹ ಮತದಾರ ಅನಗತ್ಯವಾಗಿ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಈ ಕಾರಣಕ್ಕಾಗಿಯೇ ಚುನಾವಣಾ ಆಯೋಗವು ಮನೆ-ಮನೆಗೆ ಭೇಟಿ, ದಾಖಲೆ ಪರಿಶೀಲನೆ, ಮತದಾರರೊಂದಿಗೆ ನೇರ ಸಂವಾದ ಹಾಗೂ ಅಗತ್ಯವಿದ್ದಲ್ಲಿ ಮರುಭೇಟಿ ನೀಡುವಂತಹ ಕ್ರಮಗಳನ್ನು ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಆದರೆ ಜಿಲ್ಲೆಯ ವಿವಿಧ ಭಾಗಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಈ ಆದರ್ಶ ಪ್ರಕ್ರಿಯೆ ಮತ್ತು ನೆಲಮಟ್ಟದಲ್ಲಿ ನಡೆದ ಕಾರ್ಯವೈಖರಿಯ ನಡುವೆ ದೊಡ್ಡ ಅಂತರವಿದೆ ಎಂಬುದನ್ನು ಸೂಚಿಸುತ್ತಿದೆ.

ಯಳಂದೂರು ತಾಲ್ಲೂಕಿನ ಹಲವೆಡೆ BLOಗಳು ಮನೆ-ಮನೆಗೆ ತೆರಳುವ ಬದಲು ಅಂಗನವಾಡಿ, ಸರ್ಕಾರಿ ಶಾಲೆ ಅಥವಾ ಗ್ರಾಮದಲ್ಲಿನ ಒಂದು ನಿರ್ದಿಷ್ಟ ಸ್ಥಳಕ್ಕೆ ಬಂದು ಅಲ್ಲಿಯೇ ಫಾರ್ಮ್ ವಿತರಿಸಿರುವ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಅನೇಕ ಮತದಾರರು ತಾವೇ ಅಲ್ಲಿಗೆ ತೆರಳಿ ಫಾರ್ಮ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮನೆ-ಮನೆಗೆ ತಲುಪುವ ಪ್ರಕ್ರಿಯೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.

ಕೆಲವು ಗ್ರಾಮಗಳಲ್ಲಿ ಒಂದೇ ಮನೆಯ ಒಬ್ಬ ಸದಸ್ಯನಿಂದ ಉಳಿದ ಕುಟುಂಬ ಸದಸ್ಯರ ಮಾಹಿತಿಯನ್ನು ಪಡೆದು ಎಲ್ಲರ ಫಾರ್ಮ್ ಭರ್ತಿ ಮಾಡಲಾಗಿದೆ ಎನ್ನುವ ಆರೋಪಗಳಿವೆ. ವಯೋವೃದ್ಧರು, ಅನಾರೋಗ್ಯ ಪೀಡಿತರು, ಕೆಲಸಕ್ಕೆ ತೆರಳಿದ್ದವರು ಅಥವಾ ಕನ್ನಡ ಭಾಷೆ ಓದಲು ಬರೆಯಲು ಸಾಧ್ಯವಾಗದವರು ತಮ್ಮ ವಿವರಗಳನ್ನು ಸ್ವತಃ ಪರಿಶೀಲಿಸುವ ಅವಕಾಶವನ್ನೇ ಪಡೆಯಲಿಲ್ಲ ಎನ್ನುವ ಉದಾಹರಣೆಗಳು ಕೇಳಿಬರುತ್ತಿವೆ.

