ಬಾಂಗ್ಲಾದೇಶದಲ್ಲಿ ನಡೆದ ಭಾರಿ ಜನಾಕ್ರೋಶ ಹಾಗೂ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಅಧಿಕಾರ ಕಳೆದುಕೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, ತಮ್ಮ ಆಡಳಿತದ ಪತನಕ್ಕೆ ಕಾರಣವಾದ ಪ್ರತಿಭಟನೆಯ ಕುರಿತು ಮೌನ ಮುರಿದಿದ್ದಾರೆ. ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ (FCC South Asia) ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಶೇಖ್ ಹಸೀನಾ ಅವರು, 2024ರ ಜುಲೈ-ಆಗಸ್ಟ್‌ನಲ್ಲಿ ನಡೆದ ಅಶಾಂತಿ ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ, ಬದಲಿಗೆ ಯೋಜಿತ ರಾಜಕೀಯ ಗಲಭೆಯಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರ ಕೋರಿ ಭಾರತಕ್ಕೆ ಬಾಂಗ್ಲಾ ಪತ್ರ
ಮೀಸಲಾತಿ ಹೋರಾಟದಲ್ಲಿದ್ದ ನಿಜವಾದ ವಿದ್ಯಾರ್ಥಿಗಳನ್ನು ಕೆಲವು ಸಂಘಟಿತ ಹಿತಾಸಕ್ತಿ ಗುಂಪುಗಳು ಭಾವನಾತ್ಮಕವಾಗಿ ದುರ್ಬಳಕೆ ಮಾಡಿಕೊಂಡವು. ವಿದ್ಯಾರ್ಥಿಗಳ ಮುಗ್ಧತೆಯನ್ನು ಅಸ್ತ್ರವಾಗಿಸಿಕೊಂಡು, ಆಡಳಿತ ಬದಲಾವಣೆಯ ಹಿಂಸಾತ್ಮಕ ರಾಜಕೀಯ ಉದ್ದೇಶ ಸಾಧನೆಗೆ ಅವರ ಪ್ರತಿಭಟನೆಯನ್ನು ಬಳಸಿಕೊಳ್ಳಲಾಯಿತು ಎಂದು ಹಸೀನಾ ಆರೋಪಿಸಿದ್ದಾರೆ.
ತಮ್ಮ ಸರ್ಕಾರವು ಮೀಸಲಾತಿ ವಿಚಾರವನ್ನು ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯಿಂದ ಬಗೆಹರಿಸಲು ಶ್ರಮಿಸಿತ್ತು ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ ಹಸೀನಾ ಅವರ ಈ ವರ್ಚುವಲ್ ಮಾಧ್ಯಮ ಕಾರ್ಯಕ್ರಮಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತದ ನೆಲವನ್ನು ಯಾವುದೇ ನೆರೆಹೊರೆಯ ಸಾರ್ವಭೌಮ ದೇಶದ ವಿರುದ್ಧ ರಾಜಕೀಯ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ಲ ಎಂಬ ನೀತಿಯನ್ನು ಭಾರತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.




