ತಮಿಳುನಾಡಿನ ಇತಿಹಾಸದಲ್ಲಿ ಒಟ್ಟಿಗೆ 8 ಮಂದಿ ದಲಿತ ಸಮುದಾಯದ ನಾಯಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಈ ಹಿಂದೆ ಡಿಎಂಕೆ ಸರ್ಕಾರದಲ್ಲಿದ್ದ ಗರಿಷ್ಠ ಸಂಖ್ಯೆ 4 ಆಗಿತ್ತು. ಒಟ್ಟು 35 ಸದಸ್ಯ ಬಲ ಇರುವ ವಿಜಯ್ ಸಚಿವ ಸಂಪುಟದಲ್ಲಿ ಶೇ.20ಕ್ಕಿಂತ ಅಧಿಕ ಪ್ರಾತಿನಿಧ್ಯವನ್ನು ದಲಿತ ಸಮುದಾಯಕ್ಕೆ ನೀಡಲಾಗಿದೆ.
ಗುರುವಾರ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮಂತ್ರಿಮಂಡಲವು ವಿಸ್ತರಣೆಗೊಂಡಿದೆ. 23 ಮಂದಿ ಸಚಿವರುಗಳು ಪ್ರಮಾಣವಚನ ಸ್ವೀಕರಿಸಿದ್ದು ಈ ಪೈಕಿ ಇಬ್ಬರು ಕಾಂಗ್ರೆಸ್‌ನವರೂ ಸೇರಿದ್ದಾರೆ. ಇದು ತಮಿಳುನಾಡಿನ ಇತಿಹಾಸದಲ್ಲೇ ವೈವಿಧ್ಯಮಯ ಮತ್ತು ಯುವ ಸಚಿವ ಸಂಪುಟವಾಗಿದೆ. ಇಬ್ಬರು ಬ್ರಾಹ್ಮಣರು ಇರುವ ಈ ಸಚಿವ ಸಂಪುಟದಲ್ಲಿ ದಲಿತ ಸಮುದಾಯಕ್ಕೆ ಅಭೂತಪೂರ್ವ ಪ್ರಾತಿನಿಧ್ಯ ನೀಡಲಾಗಿದೆ. ಈ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ.
ಜೋಸೆಫ್ ವಿಜಯ್ ಸಂಪುಟದ ಬಲ ಈಗ 33 ಕ್ಕೆ ತಲುಪಿದ್ದು. ಗರಿಷ್ಠ ಸಚಿವರ ಮಿತಿ 35ಕ್ಕಿಂತ ಎರಡು ಸ್ಥಾನ ಕಡಿಮೆಯಿದೆ. ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಮಯದಲ್ಲಿ ತಮ್ಮ ಸರ್ಕಾರವನ್ನು ಬೆಂಬಲಿಸಿದ 25 ಶಾಸಕರನ್ನು ಹೊಂದಿರುವ ಎಐಎಡಿಎಂಕೆ ಗುಂಪಿಗೆ ವಿಜಯ್ ಈಗಾಗಲೇ ಬಾಗಿಲು ಮುಚ್ಚಿದ್ದಾರೆ. ಉಳಿದ ಎರಡು ಸಂಪುಟ ಸ್ಥಾನಗಳನ್ನು ಶುಕ್ರವಾರ ವಿಸಿಕೆ ಮತ್ತು ಐಯುಎಂಎಲ್ ಸದಸ್ಯರಿಗೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ವಿಜಯ್ ಸಂಪುಟ ವಿಸ್ತರಣೆ: ಕಾಂಗ್ರೆಸ್‌ನ ಇಬ್ಬರು ಸೇರಿ 23 ಮಂದಿ ಸಚಿವರಾಗಿ ಪ್ರಮಾಣವಚನ; ವಿಸಿಕೆಗೆ ಸದ್ಯಕ್ಕಿಲ್ಲ ಸ್ಥಾನ
ಮೇ 21ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ವೇಳೆ 7 ಮಂದಿ ದಲಿತ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಅದಕ್ಕೆ ಮರುದಿನವೇ ಅಂದರೆ ಇಂದು ಮೈತ್ರಿ ಪಕ್ಷವಾದ ವಿಡಾದಲೈ ಚಿರುತ್ತೆಗಳ್ ಕಚ್ಚಾ (ವಿಸಿಕೆ) ಪಕ್ಷದ ವನ್ನಿ ಅರಸು ಅವರು ಸಂಪುಟ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಬಾರಿಗೆ 8 ಮಂದಿ ದಲಿತರಿಗೆ ಸಚಿವ ಸ್ಥಾನ ಸಿಕ್ಕಿದೆ.