ಕೊಳ್ಳೇಗಾಲ ಹಾಗೂ ಹನೂರು ಭಾಗಗಳಲ್ಲಿ ಕಂಡುಬಂದ ಕೆಲವು ಭರ್ತಿ ಮಾಡಲಾದ ಎನ್ಯುಮರೇಷನ್ ಫಾರ್ಮ್‌ಗಳಲ್ಲಿ ತಾಂತ್ರಿಕ ಹಾಗೂ ಮೂಲಭೂತ ದೋಷಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ ಎನ್ನಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿದ್ದ ಹೆಸರನ್ನೇ ಮೊದಲ ಅಂಕಣದಲ್ಲೂ, ಎರಡನೇ ಅಂಕಣದಲ್ಲೂ ಪುನರಾವರ್ತಿಸಲಾಗಿದೆ. ಸಂಬಂಧದ ವಿವರಗಳಲ್ಲಿ ತಂದೆಯ ಹೆಸರಿನ ಬದಲು ತಾಯಿಯ ಹೆಸರು, ತಾಯಿಯ ಬದಲು ಇತರೆ ಸಂಬಂಧಗಳನ್ನು ದಾಖಲಿಸಿರುವ ಉದಾಹರಣೆಗಳಿವೆ. ಕೆಲವು ಕುಟುಂಬಗಳಲ್ಲಿ ಇಬ್ಬರು ಸಹೋದರರಿಗೆ ಒಂದೇ ಆಧಾರ್ ಸಂಖ್ಯೆ, ಒಂದೇ ಮೊಬೈಲ್ ಸಂಖ್ಯೆ ಅಥವಾ ಒಂದೇ ಜನ್ಮ ದಿನಾಂಕ ದಾಖಲಾಗಿರುವ ದೋಷಗಳು ಕಂಡುಬಂದಿವೆ.

ಇನ್ನೂ ಗಂಭೀರವಾದ ಸಂಗತಿ ಎಂದರೆ, ಕೆಲವು ಪ್ರದೇಶಗಳಲ್ಲಿ ವಿಧಾನಸಭಾ ಕ್ಷೇತ್ರದ ಹೆಸರನ್ನೇ ತಪ್ಪಾಗಿ ದಾಖಲಿಸಲಾಗಿದೆ ಎನ್ನುವ ಆರೋಪ. ಉದಾಹರಣೆಗೆ, ಆಡಳಿತಾತ್ಮಕವಾಗಿ ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದರೂ ಚುನಾವಣಾ ದೃಷ್ಟಿಯಿಂದ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಗ್ರಾಮಗಳ ಮತದಾರರ ಫಾರ್ಮ್‌ನಲ್ಲಿ ವಿಧಾನಸಭಾ ಕ್ಷೇತ್ರದ ಜಾಗದಲ್ಲಿ ‘ಕೊಳ್ಳೇಗಾಲ’ ಎಂದು ನಮೂದಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಮತದಾರರ ಗುರುತಿನ ಚೀಟಿ ಸಂಖ್ಯೆ (EPIC), ಮತಗಟ್ಟೆ ಸಂಖ್ಯೆ, ಮತಕ್ಷೇತ್ರದ ವಿವರಗಳು ಫಾರ್ಮ್ ಮೇಲೆಯೇ ಮುದ್ರಿತವಾಗಿದ್ದರೂ ಅವುಗಳನ್ನು ಪರಿಶೀಲಿಸದೇ ದಾಖಲು ಮಾಡಿರುವುದು ತರಬೇತಿ ಕೊರತೆ ಅಥವಾ ಅವಸರದ ಕೆಲಸದ ಸೂಚನೆಯಾಗಿ ಕಾಣಿಸುತ್ತದೆ.

ಕೆಲವೆಡೆ ಮತದಾರರಿಗೆ ಫಾರ್ಮ್‌ನ ಒಂದು ಪ್ರತಿಯನ್ನೂ ನೀಡದೇ BLOಗಳೇ ಭರ್ತಿ ಮಾಡಿಕೊಂಡು ಸಹಿ ಪಡೆದು ತೆರಳಿರುವ ಕುರಿತು ದೂರುಗಳಿವೆ. ಇನ್ನೂ ಕೆಲವು ಕಡೆ ಮತದಾರರು ಫಾರ್ಮ್ ನೋಡದೇ ಸಹಿ ಮಾಡಿರುವ ಉದಾಹರಣೆಗಳೂ ಕೇಳಿಬರುತ್ತಿವೆ. ಇದು ಮುಂದಿನ ಹಂತದಲ್ಲಿ ದಾಖಲಾಗಿರುವ ಮಾಹಿತಿಯನ್ನು ಪರಿಶೀಲಿಸುವ ಅವಕಾಶವನ್ನೇ ಮತದಾರರಿಂದ ಕಸಿದುಕೊಳ್ಳುವ ಸಾಧ್ಯತೆಯನ್ನು ಉಂಟುಮಾಡುತ್ತದೆ.

