ಬೆಳಗಾವಿ ನಗರ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ 6 ಮರಗಳು ಮತ್ತು 3 ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜಿಲ್ಲಾಸ್ಪತ್ರೆ ರಸ್ತೆ, ಶಾಹೂನಗರ ಮೊದಲನೇ ಕ್ರಾಸ್, ಜಿನಾ ಬಕುಲ್ ರಸ್ತೆ, ಹಳೆ ಆರ್‌ಟಿಒ ವೃತ್ತ, ಸದಾಶಿವನಗರ ಹಾಗೂ ಹಿಂಡಲಗಾ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲೇ ಮರಗಳು ಬುಡಸಮೇತ ಉರುಳಿವೆ. ಮಳೆಯ ತೀವ್ರತೆಯಿಂದ ರಸ್ತೆಗಳಲ್ಲಿ ಜನರು ಹಾಗೂ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಶಾಹೂನಗರದಲ್ಲಿ ಮರದ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಜನಜಂಗುಳಿ ಇದ್ದರೂ ಮರ ಮುರಿದು ಬೀಳುವ ಲಕ್ಷಣ ಕಂಡ ತಕ್ಷಣ ಜನರು ಸುರಕ್ಷಿತ ಸ್ಥಳಗಳಿಗೆ ಓಡಿದರು.
ಜಿನಾ ಬಕುಲ್ ಎದುರಿನ ರಸ್ತೆಯಲ್ಲಿ ಬೃಹತ್ ಮರದ ಜೊತೆಗೆ ಅದಕ್ಕೆ ಅಂಟಿಕೊಂಡಿದ್ದ ವಿದ್ಯುತ್ ಕಂಬವೂ ಧರೆಗುರುಳಿದೆ. ವಿದ್ಯುತ್ ಪ್ರವಹಿಸದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.



