ಏಪ್ರಿಲ್ 9ರಂದು ನಡೆಯುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣತೊಟ್ಟಿರುವ ಕತೆ ಕಂಡುಬರುತ್ತದೆ. ಈ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಚುನಾವಣಾ ರಣತಂತ್ರ ರೂಪಿಸುತ್ತಿದೆ. ಮೂರು ವರ್ಷಗಳ ಹಿಂದೆ ತನ್ನಿಂದ ಜಾರಿ ಹೋದ ಕ್ಷೇತ್ರವನ್ನು ಹೇಗಾದರೂ ಮಾಡಿ ಮತ್ತೆ ಮರಳಿ ಪಡೆಯಲು ಬಿಜೆಪಿ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ.
ಈ ಮಧ್ಯ ಎರಡೂ ಪಕ್ಷಗಳಲ್ಲಿ ಆಯಾರಾಮ ಗಯಾರಾಮ ಪ್ರಕ್ರಿಯೆ ಆರಂಭವಾಗಿದ್ದು, ಪಕ್ಷಾಂತರ ನಡೆಯುತ್ತಿದೆ. ಈ ಹಿಂದೆ ಕಾರಣಾಂತರಗಳಿಂದ ಮತ್ತು ಪಕ್ಷದಿಂದ ನಾಯಕತ್ವದ ವಿರುದ್ಧ ಮುನಿಸಿಕೊಂಡು ಪಕ್ಷ ಬಿಟ್ಟು ಹೋದವರನ್ನು ಮನವೊಲಿಸಿ ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಎರಡು ಕಡೆಯೂ ನಡೆದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಗಮನಿಸಿದಾಗ ಒಬ್ಬರು ಪ್ರಬಲರು ಇನ್ನೊಬ್ಬರು ದುರ್ಬಲರು ಎನ್ನುವಂತಿಲ್ಲ. ಇಬ್ಬರೂ ಸಮಬಲ ಸ್ಪರ್ಧಿಗಳು ಸಮಬಲರ ನಡುವೆ ಗೆಲುವಿಗಾಗಿ ಸೆಣಸಾಟ ನಡೆಯುತ್ತಿದೆ.
ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ತನ್ನದೇ ಆದ ಮತದಾರರಿದ್ದಾರೆ. ಎರಡೂ ಪಕ್ಷಗಳಿಗೆ ಕ್ಷೇತ್ರದಲ್ಲಿ ಪಾರಂಪರಿಕ ಮತಬ್ಯಾಂಕ್ ಇರುವಂತೆ ಇಬ್ಬರೂ ಅಭ್ಯರ್ಥಿಗಳಿಗೆ ವೈಯಕ್ತಿಕ ಮತ ಬ್ಯಾಂಕ್ ಕೂಡ ಇವೆ. ಈಗ ಈ ಚುನಾವಣೆ ಎರಡೂ ಪಕ್ಷಗಳ ತತ್ವ ಸಿದ್ಧಾಂತ, ಅಭಿವೃದ್ಧಿ ಕಾರ್ಯಗಳಿಂದ ನಡೆಯದೇ ಜಾತಿ ಧರ್ಮದ ಆಧಾರದ ಮೇಲೆಯೂ ಚುನಾವಣೆ ನಡೆಯುವ ಸೂಚನೆಗಳು ಕಂಡುಬರುತ್ತಿವೆ.
ಬಾಗಲಕೋಟೆ ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿ ಉಂಟಾದ ರಾಜಕೀಯ ಪರಿವರ್ತನೆಯ ಸಂದರ್ಭದಲ್ಲಿ ಜನತಾ ಪರಿವಾರದ ಭದ್ರಕೋಟೆಯಾಯಿತು. ಆ ಜನತಾ ಪರಿವಾರದ ನಿಚ್ಚಣಿಕೆಯನ್ನೇ ಬಳಸಿಕೊಂಡು ಮೇಲೆ ಏರಿ ತೊಂಬತ್ತರ ದಶಕದ ಕೊನೆಯ ಘಟ್ಟದ ಉಪಚುನಾವಣೆಯಲ್ಲಿ ತನ್ನ ಖಾತೆ ತೆರೆದ ಬಿಜೆಪಿ ಮುಂದೆ ಈ ಕ್ಷೇತ್ರವನ್ನು ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿತು.
