ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಆ ಭರವಸೆಯನ್ನು ಜಾರಿಗೊಳಿಸದೆ ಮತ್ತೆ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಇಳಿದಿದೆ. ನಗರದ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಬಿಬಿಎಂಪಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ವರ್ಷಗಳಿಂದ ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ನೂರಾರು ಕುಟುಂಬಗಳ ಬದುಕು ಬೀದಿಗೆ ಬಂದಿದೆ.
ಕೆಲವೇ ವಾರಗಳ ಹಿಂದೆ ಇದೇ ವಿಚಾರವಾಗಿ ಬೀದಿಬದಿ ವ್ಯಾಪಾರಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬಳಿಕ ಸರ್ಕಾರದ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ, ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಹಾಗೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಆ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಮತ್ತೆ ಬುಲ್ಡೋಜರ್‌ಗಳು ಸದ್ದು ಮಾಡಲಾರಂಭಿಸಿವೆ. ಬೀದಿ ವ್ಯಾಪಾರಿಗಳ ಅಂಗಡಿಗಳ ಮೇಲೆ ದರ್ಪ ಮೆರೆಯುತ್ತಿವೆ.
ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಮತ್ತೆ ತೆರವು ಕಾರ್ಯಾಚರಣೆ ಆರಂಭಿಸಿರುವುದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದು, ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದೇವೆ ಎಂದು ʼಈ ದಿನ.ಕಾಮ್ʼ ತಂಡ ಗ್ರೌಂಡ್ ರಿಪೋರ್ಟ್ ಮಾಡಲು ಹೋದಾಗ ಹಲವು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದ ಸೀನು ಅವರು ಮಾತನಾಡಿ, “ನಾವು 30–35 ವರ್ಷಗಳಿಂದ ಇಲ್ಲಿಯೇ ಅಂಗಡಿ ನಡೆಸಿಕೊಂಡು ಬದುಕುತ್ತಿದ್ದೇವೆ. ಯಾವುದೇ ಪೂರ್ವ ನೋಟಿಸ್ ಅಥವಾ ಸರ್ಕಾರದ ಸ್ಪಷ್ಟ ಆದೇಶವನ್ನೂ ತೋರಿಸದೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಬಂದಿದ್ದಾರೆ. ಬಿಬಿಎಂಪಿ ನೋಟಿಸ್ ಬಂದಿದೆ ಎಂದು ಹೇಳುವುದನ್ನು ಬಿಟ್ಟರೆ ನಮಗೆ ಯಾವುದೇ ದಾಖಲೆ ತೋರಿಸುತ್ತಿಲ್ಲ” ಎಂದಿದ್ದಾರೆ.