ಕಾಡಂಚಿನ ಗ್ರಾಮಗಳು, ಹಾಡಿಗಳು ಹಾಗೂ ಸೋಲಿಗರ ಪೊಡುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ. ರಸ್ತೆ ಸಂಪರ್ಕದ ಕೊರತೆ, ಅರಣ್ಯ ಪ್ರದೇಶ, ಮಳೆ ಹಾಗೂ ದೂರದ ಗ್ರಾಮಗಳ ಕಾರಣದಿಂದ ಕೆಲವು ಕಡೆ BLOಗಳೇ ತೆರಳದೆ ಸ್ಥಳೀಯ ಶಿಕ್ಷಕರು, ಗ್ರಾಮ ಮುಖಂಡರು ಅಥವಾ ಇತರರ ಮೂಲಕ ಫಾರ್ಮ್ ವಿತರಣೆ ಮತ್ತು ಸಂಗ್ರಹಣೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಅಧಿಕೃತ ಪರಿಶೀಲನಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಇನ್ನೊಂದು ಪ್ರಮುಖ ಪ್ರಶ್ನೆ 2002ರ ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದೆ. ಹಲವು ಹಿರಿಯ ಮತದಾರರು 2002ರಲ್ಲಿಯೇ ಮತದಾರರಾಗಿದ್ದರೂ, ಅವರ ಹಳೆಯ ದಾಖಲೆಗಳನ್ನು ಪರಿಶೀಲಿಸುವ ಪ್ರಯತ್ನವೇ ನಡೆದಿಲ್ಲ ಎನ್ನುವ ಆರೋಪಗಳಿವೆ. ಬದಲಾಗಿ, ಲಭ್ಯವಿದ್ದ ಡಿಜಿಟಲ್ ಮಾಹಿತಿಯನ್ನೇ ಆಧರಿಸಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹಲವರ ವಿವರಗಳು ASD (Absent, Shifted, Dead) ಅಥವಾ DDO (Duplicate/Other discrepancy) ವರ್ಗಗಳಲ್ಲಿ ತಪ್ಪಾಗಿ ದಾಖಲಾಗುವ ಅಪಾಯವಿದೆ.

ಒತ್ತಡದಲ್ಲಿದ್ದ BLOಗಳು

ಈ ಎಲ್ಲ ದೋಷಗಳಿಗೆ ಸಂಪೂರ್ಣವಾಗಿ BLOಗಳನ್ನೇ ಹೊಣೆಗಾರರನ್ನಾಗಿ ಮಾಡುವುದು ನ್ಯಾಯಸಮ್ಮತವಾಗುವುದಿಲ್ಲ. ಸಾವಿರಾರು ಮತದಾರರ ಮನೆಗಳಿಗೆ ನಿಗದಿತ ಅವಧಿಯೊಳಗೆ ಭೇಟಿ ನೀಡಿ, ದಾಖಲೆ ಪರಿಶೀಲಿಸಿ, ಫಾರ್ಮ್ ಭರ್ತಿ ಮಾಡಿ, ಡಿಜಿಟಲೀಕರಣ ಪೂರ್ಣಗೊಳಿಸುವ ಗುರಿ ಅವರಿಗೆ ನೀಡಲಾಗಿತ್ತು. ಅಲ್ಪಾವಧಿ, ಸಿಬ್ಬಂದಿ ಕೊರತೆ, ಸೂಕ್ತ ತರಬೇತಿಯ ಅಭಾವ, ಗ್ರಾಮೀಣ ಪ್ರದೇಶಗಳ ಭೌಗೋಳಿಕ ಸವಾಲು ಹಾಗೂ ದಿನನಿತ್ಯದ ಗುರಿ ಪೂರ್ಣಗೊಳಿಸುವ ಒತ್ತಡ ಇಂತಹ ಪರಿಸ್ಥಿತಿಗೆ ಕಾರಣವಾಗಿರಬಹುದು.

ಕಾನೂನು ಏನು ಹೇಳುತ್ತದೆ?

