ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಹಿನ್ನಡೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ, ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಸೇವೆ ಹಾಗೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಕಲ್ಪನೆ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ನಡೆದ ವಾದ-ಪ್ರತಿವಾದಗಳು ಗಮನ ಸೆಳೆದವು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ‘ಯುವ ಸಂಸತ್’ ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಾಗಿ ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದರು.
ಸಂಸತ್ತಿನ ಕಾರ್ಯಕಲಾಪಗಳ ಮಾದರಿಯಲ್ಲಿಯೇ ನಡೆದ ಕಾರ್ಯಕ್ರಮವು ಸಭಾಧ್ಯಕ್ಷರನ್ನು ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕರು ಸಭಾಧ್ಯಕ್ಷರ ಪೀಠಕ್ಕೆ ಕರೆತರುವ ಮೂಲಕ ಆರಂಭವಾಯಿತು. ಸಭಾಧ್ಯಕ್ಷರು ಆಸೀನರಾದ ಬಳಿಕ ನಾಡಗೀತೆ ಹಾಗೂ ವಂದೇ ಮಾತರಂ ಗೀತೆ ಗಾಯನ ನಡೆಯಿತು. ನಂತರ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಯಿತು.
ಸಭಾಧ್ಯಕ್ಷರ ಪಾತ್ರ ನಿರ್ವಹಿಸಿದ ಮುತ್ತಪ್ಪ ಮಾತನಾಡಿ, ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಜನರ ಧ್ವನಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿ. ಸಮಾಜಮುಖಿ ಚಿಂತನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ ಪ್ರಭಾಕರ್ ಅವರು ಸಚಿವರನ್ನು ಪರಿಚಯಿಸಿ ಕಲಾಪಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಿ ಗೌರವ ನಮನ ಅರ್ಪಿಸಲಾಯಿತು. ನಂತರ ಆರಂಭವಾದ ಚರ್ಚೆಯಲ್ಲಿ ವಿರೋಧ ಪಕ್ಷದ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಕಲ್ಪಿಸಬೇಕು ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಹಲವು ರಸ್ತೆಗಳಲ್ಲಿ ಸೂಕ್ತ ಸಂಚಾರ ಸಂಕೇತಗಳು (ಸಿಗ್ನಲ್) ಮತ್ತು ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ಸದಸ್ಯರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಮುಖ್ಯಸ್ಥರು, ನಾಗರಿಕರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ವಿರೋಧ ಪಕ್ಷದವರು ನೀಡುವ ಸಲಹೆ ಮತ್ತು ಮಾರ್ಗದರ್ಶನವನ್ನು ಸ್ವೀಕರಿಸಿ ಜನಪರ ಆಡಳಿತ ನಡೆಸಲಾಗುವುದು ಎಂದು ಹೇಳಿದ್ದು ವಿಶೇಷವಾಗಿತ್ತು.
ವಿರೋಧ ಪಕ್ಷದ ನಾಯಕಿಯ ಪಾತ್ರ ನಿರ್ವಹಿಸಿದ ಅಸ್ಮಿತ ಅವರು ವಿವಿಧ ವಿಚಾರಗಳನ್ನು ಸಮರ್ಥವಾಗಿ ಮಂಡಿಸುವ ಮೂಲಕ ಗಮನ ಸೆಳೆದರು. ಯುವ ಸಂಸತ್‌ನಲ್ಲಿ ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆ, ತುರ್ತು ವಿಷಯಗಳ ಮೇಲಿನ ಚರ್ಚೆ, ವಿಧೇಯಕಗಳ ಮಂಡನೆ, ವಿಧೇಯಕಗಳ ಮೇಲಿನ ಚರ್ಚೆ ಹಾಗೂ ಅಂಗೀಕಾರ ಸೇರಿದಂತೆ ಸಂಸತ್ತಿನ ವಿವಿಧ ಕಾರ್ಯವಿಧಾನಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಯುವ ಸಂಸತ್‌ನ ಕಲಾಪ ನಿರ್ವಹಣೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಯುವ ಸಂಸತ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸಂವಿಧಾನದ ಅರಿವು, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗಿದೆ. ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರು ಮತ್ತು ನಾಯಕರು ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು.
ಈ ವಿಶೇಷ ವರದಿ ಓದಿದ್ದೀರಾ? ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಧರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ರಾಘವ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಿಲನ ಭರತ್, ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಅಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.




