ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಾಗೇಪಲ್ಲಿ,ಚೇಳೂರು ಸೇರಿದಂತೆ ಗುಡಿಬಂಡೆ ಸುತ್ತಮುತ್ತಲಿನ ತಾಲೂಕುಗಳಲ್ಲಿ ಬೆಂಬಲಿಗರ ಆಕ್ರೋಶ ಮುಗಿಲು ಮುಟ್ಟಿದೆ. ಈ ಅಸಮಾಧಾನದ ಬಿಸಿ ಇಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೂರು ತಾಲೂಕುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಕಾಂಗ್ರೆಸ್ ಹೈಕಮಾಂಡ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.
ಶಾಸಕರಿಗೆ ಸಚಿವ ಸ್ಥಾನ ಸಿಗದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆಂಬಲಿಗರು ಹಾಗೂ ಅಭಿಮಾನಿಗಳು ರಸ್ತೆಗಿಳಿದು ಬೃಹತ್ ಪ್ರತಿಭಟನೆ ಹಾಗೂ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದ ಬೆಂಬಲಿಗರು, ಹಸಿ ಮೆಣಸಿನಕಾಯಿ ತಿನ್ನುವ ಮೂಲಕ ಅತ್ಯಂತ ವಿನೂತನ ರೀತಿಯಲ್ಲಿ ತಮ್ಮ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ನರೇಂದ್ರ ಮಾತನಾಡಿ ನಮ್ಮ ಕ್ಷೇತ್ರದ ಶಾಸಕರಿಗೆ ಹೈಕಮಾಂಡ್ ಸಿಹಿ ನೀಡುವ ಬದಲಿಗೆ ಖಾರ ನೀಡಿದೆ. ಹೈಕಮಾಂಡ್ ನಮಗೆ ಸಿಹಿ ಕೊಟ್ಟಿದ್ದರೆ ನಾವು ಸಂಭ್ರಮದಿಂದ ಸಿಹಿ ಹಂಚಿ ತಿನ್ನುತ್ತಿದ್ದೆವು. ಆದರೆ ನಮಗೆ ಅನ್ಯಾಯ ಮಾಡಿ ಖಾರ ನೀಡಿರುವುದರಿಂದ, ನಾವು ಹಸಿ ಮೆಣಸಿನಕಾಯಿ ತಿನ್ನುವ ಮೂಲಕವೇ ನಮ್ಮ ಅಸಮಾಧಾನ ಮತ್ತು ಕಟು ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದೇವೆ” ಎಂದು ಹೈಕಮಾಂಡ್ ನಿರ್ಧಾರದ ವಿರುದ್ಧ ಚಾಟಿ ಬೀಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಎನ್‌ಎಸ್‌ಯುಐ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ವಿ.ಪೂಜಪ್ಪ, ಕೋಟಪ್ಪ ,ನಂಜುಂಡ, ಬಿ.ವಿ.ವೆಂಕಟರವಣ ,ಕೊಮುಲ್ ಮಂಜುನಾಥ್ ರೆಡ್ಡಿ, ಪಿ.ಮಂಜುನಾಥ್ ರೆಡ್ಡಿ, ಬೂರಗಮಡಗು ನರಸಿಂಹಪ್ಪ, ಟಿ.ಶ್ರೀನಿವಾಸ್, , ಸೋಮಶೇಖರ್, ಲಕ್ಷ್ಮೀಪತಿ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ,ಆನಂದ್,ಶ್ರೀನಿವಾಸ್ ,ಪ್ರಭಾಕರ್ ರೆಡ್ಡಿ, ಮನ್ಸೂರ್, ಸೋಮಶೇಖರ್, ಹಾಗೂ ಇತರರು ಹಾಜರಿದ್ದರು.




