ಸಚಿವ ಸ್ಥಾನಕ್ಕಾಗಿ ನಾನು ಅರ್ಜಿ ಹಾಕಿ ಭಿಕ್ಷೆ ಬೇಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಬಾರಿ ಬಹಿರಂಗ ಸಭೆಯಲ್ಲಿ ಮತ್ತು ಖಾಸಗಿಯಾಗಿ ಕರೆಸಿಕೊಂಡು ಮಾತನಾಡಿದ್ದರಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಯಾವುದೇ ನಿರಾಸೆಯಾಗಿಲ್ಲ ಎಂದು ಕಲಬುರಗಿ ಜಿಲ್ಲೆಯ ಆಳಂದ ಶಾಸಕ ಬಿ ಆರ್ ಪಾಟೀಲ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯರನ್ನು ಕಡೆಗಣಿಸಿರುವುದಷ್ಟೇ ಅಲ್ಲ, ಪ್ರಾದೇಶಿಕ ಅಸಮತೋಲನ, ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಹಾಗೂ ಜಾತಿ ಸಮತೋಲನವೂ ಕಂಡುಬಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಲಿಂಗಾಯತ ಸಮಾಜದಲ್ಲಿ ಹಲವು ಉಪಪಂಗಡಗಳಿವೆ. ಅವುಗಳಲ್ಲಿ ಬಹುದೊಡ್ಡ ಸಮಾಜವಾದ ಪಂಚಮಸಾಲಿ ಸಮುದಾಯಕ್ಕೆ ಒಂದೇ ಸಚಿವ ಸ್ಥಾನ ನೀಡಲಾಗಿದೆ. ಎಲ್ಲ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕಿತ್ತು” ಎಂದು ಹೇಳಿದರು.
ಪಂಚಮಸಾಲಿ ಸಮಾಜದಲ್ಲಿನ ಗೊಂದಲ ನಿವಾರಣೆಗೆ ಮುಂದಾಗುವಿರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಜಯ ಮೃತ್ಯುಂಜಯ ಸ್ವಾಮೀಜಿ ಅವರ ಪೀಠಕ್ಕೆ ತಾವು ಹೋಗಿದ್ದಾಗಿ ತಿಳಿಸಿದರು. ಜಾತಿಯ ಹೆಸರಿನಲ್ಲಿ ಪೀಠಗಳನ್ನು ಸ್ಥಾಪಿಸಬಾರದೆಂದು ಆಗಲೇ ಹೇಳಿದ್ದೆ. ಇಂತಹ ಪೀಠಗಳಿಂದ ಸಮಾಜದಲ್ಲಿ ಯಾವುದೇ ದೊಡ್ಡ ಬದಲಾವಣೆ ಆಗಿಲ್ಲ. ಸಮಾಜಕ್ಕೂ ನಿರೀಕ್ಷಿತ ಅನುಕೂಲವಾಗಿಲ್ಲ” ಎಂದರು.
“ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ಚಳವಳಿ ಅಗತ್ಯವಿದೆ. ಆದರೆ ಇಂದು ಎಲ್ಲರೂ ಆಸೆ ಕಳೆದುಕೊಂಡಿದ್ದಾರೆ. ಇದಕ್ಕೆ ವ್ಯವಸ್ಥೆಯೇ ಕಾರಣ. ವ್ಯಕ್ತಿ ಹಾಗೂ ವಿಚಾರಕ್ಕಿಂತ ಹಣವೇ ದೊಡ್ಡದಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ವಿಜಯಪುರ | ಬರದ ಛಾಯೆ: ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಸಚಿವ ಎಂ ಬಿ ಪಾಟೀಲ್ ಭರವಸೆ
“ದೇಶ ಹಾಗೂ ನಾಡಿನ ಜನರು ಒಟ್ಟಾಗಿ ಕುಳಿತು ಭವಿಷ್ಯದ ಬಗ್ಗೆ ಚರ್ಚೆ ನಡೆಸಬೇಕಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ವಿಷಾದನೀಯ. ಜೆಪಿ ಚಳವಳಿಯಿಂದ ಪ್ರೇರಣೆ ಪಡೆದು ಬದಲಾವಣೆ ತರುವ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೆವು. ಆದರೆ ನಾವು ಬಯಸಿದ ಬದಲಾವಣೆ ಹಾಗೂ ನಿರೀಕ್ಷೆಗಳು ಹುಸಿಯಾಗಿವೆ. ಇದಕ್ಕೆ ಒಬ್ಬಿಬ್ಬರು ಕಾರಣರಲ್ಲ, ಎಲ್ಲರೂ ಕಾರಣರಾಗಿದ್ದಾರೆ” ಎಂದು ಆರೋಪಿಸಿದರು.
“ಇದು ನನ್ನ ಕೊನೆಯ ಚುನಾವಣೆ. ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾದ ದಿನವೇ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಇದುವರೆಗೆ ನನ್ನ ರಾಜೀನಾಮೆ ಅಂಗೀಕಾರವಾಗಿಲ್ಲ. ಇದೇ ನನ್ನ ಕೊನೆಯ ಚುನಾವಣೆ” ಎಂದು ಬಿ ಆರ್ ಪಾಟೀಲ ಸ್ಪಷ್ಟಪಡಿಸಿದರು.




