ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬಾಧಿತವಾಗಿರುವ ಕುಟುಂಬಗಳು ಶೆಡ್‌ನಲ್ಲಿ ವಾಸಿಸುತ್ತಿದ್ದು, ಸುಡುವ ಬಿಸಿಲಿಗೆ ಕಾದ ಕುಲುಮೆಯಂತಾಗಿರುವ ಅವರ ಗೋಳು ಕೇಳುವವರು ಇಲ್ಲದಂತಾಗಿದೆ. ಇಲ್ಲಿ ವಾಸಿಸುವ ಸಂತ್ರಸ್ತರ ಬದುಕು ತೀರಾ ಶೋಚನೀಯ.
ಇದ್ದಲಗಿ, ಬಿಸನಾಳಕೊಪ್ಪ, ಕಮದತ್ತಿ, ಅಡಿಹಾಳ ಅನಕಟ್ಟಿ ಗ್ರಾಮಗಳು ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿ ಪ್ರವಾಹದ ಭಾದಿತ ಗ್ರಾಮಗಳಾಗಿವೆ.
ಕಳೆದ 18 ವರ್ಷಗಳಿಂದ ಸಂತ್ರಸ್ತರ ಅಭದ್ರತೆ ಮತ್ತು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಂತ್ರಸ್ತರು ವಾಸಿಸುವ ಶೆಡ್ಡುಗಳು ಮಳೆ ಹಾಗೂ ಬಿಸಿಲಿನ ತಾಪದಿಂದ ತುಕ್ಕು ಹಿಡಿದಿದ್ದು, ಬೀಳುವ ಹಂತದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಅಲ್ಲಿಯೇ ಬದುಕು ಸಾಗಿಸಬೇಕಾಗಿದೆ.
“ಗ್ರಾಮದಲ್ಲಿ 200ಕ್ಕೂ ಅಧಿಕ ಶೆಡ್‌ಗಳಿದ್ದು, ಈ ಪೈಕಿ 50 ಶೆಡ್‌ಗಳಲ್ಲಿ ಸಂತ್ರಸ್ತರಿದ್ದಾರೆ. ಇನ್ನುಳಿದವರು ತಮ್ಮ ಹಳೆಯ ಮನೆಗಳಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿ ಹಳೆಯ ಮನೆಗಳತ್ತ ನೀರು ನುಗ್ಗಿದರೆ ಮನೆ ಖಾಲಿ ಮಾಡಿಬೇಕಾಗುತ್ತದೆ” ಎಂದು ರೇಣುಕಾ ವಾಲಿಕಾರ ಹೇಳಿದರು.
ಗ್ರಾಮದ ಹೊರವಲಯದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಮೂರ್ನಾಲ್ಕು ಕುಟುಂಬಗಳು ಮಾತ್ರ ನೆಲೆಸಿವೆ. ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ 254 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, 1,030 ಕುಟುಂಬಗಳು ನಿವೇಶನ ಪಡೆಯಲು ಅರ್ಹರಾಗಿವೆ. ಆದರೆ, ನಿಯಮಗಳ ಪ್ರಕಾರ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಒಂದು ಗುಂಟೆ ವಿಸ್ತೀರ್ಣ ಒಳಗೊಂಡ ನಿವೇಶನ ಮಾತ್ರ ನೀಡಲಾಗುತ್ತಿದೆ. ಭೂಸ್ವಾಧೀನದಿಂದ ಒಟ್ಟು 5,084 ನಿವೇಶನಗಳು ಲಭ್ಯವಿದ್ದು, ಒಂದು ಗುಂಟೆ ನಿವೇಶನದ ಬದಲು 4ಗುಂಟೆ ನಿವೇಶನ ಕೊಡಿ ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿದೆ.
