ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದ ದಿ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡಿ ನಾಶಪಡಿಸಲಾಯಿತು.
ಜೂನ್ 25ರಂದು ಸಂಜೆ 4.30ರ ಸುಮಾರಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಪರಿಸರ ಸಂರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಮಾಲಿನ್ಯ ಉಂಟಾಗದಂತೆ ಮಾದಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿ ವಿಲೇವಾರಿ ಮಾಡಲಾಯಿತು.
ಈ ಕಾರ್ಯಾಚರಣೆಯ ಮೂಲಕ ಅಕ್ರಮ ಮಾದಕ ವಸ್ತುಗಳ ಜಾಲದ ವಿರುದ್ಧ ಪೊಲೀಸ್ ಇಲಾಖೆ ಮತ್ತೊಮ್ಮೆ ಕಠಿಣ ನಿಲುವು ಪ್ರದರ್ಶಿಸಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ನಿರಂತರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ), ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಸಮಿತಿಯ ಅಧ್ಯಕ್ಷರು, ಸಮಿತಿ ಸದಸ್ಯರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ವಿಲೇವಾರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದರು.