ಬಿಜೆಪಿಯ ಈ ಭದ್ರಕೋಟೆಯನ್ನು ಅಲುಗಾಡಿಸಲು ಕಾಂಗ್ರೆಸ್ ಪಕ್ಷದ ಘಟಾನುಘಟಿಗಳಿಂದ ಸಾಧ್ಯವಾಗದಿದ್ದಾಗ ಆ ಕೆಲಸವನ್ನು ಸಾಧ್ಯವಾಗಿಸಿ ಮೂರು ದಶಕಗಳ ನಂತರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಮಡಿಲಿಗೆ ತಂದು ಹಾಕಿದವರು ದಿ.ಹುಲ್ಲಪ್ಪ ಮೇಟಿ. ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಬಾಗಲಕೋಟೆ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ ಮೇಟಿ ಅವರಿಗೆ 2008ರಲ್ಲಿ ಮೊದಲ ಸಲ ಸೋಲಾಯಿತು. ಆ ಸೋಲನ್ನೇ ಅವರು ಐದು ವರ್ಷಗಳ ನಂತರ ಗೆಲುವಾಗಿಸಿಕೊಂಡರು.
1983ರಲ್ಲಿ ಕಾಂಗ್ರೆಸ್ ಕೈಬಿಟ್ಟು ಹೋಗಿದ್ದ ಕ್ಷೇತ್ರವನ್ನು 2013ರಲ್ಲಿ ಮರಳಿ ಕಾಂಗ್ರೆಸ್‌ಗೆ ತಂದುಕೊಟ್ಟು ಚೆಲ್ಲಾಪಿಲ್ಲಿಯಾಗಿದ್ದ ಕಾಂಗ್ರೆಸ್ ಮತದಾರರನ್ನು ಒಂದು ಚೌಕಟ್ಟಿನಲ್ಲಿ ಒಂದುಗೂಡಿಸಿದರು. ನಂತರ 2018ರಲ್ಲಿ ಮತ್ತೆ ಸೋತರೂ ಅದರಿಂದ ವಿಚಲಿತರಾಗದೆ ಮರಳಿ ಯತ್ನವ ಮಾಡಿ 2023ರಲ್ಲಿ ಗೆದ್ದರು. ಮೇಟಿ ಅವರ ಎರಡು ಗೆಲುವಿನಲ್ಲಿ ಕಾಂಗ್ರೆಸ್ ಪಾರಂಪರಿಕ ಮತಗಳಿಗಿಂತ ಮೇಟಿ ಅವರ ವೈಯಕ್ತಿಕ ಮತದಾರರ ಬೆಂಬಲ ಪ್ರಮುಖವಾಗಿತ್ತು ಎಂದು ಹೇಳುವುದು ಅತಿಶಯೋಕ್ತಿಯಲ್ಲ.
ಮೇಟಿ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದಾಗ ಮತ್ತು ಸೋತಾಗ ಅವರಿಗೆ ಬಿಜೆಪಿಯ ವೀರಣ್ಣ ಚರಂತಿಮಠ ಅವರೇ ನೇರ ಎದುರಾಳಿಯಾಗಿದ್ದರು. ಈ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿಸಿದ ಶ್ರೇಯಸ್ಸು ಚರಂತಿಮಠ ಅವರದಾಗಿದೆ. 2004ರಲ್ಲಿ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದ ನಂತರ ಹಳ್ಳಿಗಳಲ್ಲಿ ಕೂಡ ಬಿಜೆಪಿ ಬುನಾದಿ ಗಟ್ಟಿಗೊಳಿಸಿದರು. ಚರಂತಿಮಠ ಅವರ ಮೂರು ಸಲ ಗೆಲುವಿಗೆ ಬಿಜೆಪಿ ಪಾರಂಪರಿಕ ಮತದಾರರ ಅಚಲ ಬೆಂಬಲ ಒಂದು ಕಾರಣವಾದರೆ ಅವರ ವೈಯಕ್ತಿಕ ಬೆಂಬಲಿತ ಮತದಾರರು ಇನ್ನೊಂದು ಕಾರಣ ಎಂದು ಹೇಳಬಹುದು.