“ಒಂದು ಗುಂಟೆ ನಿವೇಶನದಿಂದ ಆವಿಭಕ್ತ ಕುಟುಂಬಗಳ ಚೊಕ್ಕ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ದವಸ- ಧಾನ್ಯ, ಕೃಷಿ ಸಲಕರಣೆ, ಯಂತ್ರೋಪಕರಣ, ಹೊಟ್ಟು- ಮೇವು, ಸೌದೆ ಇತ್ಯಾದಿ ಸಾಮಗ್ರಿ ಸಂಗ್ರಹಣೆಗೆ, ಜಾನುವಾರು ಸಾಕಾಣಿಕೆಗೆ ಕೊಟ್ಟಿಗೆ ನಿರ್ಮಾಣ ಎಲ್ಲಕ್ಕಿಂತ ಮುಖ್ಯವಾಗಿ ಶೌಚಾಲಯ ನಿರ್ಮಾಣಕ್ಕೆ ಈ ಒಂದು ಗುಂಟೆ ನಿವೇಶನಗಳು ಸಾಲದಾಗುತ್ತವೆ” ಎಂಬುದು ಸಂತ್ರಸ್ತರ ಅಳಲು.
“ಗ್ರಾಮದಲ್ಲಿರುವ ಪುನರ್ವಸತಿ ಪ್ರದೇಶ ಅವ್ಯವಸ್ಥೆ ಆಗರವಾಗಿದ್ದು, ಖಾಲಿ ನಿವೇಶನಗಳಲ್ಲಿ ಸುತ್ತಲೂ ಮುಳ್ಳುಗಂಟಿಗಳು ಬೆಳೆದು ಪೊದೆಗಳಾಗಿವೆ. ವಿಷ ಜಂತುಗಳಿಗೆ ಆಶ್ರಯ ತಾಣವಾಗಿದೆ. ಸರಿಯಾದ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿಲ್ಲ. ಹೀಗಾಗಿ ಅಲ್ಲಿ ವಾಸಿಸಲು ತೊಂದರೆಯಾಗುತ್ತಿದೆ” ಎಂಬುದು ಸಂತ್ರಸ್ತ ಭೀಮಪ್ಪ ಅಡಿಹಾಳ ಅವರ ಮಾತು.
ಕೇವಲ ಒಂದು ಗುಂಟೆ ನಿವೇಶನದಲ್ಲಿ ಆವಿಭಕ್ತ ಕುಟುಂಬಗಳ ಬದುಕನ್ನು ಕಟ್ಟಿಕೊಳ್ಳುವುದು ದುಸ್ತರವಾಗಿದೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಹಾವೇರಿ | ಸೂರಿಲ್ಲದೇ ಸೊರಗುತ್ತಿವೆ 33 ಕುಟುಂಬಗಳು: ಸುಡುಗಾಡು ಸಿದ್ದರ ಬದುಕಿನ ವ್ಯಥೆ ಕೇಳುವವರಿಲ್ಲ…
ಈ ದಿನ.ಕಾಮ್ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.
ಒಟ್ಟಾರೆ ಬಡಜನಗಳ ಸಂಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ. ಇದರಿಂದ ಬೇಸತ್ತ ಜನ ಬೀದಿಗಿಳಿದು ಧರಣಿ ನಡೆಸಲು ಪ್ರಾರಂಬಿಸಿದ್ದಾರೆ. ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದ್ದು, ಇಂದಿಗೆ 5 ದಿನಗಳು ಕಳೆದಿವೆ. ಆದರೆ ಈವರೆಗೆ ಯಾವುದೇ ಅಧಿಕಾರಿಯೂ ಭೇಟಿ ನೀಡಿಲ್ಲ, ಶಾಸಕರೂ ಬಂದಿಲ್ಲ. ಹೀಗೇ ಮುಂದುವರೆದರೆ ವಿಕೋಪಕ್ಕೆ ಹೋಗುವುದಂತೂ ನಿಜ. ಸರ್ಕಾರ ಮತ್ತು ಅಧಿಕಾರಿಗಳು ಹೆಚ್ಚೆತ್ತುಕೊಂಡು ಶೀಘ್ರದಲ್ಲಿ ಕ್ರಮ ಕೈಗೊಂಡರೆ ಮಾತ್ರ ಶೆಡ್‌ಗಳಲ್ಲಿ ಅನುಭವಿಸುವ ಸಮಸ್ಯೆ ಪರಿಹಾರವಾಗಬಹುದು.