“ನಾವು ಬಡವರು. ಈ ಅಂಗಡಿಗಳೇ ನಮ್ಮ ಜೀವನಾಧಾರ. ಸರ್ಕಾರಗಳು ಬದಲಾಗುತ್ತವೆ, ನಾಯಕರು ಬದಲಾಗುತ್ತಾರೆ. ಆದರೆ ಕಷ್ಟವಾಗುವುದು ಮಾತ್ರ ನಮ್ಮಂತಹ ಬಡವರಿಗೆ. ಕನಿಷ್ಠ ಒಂದು ತಿಂಗಳು ಅಥವಾ ಮೂರು ತಿಂಗಳಾದರೂ ಸಮಯ ಕೊಟ್ಟಿದ್ದರೆ, ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಆದರೆ, ಎರಡು ದಿನಗಳಲ್ಲಿ ತೆರವುಗೊಳಿಸುತ್ತೇವೆ ಎಂದು ಹೇಳಿದರೆ ನಾವು ಎಲ್ಲಿ ಹೋಗಬೇಕು? ಬೇರೆ ಅಂಗಡಿ ಆರಂಭಿಸಲು ನಮ್ಮ ಬಳಿ ಹಣವಿಲ್ಲ. ಈ ವಯಸ್ಸಿನಲ್ಲಿ ನಮಗೆ ಬೇರೆ ಕೆಲಸವೂ ಸಿಗುವುದಿಲ್ಲ. ನಮಗೆ ಸಣ್ಣ ಸಣ್ಣ ಮಕ್ಕಳು ಇದ್ದಾರೆ. ಕುಟುಂಬದ ಬದುಕು ಈ ಅಂಗಡಿಯ ಮೇಲೆಯೇ ನಿಂತಿದೆ. ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುವಷ್ಟು ಆರ್ಥಿಕ ಸಾಮರ್ಥ್ಯವೂ ನಮ್ಮಲ್ಲಿಲ್ಲ. ಈಗ ರಸ್ತೆಗಿಳಿಯುವ ಪರಿಸ್ಥಿತಿ ಬಂದಿದೆ. ನಮ್ಮ ಭವಿಷ್ಯ ಏನಾಗುತ್ತದೆ ಎಂಬ ಭಯ ಕಾಡುತ್ತಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಚಪ್ಪಲಿ ಹೊಲಿಯುವ ಕೆಲಸ ಮಾಡುವ ಡೇವಿಡ್, “ನಮ್ಮ ಕುಟುಂಬ 40 ವರ್ಷಗಳಿಂದ ಇಲ್ಲಿಯೇ ದುಡಿದು ಜೀವನ ಸಾಗಿಸುತ್ತಿದೆ. ನಾನು ಇಲ್ಲಿಯೇ ಬೆಳೆದವನು. ಬಿಕಾಂ ಪದವಿ ಪಡೆದಿದ್ದರೂ ಯಾವುದೇ ಉದ್ಯೋಗ ಸಿಕ್ಕಿಲ್ಲ. ಬದುಕು ಸಾಗಿಸಲು ಚಪ್ಪಲಿ ಹೊಲೆಯುವುದು ಮತ್ತು ಶೂ ಪಾಲಿಶ್ ಮಾಡುವ ಕೆಲಸವನ್ನೇ ಅವಲಂಬಿಸಿದ್ದೇನೆ. ದಿನಕ್ಕೆ 200–300 ರೂ. ಸಂಪಾದನೆಯಾದರೆ ಅದೇ ನಮ್ಮ ಕುಟುಂಬದ ಆಧಾರ. ಲಕ್ಷಾಂತರ ರೂಪಾಯಿ ಗಳಿಸುವವರಲ್ಲ ನಾವು. ನಮ್ಮಂಥಹ ಬಡವರ ಬದುಕಿನ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕರುಣೆಯೂ ಇಲ್ಲದಂತಾಗಿದೆ. ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನನ್ನ ಮಕ್ಕಳ ಶಿಕ್ಷಣದ ಹೊಣೆ ನನ್ನ ಮೇಲಿದೆ. ಸರ್ಕಾರಿ ಶಾಲೆಗಳನ್ನೂ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ. ಪರಿಣಾಮ, ಖಾಸಗಿ ಶಾಲೆಯಲ್ಲಿ ಓದಿಸಬೇಕಾದ ಪರಿಸ್ಥಿತಿ ಇದೆ. ವರ್ಷಕ್ಕೆ ಸಾವಿರಾರು ರೂಪಾಯಿ ಶುಲ್ಕ ಕಟ್ಟಲು ಸಾಲ ಮಾಡಬೇಕಾಗುತ್ತದೆ. ಆ ಸಾಲ ತೀರಿಸಲು ವರ್ಷಪೂರ್ತಿ ದುಡಿಯಬೇಕು. ಈಗ ಅಂಗಡಿಯನ್ನೇ ಕಳೆದುಕೊಂಡರೆ ಕುಟುಂಬವನ್ನು ಹೇಗೆ ನಡೆಸಬೇಕು ಎಂಬ ಆತಂಕ ಕಾಡುತ್ತಿದೆ. ನಮ್ಮಂತಹ ಬಡವರ ಹೊಟ್ಟೆ ಮೇಲೆ ಹೊಡೆದ ಈ ಕ್ರಮಕ್ಕೆ ನ್ಯಾಯ ಸಿಗಬೇಕು. ನಮ್ಮ ನೋವು ಮತ್ತು ಸಂಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ತಮ್ಮ ಅಂಗಡಿಯನ್ನು ಅಧಿಕಾರಿಗಳು ಧ್ವಂಸಗೊಳಿಸುತ್ತಿದ್ದ ದೃಶ್ಯವನ್ನು ನೋಡುತ್ತಾ ಕಣ್ಣೀರು ಹಾಕುತ್ತಿದ್ದ ದೀಪಾ ಅವರು “ನಮ್ಮ ಜೀವನಾಧಾರವನ್ನೇ ಕಸಿದುಕೊಂಡಿದ್ದಾರೆ. 