2008ರಿಂದ 2023ರವರೆಗಿನ ನಾಲ್ಕು ಚುನಾವಣೆಗಳಲ್ಲಿ ಇಲ್ಲಿ ಮೇಟಿ-ಚರಂತಿಮಠ ನೇರ ಎದುರಾಳಿಗಳಾಗಿದ್ದರು. ಈಗ ಹುಲ್ಲಪ್ಪ ಮೇಟಿ ಅವರ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಮರುಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತೆ ಚರಂತಿಮಠ, ಕಾಂಗ್ರೆಸ್‌ನಿಂದ ಮೇಟಿ ಅವರ ಪುತ್ರ ಉಮೇಶ್ ಮೇಟಿ ಅಭ್ಯರ್ಥಿಗಳಾಗಿದ್ದಾರೆ.
ಸಾಂಪ್ರದಾಯಿಕ ಎದುರಾಳಿಗಳ ಮಧ್ಯೆಯೇ ಮತ್ತೆ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವ ಸಂಪುಟದ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ, ಎಂ ಬಿ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರಲ್ಲದೇ ಅನೇಕ ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು ಭಾಗವಹಿಸಿದ್ದನ್ನು ಗಮನಿಸಿದರೆ ಈ ಕ್ಷೇತ್ರವನ್ನು ಮತ್ತೆ ತನ್ನ ವಶದಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೆಚ್ಚು ಆಸಕ್ತಿ ವಹಿಸಿದೆ ಎಂಬುದು ಗಮನಾರ್ಹ.
ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಭಾಗದ ಪ್ರಭಾವಿ ರಾಜಕೀಯ ಮುಖಂಡರಾದ ಸಂಸದರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಪಿ ಸಿ ಗದ್ದಿಗೌಡರ, ನಾರಾಯಣಸಾ ಭಾಂಡಗೆ ಮತ್ತು ಅನೇಕ ಮಾಜಿ ಸಚಿವರು ಭಾಗವಹಿಸಿದುದನ್ನು ನೋಡಿದರೆ ಬಿಜೆಪಿ ಕೂಡ ಕಳೆದು ಹೋದ ಕ್ಷೇತ್ರವನ್ನು ಮರಳಿ ಪಡೆದುಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಕಾಣಬಹುದು.
ಇದನ್ನೂ ಓದಿದ್ದೀರಾ? ದಾವಣಗೆರೆ | ಸಮರ್ಥ್ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು
ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕಾಲಮಿತಿ ಮುಗಿದಿದ್ದು, ಚುನಾವಣೆ ಕಣ ಸಂಪೂರ್ಣ ಸಜ್ಜುಗೊಂಡಿದೆ. ಜಾತಿ ಧರ್ಮ, ಊರು-ಕೇರಿ, ಕುಲ-ಗೋತ್ರಗಳ ಆಧಾರದ ಮೇಲೆ ಮತದಾರರ ಮನವೊಲಿಸಿಕೊಳ್ಳಲು ಎರಡೂ ಪಕ್ಷಗಳು ಕಾರ್ಯಪ್ರವ್ರತ್ತವಾಗಿವೆ. ಬಾಗಲಕೋಟೆ ಕ್ಷೇತ್ರದಲ್ಲಿ ಬಿರು ಬೇಸಿಗೆಯ ಬಿಸಿಲಿನ ಝಳ ಏರುತ್ತಿದ್ದಂತೆ ಚುನಾವಣೆಯ ಕಾವು ಏರುತ್ತಿದೆ. ಎರಡೂ ಪಕ್ಷಗಳು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದು, ಆ ಪ್ರಯತ್ನ ಎರಡು ಕಡೆಯೂ ನಡೆದಿದೆ.

ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ



