ಬೆಳಗಾವಿ ಜಿಲ್ಲೆಯ ಅಥಣಿ
ಪಟ್ಟಣದಲ್ಲಿ ವಿವಾಹಿತೆಯೊಬ್ಬರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಪ್ರಕರಣಕ್ಕೆ ವರದಕ್ಷಿಣೆ ಕಿರುಕುಳದ ತಿರುವು ದೊರೆತಿದೆ.
ಮೃತ ಮಹಿಳೆಯನ್ನು ಸಂಗೀತಾ ಗಾಡಿವಡ್ಡರ್ ಎಂದು ಗುರುತಿಸಲಾಗಿದೆ. ಅವರು ವೆಂಕಟೇಶ್ ಗಾಡಿವಡ್ಡರ್ ಅವರೊಂದಿಗೆ ವಿವಾಹವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ತರಲು ಗಂಡ ವೆಂಕಟೇಶ್ ಸಂಗೀತಾಳ ತವರಿಗೆ ಒತ್ತಡ ಹಾಕುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಹಣ ನೀಡದ ಹಿನ್ನೆಲೆಯಲ್ಲಿ ಸಂಗೀತಾಳಿಗೆ ಹಲ್ಲೆ ನಡೆಸಿ, ಬಳಿಕ ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ಮುಂದುವರಿದಿದ್ದು, ವರದಿ ನಂತರ ನಿಖರ ಕಾರಣ ಬಹಿರಂಗವಾಗಲಿದೆ.