20 ವರ್ಷಗಳಿಂದ ಇಲ್ಲಿಯೇ ಟೀ ಅಂಗಡಿ ನಡೆಸಿಕೊಂಡು ಬದುಕುತ್ತಿದ್ದೇವೆ. ಆದರೆ, ಕೇವಲ ಎರಡು ದಿನಗಳ ಮುಂಚೆ ತೆರವುಗೊಳಿಸುವ ಸೂಚನೆ ನೀಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ನಾವು ಬೇರೆ ವ್ಯವಸ್ಥೆ ಹೇಗೆ ಮಾಡಿಕೊಳ್ಳಬೇಕು? ನಾಳೆಯಿಂದ ನಮ್ಮ ಕುಟುಂಬದ ಬದುಕು ಹೇಗೆ ಸಾಗಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಎಲ್ಲಿ ಹೋಗಬೇಕು, ಏನು ಕೆಲಸ ಮಾಡಬೇಕು ಎಂಬ ದಿಕ್ಕೇ ಕಾಣುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಭಿಕ್ಷೆ ಬೇಡುವುದನ್ನು ಬಿಟ್ಟರೆ ಬೇರೆ ದಾರಿಯೇ ಕಾಣುತ್ತಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುವ ಮುನಿರಾಜು ಮಾತನಾಡಿ, “ನಾನು ಲಿವರ್ ಮತ್ತು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದೇನೆ. ಕಳೆದ 46 ವರ್ಷಗಳಿಂದ ಹಣ್ಣು ಮಾರಾಟ ಮಾಡಿ ಕುಟುಂಬವನ್ನು ನಡೆಸುತ್ತಿದ್ದೇನೆ. ಇದೇ ನಮ್ಮ ಜೀವನಾಧಾರ. ಈಗ ಈ ಅಂಗಡಿಯನ್ನೂ ತೆರವುಗೊಳಿಸಿದರೆ ನನ್ನ ಹೆಂಡತಿ-ಮಕ್ಕಳನ್ನು ಹೇಗೆ ಸಾಕಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನಮ್ಮಂತಹ ಬಡವರು ಎಲ್ಲಿ ಹೋಗಬೇಕು? ಶ್ರೀಮಂತರಿಗೆ ಮಾತ್ರ ಬದುಕುವ ಹಕ್ಕಿದೆಯೇ? ನಾವು ಕೂಡ ಮತ ಹಾಕಿ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಮ್ಮ ಬದುಕಿನ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ನಮಗೆ ಬದುಕಲು ದಾರಿ ತೋರಿಸಲಿ, ಇಲ್ಲವೇ ಸಾವಿನ ದಾರಿಯನ್ನಾದರೂ ತೋರಲಿ” ಎಂದು ಅಳಲು-ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ಬದಿ ವ್ಯಾಪಾರಿ ಪಚ್ಚಮ್ಮ, “ಈಗ ನಾವು ಬೀದಿಗೆ ಬಂದಿದ್ದೇವೆ. ಹಲವು ವರ್ಷಗಳಿಂದ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೇ ನಮ್ಮ ಜೀವನಾಧಾರವಾಗಿತ್ತು. ಈಗ ಅದನ್ನೂ ತೆರವುಗೊಳಿಸಿರುವುದರಿಂದ ಮುಂದೇನು ಮಾಡಬೇಕು ಎಂಬ ದಿಕ್ಕೇ ಕಾಣುತ್ತಿಲ್ಲ. ಈ ವಯಸ್ಸಿನಲ್ಲಿ ನಮಗೆ ಬೇರೆ ಯಾರು ಕೆಲಸ ಕೊಡುತ್ತಾರೆ? ಮನೆ ಕೆಲಸಕ್ಕೂ ಯಾರೂ ಕರೆಯುವುದಿಲ್ಲ. ಈ ವ್ಯಾಪಾರದಿಂದಲೇ ಮಕ್ಕಳನ್ನು ಸಾಕಿಕೊಂಡು ಬದುಕುತ್ತಿದ್ದೆವು. ಈಗ ಅಂಗಡಿಯೇ ಇಲ್ಲದಿರುವುದರಿಂದ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವೇ ನಮ್ಮಂತಹ ಬಡವರಿಗೆ ಪರ್ಯಾಯ ದಾರಿ ತೋರಿಸಬೇಕು. ಇಲ್ಲದಿದ್ದರೆ ಹೇಗೆ ಬದುಕಬೇಕು ಎಂಬುದು ದೇವರಿಗೇ ಗೊತ್ತು” ಎಂದು ಅವಲತ್ತುಕೊಂಡಿದ್ದಾರೆ.