ಭಾರತದ ಸಂವಿಧಾನದ ಅನುಚ್ಛೇದ 324 ಚುನಾವಣಾ ಆಯೋಗಕ್ಕೆ ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರ ನೀಡುತ್ತದೆ. ಆದರೆ ಈ ಅಧಿಕಾರವೂ ನ್ಯಾಯಸಮ್ಮತ, ಪಾರದರ್ಶಕ ಹಾಗೂ ನೈಸರ್ಗಿಕ ನ್ಯಾಯದ ತತ್ವಗಳಿಗೆ ಒಳಪಟ್ಟಿರಬೇಕು.

Representation of the People Act, 1950 ರ ಕಲಂ 15 ರಿಂದ 23ರ ತನಕ ಮತದಾರರ ಪಟ್ಟಿಯ ಸಿದ್ಧತೆ, ತಿದ್ದುಪಡಿ, ಹೆಸರು ಸೇರ್ಪಡೆ ಹಾಗೂ ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಯಾವುದೇ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈಬಿಡುವ ಮುನ್ನ ಸೂಕ್ತ ಪರಿಶೀಲನೆ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವುದು ಕಾನೂನಿನ ಮೂಲ ಉದ್ದೇಶವಾಗಿದೆ.

ಇದರ ಜೊತೆಗೆ, Article 326 ಪ್ರಕಾರ ವಯೋಮಿತಿಯನ್ನು ಪೂರೈಸಿದ ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಮತದಾನದ ಹಕ್ಕು ಇದೆ. ಇದು ಸಂವಿಧಾನಾತ್ಮಕ ಹಕ್ಕಾಗಿದ್ದು, ಆಡಳಿತಾತ್ಮಕ ದೋಷಗಳಿಂದ ಆ ಹಕ್ಕಿಗೆ ಧಕ್ಕೆಯಾಗಬಾರದು.

ಭಾರತದ ಉಚ್ಚ ನ್ಯಾಯಾಲಯವು ವಿವಿಧ ತೀರ್ಪುಗಳಲ್ಲಿ ಮತದಾರರ ಪಟ್ಟಿಯ ಶುದ್ಧತೆ ಅತ್ಯಗತ್ಯವಾದರೂ, ಅದರ ಹೆಸರಿನಲ್ಲಿ ಅರ್ಹ ಮತದಾರರನ್ನು ಅನಗತ್ಯವಾಗಿ ಹೊರಗಿಡಬಾರದು ಎಂದು ಸ್ಪಷ್ಟಪಡಿಸಿದೆ. ಯಾವುದೇ ತಿದ್ದುಪಡಿ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯ (Natural Justice) ಪಾಲನೆಯಾಗಬೇಕು ಎಂಬ ತತ್ವವನ್ನು ನ್ಯಾಯಾಲಯ ಪುನರುಚ್ಚರಿಸಿದೆ.

ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?

ಶೇ.100 ಫಾರ್ಮ್ ವಿತರಣೆ ಅಥವಾ ಶೇ.90 ಡಿಜಿಟಲೀಕರಣ ಎಂಬ ಅಂಕಿಅಂಶಗಳು ಆಡಳಿತಾತ್ಮಕ ಸಾಧನೆಯಾಗಬಹುದು. ಆದರೆ ಪ್ರತಿಯೊಂದು ಫಾರ್ಮ್ ನಿಖರ ಮಾಹಿತಿಯೊಂದಿಗೆ, ಮತದಾರರ ಸಮ್ಮುಖದಲ್ಲಿ, ದಾಖಲೆ ಪರಿಶೀಲಿಸಿ, ಸರಿಯಾದ ವಿಧಾನದಲ್ಲಿ ಭರ್ತಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆ ಅಂಕಿಅಂಶಗಳ ಮೌಲ್ಯ ಕುಂದುತ್ತದೆ.

ಇಂದು ತಪ್ಪಾಗಿ ದಾಖಲಾದ ಒಂದು ಹೆಸರು, ತಪ್ಪಾದ ಸಂಬಂಧ, ತಪ್ಪಾದ ವಿಳಾಸ ಅಥವಾ ತಪ್ಪಾದ ವಿಧಾನಸಭಾ ಕ್ಷೇತ್ರದ ಮಾಹಿತಿ ಮುಂದಿನ ದಿನಗಳಲ್ಲಿ ಲಕ್ಷಾಂತರ ಮತದಾರರಿಗೆ ನೋಟಿಸ್ ಹೋಗಲು, ಮರುಪರಿಶೀಲನೆಗೆ ಒಳಗಾಗಲು ಅಥವಾ ಅನಗತ್ಯವಾಗಿ ಹೆಸರು ಅಳಿಸುವ ಪ್ರಕ್ರಿಯೆಗೆ ಕಾರಣವಾಗಬಹುದು.

