ಸುರಪುರ ತಾಲೂಕಿನ ರುಕ್ಕಾಪೂರದಿಂದ ಬೇವಿನಾಳ ಎಸ್.ಎಚ್. ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಗೆ ಟೆಂಡರ್ ಆಗಿ ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸುವುದರ ಮೂಲಕ ಎಚ್ಚರಿಕೆ ನೀಡಿದರು.
ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಸಂಘದ ಮುಖಂಡರು ಸುರಪುರ ತಹಸೀಲ್ದಾರ್ ಮೂಲಕ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ತಾಲೂಕು ಅಧ್ಯಕ್ಷ ಹಣಮಂತರಾಯ ಚಂದಲಾಪೂರ ಮಾತನಾಡಿ, ‘ರುಕ್ಕಾಪೂರ-ಬೇವಿನಾಳ ಎಸ್.ಎಚ್. ರಸ್ತೆ ಡಾಂಬರೀಕರಣಕ್ಕೆ ಸುಮಾರು ಎರಡು ವರ್ಷಗಳ ಹಿಂದೆ ಟೆಂಡರ್ ಆಗಿದ್ದು, ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ರಸ್ತೆಗೆ ಮರಂ ಹಾಗೂ ಕಂಕರ್ ಹಾಕಿದ ಬಳಿಕ ಡಾಂಬರೀಕರಣ ಮಾಡದೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ವಾಹನ ಸವಾರರು, ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ಜಮೀನುಗಳಿಗೆ ತೆರಳುವ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.
‘ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಅತಿಯಾದ ಧೂಳು ಏಳುತ್ತಿದ್ದು, ರಸ್ತೆ ಬದಿಯ ಮನೆಗಳಿಗೆ ಧೂಳು ನುಗ್ಗುತ್ತಿದೆ. ಅಡುಗೆ ಮನೆಗಳಿಗೂ ಧೂಳು ಸೇರುತ್ತಿರುವುದರಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ’ ಎಂದು ಅವರು ಹೇಳಿದರು.
This video cannot be played in your browser. Open the video directly
‘ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ಬಾರಿ ತಹಸೀಲ್ದಾರ್ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ‘ಆಗುತ್ತದೆ, ಮಾಡಲಾಗುತ್ತದೆ’ ಎಂದು ಹೇಳಲಾಗುತ್ತಿದ್ದು, ಕಾರ್ಯರೂಪದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.
‘ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಗೈರು ಆರೋಪ: ಕರ್ತವ್ಯಲೋಪದ ವಿರುದ್ಧ ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಜಿಂಪಾ, ಕಾರ್ಯದರ್ಶಿ ವೆಂಕಟೇಶಗೌಡ ಕುಪಗಲ್, ಗೌರವಾಧ್ಯಕ್ಷ ಮಲ್ಲಣ್ಣ ಹಾಲಭಾವಿ, ಹುಣಸಗಿ ತಾಲೂಕು ಅಧ್ಯಕ್ಷ ಹನುಮಗೌಡ ನಾರಾಯಣಪುರ, ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ಶಿವನಗೌಡ ರುಕ್ಕಾಪೂರ, ನಾಗಪ್ಪ ಕುಪಗಲ್, ರಾಗು ಕುಪ್ಪಗಲ್, ಮೌನೇಶ ಅರಳಹಳ್ಳಿ, ಕಾಮರಾಯ ಮದಲಿಂಗನಾಳ,ಪ್ರಭು ದೊರಿ, ನಿಂಗನಗೌಡ ಗುಳಬಾಳ, ಮೋದಿನ್ ಬೇವಿನಾಳ, ತಿಪ್ಪಣ್ಣ ತಳವಾರ, ಭೀಮರಾಯ ಒಕ್ಕಲಿಗ, ಖುದಾಭಕ್ಷ, ಯಂಕೋಬ ದೊರೆ ಕುಪಗಲ್, ಶಾಂತಪ್ಪ ತಿಪ್ಪನಟಗಿ, ಭೀಮನಗೌಡ ಸೂಗೂರು, ಚಂದ್ರಶೇಖರ ಗುಳಬಾಳ, ಶಂಕ್ರಪ್ಪ ಗುಳಬಾಳ, ಶರಣಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ದೊಡ್ಡಮನಿ, ಮಾನಪ್ಪ ಶಿವನಗೌಡ, ಹನಮಂತ್ರಾಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.





