ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಳೆಯ ಹಾಗೂ ದುರಸ್ತಿಗೆ ಬಂದಿರುವ ಬಸ್‌ಗಳನ್ನು ಬದಲಿಸಿ, ಸುಮಾರು 50 ಹೊಸ ಸಾರಿಗೆ ಬಸ್‌ಗಳನ್ನು ಒದಗಿಸಬೇಕು ಎಂದು ಸಿಪಿಐಎಂ ಪಕ್ಷದ ಮುಖಂಡರು ಡಿಪೋ ಹಾಗೂ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಹಟ್ಟಿ ಪಟ್ಟಣದಿಂದ ಗುಡದನಾಳ, ಪಾಮನಕಲ್ಲೂರು, ಗುರುಗುಂಟಾ, ಗೌಡೂರು, ತವಗ, ಕಡೋಣಿ ಹಾಗೂ ಹಟ್ಟಿ ಹೊಸೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಹಲವು ವರ್ಷಗಳಿಂದ ರಸ್ತೆಗಳ ಮೇಲೆ ತಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ನಿತ್ಯ ಅಪಘಾತದ ಭೀತಿ ಎದುರಿಸುವಂತಾಗಿದೆ. ಆದ್ದರಿಂದ ಈ ರಸ್ತೆಗಳಿಗೆ ಹೊಸ ಯೋಜನೆ ರೂಪಿಸಿ, ರಸ್ತೆ ಅಗಲೀಕರಣದೊಂದಿಗೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಹಟ್ಟಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ಗಳು ಸಂಚರಿಸುತ್ತಿಲ್ಲ. ಸಂಚರಿಸುತ್ತಿರುವ ಬಸ್‌ಗಳೂ ಹಳೆಯದಾಗಿದ್ದು, ಆಗಾಗ್ಗೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿ, ಹಳೆಯ ಬಸ್‌ಗಳ ಬದಲಿಗೆ ಹೊಸ ಬಸ್‌ಗಳನ್ನು ನಿಯೋಜಿಸಬೇಕು. ಹದಗೆಟ್ಟ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸಿಪಿಐಎಂ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪೋತ್ನಾಳ ಗ್ರಂಥಾಲಯಕ್ಕೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಪರ್ಧಾರ್ಥಿಗಳ ಪ್ರತಿಭಟನೆ
ಪ್ರತಿಭಟನೆಯಲ್ಲಿ ನಿಂಗಪ್ಪ ವಿರಾಪುರ, ಪಂಚಲಯ್ಯ ಹಟ್ಟಿ, ಅಲ್ಲಾಭಕ್ಷ ದೇವಾಪುರ, ಫಕ್ರುದ್ದೀನ್ ಮುಲ್ಲಾ, ವೆಂಕಟೇಶ ಗೋರಕಲ್, ಸಾಹೇರಾ ಬೇಗಂ ಇನ್ನಿತರರು ಇದ್ದರು.