ಮುಂದೇನು ಮಾಡಬೇಕು?

ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವು ಈಗಲಾದರೂ ಸಾರ್ವಜನಿಕವಾಗಿ ಬಂದಿರುವ ದೂರುಗಳ ಪರಿಶೀಲನೆ ನಡೆಸಬೇಕು. ಮಾದರಿ ಆಧಾರಿತ (sample-based) ಮರುಪರಿಶೀಲನೆ, ಹೆಚ್ಚು ದೋಷಗಳಿರುವ ಪ್ರದೇಶಗಳಲ್ಲಿ ವಿಶೇಷ ಪರಿಶೀಲನಾ ಶಿಬಿರಗಳು, ತಪ್ಪು ದಾಖಲೆಗಳನ್ನು ಸರಿಪಡಿಸಲು ಸುಲಭ ವ್ಯವಸ್ಥೆ ಹಾಗೂ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಕಲ್ಪಿಸುವುದು ಅಗತ್ಯವಾಗಿದೆ.

ಈ ವಿಶೇಷ ಸುದ್ದಿ ಓದಿದ್ದೀರಾ?ಅರಣ್ಯ, ಹಾಡಿ, ದುರ್ಗಮ ಹಾದಿಗಳ ನಡುವೆ ‘SIR’ ಶೇ.100: ಚಾಮರಾಜನಗರದ ಸಾಧನೆ ಹೇಗೆ ಸಾಧ್ಯವಾಯಿತು?

SIR ಪ್ರಕ್ರಿಯೆಯ ಯಶಸ್ಸನ್ನು ಅಳೆಯುವ ಮಾನದಂಡ ಕೇವಲ ‘ಎಷ್ಟು ಫಾರ್ಮ್ ವಿತರಿಸಲಾಯಿತು’ ಎಂಬುದಾಗಿರಬಾರದು. ‘ಎಷ್ಟು ನಿಖರವಾಗಿ, ಕಾನೂನುಬದ್ಧವಾಗಿ ಹಾಗೂ ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕನ್ನು ಕಾಪಾಡುವ ರೀತಿಯಲ್ಲಿ ಪ್ರಕ್ರಿಯೆ ನಡೆಯಿತು’ ಎಂಬುದೇ ಅದರ ನಿಜವಾದ ಯಶಸ್ಸಿನ ಮಾನದಂಡವಾಗಬೇಕು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025: ದೇಶದಲ್ಲೇ ಮೂರನೇ ಸ್ಥಾನಕ್ಕೆ ಜಿಗಿದ ಕರ್ನಾಟಕ!

ದೇಶದಲ್ಲಿ ಎಲೆಕ್ಟ್ರಿಕ್ ವಾಹನ (EV) ಬಳಕೆಯ ವಿಸ್ತರಣೆ ಮತ್ತು ಅಗತ್ಯ ಮೂಲಸೌಕರ್ಯ...

ಕಾಪು : ಕೊಬ್ಬರಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಸಂಸ್ಕರಣಾ ಘಟಕವೊಂದರಲ್ಲಿ...

ಉಡುಪಿ | ಕಾಪುವಿನಲ್ಲಿ ಪ್ರಜಾಸೇವಾ ಆಂದೋಲನ: 75 ಅಹವಾಲು ಸ್ವೀಕಾರ, ಅಧಿಕಾರಿಗಳಿಂದ ಪರಿಹಾರದ ಭರವಸೆ

ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇದ್ದಲ್ಲಿಯೇ ಮಾಡಿಕೊಡುವ ಉದ್ದೇಶದಿಂದ ಸಚಿವರು, ಜನಪ್ರತಿನಿಧಿಗಳು ಹಾಗೂ...

ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಜಾಮೀನು ಬೆನ್ನಲ್ಲೇ ಆರೋಪಿಗಳ ಮೇಲೆ ‘ಗೂಂಡಾ ಕಾಯ್ದೆ’ ಅಸ್ತ್ರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ...