ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಲಭ್ಯವಿರದೆ ಗಾಯಾಳುವಿಗೆ ಚಿಕಿತ್ಸೆ ದೊರೆಯದ ಆರೋಪ ಕೇಳಿಬಂದಿದ್ದು, ಕರ್ತವ್ಯಲೋಪವೆಸಗಿದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಕುರಿತು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಸ್ಥಾಪಕ ಸಂಚಾಲಕಿ ಅಶ್ವಿನಿ ಮದನಕರ, ‘ಸಂಘಟನೆಯ ಮುಖಂಡರು, ಸೆ.16ರಂದು ಸಂಜೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ದತ್ತಾತ್ರೇಯ ತಂದೆ ಶರಣಬಸಪ್ಪ ಬಬಲಾದ ಅವರನ್ನು ಸಂಜೆ ಸುಮಾರು 6.10ಕ್ಕೆ ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ’ ಎಂದು ಆರೋಪಿಸಿದರು.
‘ಗಾಯಾಳುವಿಗೆ ಅಂಬ್ಯುಲೆನ್ಸ್ ನೆರವು ಕೋರಿದಾಗ ಚಾಲಕ ಮದ್ಯಪಾನ ಮಾಡಿದ್ದ ಕಾರಣ ಸೇವೆ ಪಡೆಯಲು ಸಾಧ್ಯವಾಗಲಿಲ್ಲ. ಬಳಿಕ ಸಾರ್ವಜನಿಕರು ನಿಂಬರ್ಗಾದಿಂದ ಅಂಬ್ಯುಲೆನ್ಸ್ ತರಿಸಿ ಗಾಯಾಳುವನ್ನು ಕಲಬುರಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು’ ಎಂದು ತಿಳಿಸಿದರು.
‘ಸೆಪ್ಟೆಂಬರ್ 17ರಂದು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಆಸ್ಪತ್ರೆಯಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡುಬಂದಿದೆ. ಹಿಂದಿನ ದಿನ ಗಾಯಾಳುವಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಇರಲಿಲ್ಲ ಎಂಬುದನ್ನು ಆರೋಗ್ಯ ಕೇಂದ್ರದ ವೈದ್ಯರೂ ಒಪ್ಪಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿರುವ ಅವರು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯದ ಪರಿಸ್ಥಿತಿಗೆ ಕಾರಣರಾದ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಆರೋಗ್ಯ ಕೇಂದ್ರದ ಸಭಾಂಗಣದ ಧೂಳು ತುಂಬಿದ ಮೂಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬಸವಣ್ಣನವರ ಭಾವಚಿತ್ರಗಳನ್ನು ಇರಿಸಿ, ಅವುಗಳ ಮೇಲೆ ಹಳೆಯ ನೀರಿನ ಬಾಟಲಿಗಳನ್ನು ಇಟ್ಟಿರುವುದು ಹಾಗೂ ಪಕ್ಕದಲ್ಲಿ ಹಳೆಯ ಚಪ್ಪಲಿ ಇಟ್ಟಿರುವುದು ಕಂಡುಬಂದಿದೆ ಎಂದು ಆರೋಪಿಸಿದರು. ಈ ಕುರಿತು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ, ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಹಾಗೂ ಆಸ್ಪತ್ರೆಯ ಒಳಗೆ ನಡೆಯುವ ಪ್ರತಿಯೊಂದು ವಿಚಾರವನ್ನು ಗಮನಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ’ ಎಂದು ತಿಳಿಸಿದರು.

‘ಹೆರಿಗೆ ಕೊಠಡಿ ಸ್ವಚ್ಛತೆಯ ಕೊರತೆಯಿಂದ ಧೂಳು ತುಂಬಿದ್ದು, ಸೂಕ್ತ ವ್ಯವಸ್ಥೆಗಳಿಲ್ಲ. ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ದೂರುಗಳಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಆಸ್ಪತ್ರೆ ಆವರಣದಲ್ಲಿರುವ ಸಿಬ್ಬಂದಿ ವಸತಿಗೃಹಗಳಲ್ಲಿ ಯಾರೂ ವಾಸವಿಲ್ಲದ ಕಾರಣ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ತಕ್ಷಣ ಲಭ್ಯವಾಗುವ ಸಾಧ್ಯತೆ ಕಡಿಮೆಯಾಗಿದೆ. ಸರ್ಕಾರಿ ಕಟ್ಟಡ ಹಾಗೂ ಬೆಲೆಬಾಳುವ ವೈದ್ಯಕೀಯ ಉಪಕರಣಗಳು ಸಮರ್ಪಕ ನಿರ್ವಹಣೆಯಿಲ್ಲದೆ ದುಸ್ಥಿತಿಗೆ ತಲುಪಿವೆ’ ಎಂದು ಆರೋಪಿಸಿದರು.
ಇದಲ್ಲದೆ, ‘ಕೆಲ ಸಿಬ್ಬಂದಿ ಆಸ್ಪತ್ರೆಗೆ ಬಂದು ಹಾಜರಾತಿ ದಾಖಲಿಸಿ ಬಳಿಕ ಮನೆಗೆ ತೆರಳುತ್ತಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ದೂರಿದರು.
‘ಆರೋಗ್ಯ ಕೇಂದ್ರದ ಅವ್ಯವಸ್ಥೆ ಹಾಗೂ ಕರ್ತವ್ಯಲೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ, ಮೂಲಸೌಕರ್ಯ, ಕುಡಿಯುವ ನೀರು ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಚಾಲಕಿ ಭಾಗ್ಯಲಕ್ಷ್ಮೀ ಮೋತರಾಜ, ಲಕ್ಷ್ಮೀಕಾಂತ ಬಬಲಾದ, ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಸಂಚಾಲಕರಾದ ದಿಲೀಪ ಕಾಯನಕರ ಹಾಗೂ ಭವಾನಿ ಪ್ರಸಾದ ಶಿವಕೇರಿ ಉಪಸ್ಥಿತರಿದ್ದರು.





