ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಳದೂರ ಗ್ರಾಮದ ಮುತ್ಯಾನಕಟ್ಟಿಯ ಬೀರಪ್ಪನ ಗುಡಿ ಹತ್ತಿರದ ಓಣಿಯಲ್ಲಿ ಸುಮಾರು 150 ಮನೆಗಳಿವೆ. ಜನರು ಕುಡಿಯುವ ನೀರಿಗೆ ಟ್ಯಾಂಕರ್ ಅವಲಂಬಿಸಬೇಕಿದೆ. ಕಳೆದ ಐದಾರು ದಿನಗಳಿಂದ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡದಿರುವುದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ಸಮಸ್ಯೆಯ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವು ಚೊಳಚಗುಡ್ಡ, “ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ಹೋಗಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಆದಷ್ಟು ಬೇಗ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ತೀವ್ರ ಅಭಾವದಿಂದ ದುರ್ಗಾನಗರದ ನಿವಾಸಿಗಳು ನೀರಿಗಾಗಿ ಸಮೀಪದ ಗುಳೇದಗುಡ್ಡ ಪಟ್ಟಣಕ್ಕೆ ಆಗಮಿಸಿ ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳಿಂದ ಕೊಡ, ಡಬ್ಬಿ ಹಾಗೂ ಇತರ ಪಾತ್ರೆಗಳಲ್ಲಿ ನೀರು ತುಂಬಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಹಣಮಂತ ಚಲವಾದಿ “ಸ್ಥಳೀಯರು ಹಲವು ಬಾರಿ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ. ಬೇಸಿಗೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದ್ದು, ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ದುರ್ಗಾನಗರಕ್ಕೆ ನೀರು ಪೂರೈಕೆ ಕಲ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈರಣ್ಣ ಹೊರಗಿನಮಠ, ಈರಣ್ಣ ಹುನಗುಂದ ಮಾತನಾಡಿ, “ಕಳೆದ ಒಂದು ವಾರದಿಂದ ದುರ್ಗಾನಗರದ ಅನೇಕ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಆಗದೆ ಇರುವುದರಿಂದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನನಿತ್ಯದ ಅಡುಗೆ, ಸ್ನಾನ, ಬಟ್ಟೆ ತೊಳೆಯುವುದು ಸೇರಿದಂತೆ ಮೂಲಭೂತ ಅಗತ್ಯಗಳಿಗೂ ನೀರಿನ ಕೊರತೆ ಎದುರಾಗಿದ್ದು, ಜನರು ದೂರದೂರಿನಿಂದ ನೀರು ತರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
ಸಮಸ್ಯೆಯ ಬಗ್ಗೆ ಮಾತನಾಡಿದ ಗ್ರಾಮಸ್ಥ ಅಣ್ಣಪ್ಪ ಕಂಬಾರ, “ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಪಾತ್ರೆಗಳನ್ನು ಹಿಡಿದು ಗುಳೇದಗುಡ್ಡ ಪಟ್ಟಣದ ಸಾರ್ವಜನಿಕ ನೀರಿನ ನಲ್ಲಿಗಳ ಬಳಿ ಸಾಲುಗಟ್ಟಿ ನಿಂತು ನೀರು ತುಂಬಿಕೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ನೀರಿಗಾಗಿ ಪ್ರತಿದಿನ ಹಲವು ಕಿಲೋಮೀಟರ್ ಸಂಚರಿಸಬೇಕಾಗಿರುವುದು ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ> ನಾರಾಯಣಪುರ ಜಲಾಶಯದ ಹಿನ್ನೀರು ಸಂತ್ರಸ್ತರಿಗಿಲ್ಲ ನೆಲೆ: ಕುರುಡಾಯಿತೇ ಸರ್ಕಾರ?
“ಒಂದು ವಾರದಿಂದ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ದಿನನಿತ್ಯದ ಕೆಲಸಗಳೆಲ್ಲ ಅಸ್ತವ್ಯಸ್ತವಾಗಿವೆ. ಕುಡಿಯಲು ಮತ್ತು ಅಡುಗೆಗೆ ಬೇಕಾದ ನೀರಿಗಾಗಿ ದೂರದ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನೀರು ಪೂರೈಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ʼಗೆ ಪ್ರತಿಕ್ರಿಯಿಸಿದ ಕೋಟೆಕಲ್ ಗ್ರಾಮ ಪಂಚಾಯಿತಿ ಪಿಡಿಒ ಆರತಿ ಕ್ಷತ್ರಿ, “ದುರ್ಗಾನಗರದಲ್ಲಿ ನೀರಿನ ಸಮಸ್ಯೆ ಕುರಿತು ಇದುವರೆಗೆ ಯಾವುದೇ ದೂರು ನನ್ನ ಗಮನಕ್ಕೆ ಬಂದಿಲ್ಲ. ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗುತ್ತಿದ್ದರೆ, ತಕ್ಷಣ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು” ಎಂದು ತಿಳಿಸಿದ್ದಾರೆ.
ಬೇಸಿಗೆ ಬಂತೆಂದರೆ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿ ಕುಡಿವ ನೀರಿಗೆ ಮೊರೆ ಇಡುವಂತಾಗಿದೆ. ಗ್ರಾಮಾಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಇನ್ನಾದರೂ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