ಶಾಲಾ ಶಿಕ್ಷಣ ಸಚಿವ ಎ. ರಾಜಮೋಹನ್
ತಮಿಳುನಾಡಿನ ಹಾಲಿ ಶಾಲಾ ಶಿಕ್ಷಣ ಸಚಿವರಾದ ಎ. ರಾಜಮೋಹನ್ (ರಾಜಮೋಹನ್ ಆರುಮುಗಂ) ಪದವೀಧರರಾಗಿದ್ದಾರೆ. ತಮಿಳು ಭಾಷೆಯ ಮೇಲಿನ ನಿರರ್ಗಳತೆ ಮತ್ತು ಅದ್ಭುತ ಭಾಷಣ ಕಲೆಗೆ ರಾಜಮೋಹನ್ ಹೆಸರುವಾಸಿಯಾಗಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಮಾಧ್ಯಮ ರಂಗದಲ್ಲಿ ಅತ್ಯಂತ ಸಕ್ರಿಯರಾಗಿದ್ದರು. ಪ್ರಸಿದ್ಧ ಯೂಟ್ಯೂಬ್ ಚಾನೆಲ್ ಆದ ‘ಪುಟ್ ಚಟ್ನಿ’ ನಿರ್ದೇಶಕರಾಗಿ, ಸ್ಟ್ಯಾಂಡಪ್ ಕಾಮಿಡಿಯನ್ ಆಗಿ, ಟಿವಿ ನಿರೂಪಕರಾಗಿ ಜನಪ್ರಿಯತೆ ಗಳಿಸಿದವರು ರಾಜಮೋಹನ್. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಾಜಮೋಹನ್ ಚೆನ್ನೈನ ಎಗ್ಮೋರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.

ಪಶುಸಂಗೋಪನೆ ಸಚಿವೆ ಎಸ್. ಕಮಲಿ
ಕೇವಲ 28 ವರ್ಷದ ಎಸ್. ಕಮಲಿ ತಮಿಳುನಾಡು ವಿಜಯ್ ಸಚಿವ ಸಂಪುಟದಲ್ಲಿ ಪಶುಸಂಗೋಪನೆ ಸಚಿವೆಯಾಗಿದ್ದಾರೆ. ತಮಿಳುನಾಡು ಸರ್ಕಾರದ ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಕಮಲಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ಮತಯಾಚನೆ ಮಾಡಿದ್ದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳುನಾಡಿನ ರಾಸಿಪುರಂನ ಪಾವೈ ಮಹಿಳಾ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ 2018 ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪಡೆದಿರುವ ಕಮಲಿ ಗುರುಸ್ವಾಮಿಪಾಳ್ಯಂನ ವಿದ್ಯಾ ಮಂದಿರ ಕಾಲೇಜಿನಿಂದ 2023ರಲ್ಲಿ ಬಿ.ಎಡ್. ಪದವಿ ಪೂರೈಸಿದ್ದಾರೆ.

ತಿರುಪುರ್ ಜಿಲ್ಲೆಯ ಪರಿಶಿಷ್ಟ ಜಾತಿಗೆ (SC) ಮೀಸಲಾಗಿದ್ದ ಅವನಶಿ ಕ್ಷೇತ್ರದಿಂದ ಸ್ಪರ್ಧಿಸಿದ ಕಮಲಿ ತಮ್ಮ ಮೊದಲ ಚುನಾವಣೆಯಲ್ಲೇ 84,209 ಮತಗಳನ್ನು ಪಡೆದು ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು 15,373 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.
ಸಹಕಾರ ಸಚಿವ ವಿ. ಗಾಂಧಿರಾಜ್
ತಮಿಳುನಾಡಿನಲ್ಲಿ ಸಹಕಾರ ಸಚಿವರಾಗಿ ಸ್ಥಾನ ಪಡೆದಿರುವ ವಿ. ಗಾಂಧಿರಾಜ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅರಕ್ಕೋಣಂ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಗಾಂಧಿರಾಜ್ ಚುನಾವಣಾ ಅಫಿಡವಿಟ್‌ನಲ್ಲಿ ಘೋಸಿರುವಂತೆ ಅರಕ್ಕೋಣಂನ ಆದಿ ದ್ರಾವಿಡರ್ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, 1992ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಬಿ.ಎ ಪದವಿ ಕೋರ್ಸ್‌ಗೆ ಸೇರಿಕೊಂಡರಾದರೂ, 2ನೇ ವರ್ಷದಲ್ಲಿ ಅದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಬಳಿಕ ತಿರುವಳ್ಳೂರಿನ ಸೇಂಟ್ ಜಾನ್ ಬಾಸ್ಕೋ ಐಟಿಐ ಸಂಸ್ಥೆಯಲ್ಲಿ 1994ರಿಂದ 1996ರವರೆಗೆ ಐಟಿಐ (ಎಲೆಕ್ಟ್ರಿಷಿಯನ್) ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಗಾಂಧಿರಾಜ್ ರಾಜಕೀಯಕ್ಕೆ ಬರುವ ಮುನ್ನಎಲೆಕ್ಟ್ರಿಷಿಯನ್ ಮತ್ತು ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. 2018ರ ನಂತರ ನಟ ವಿಜಯ್ ಅವರ ‘ವಿಜಯ್ ಮಕ್ಕಳ್ ಇಯಕ್ಕಂ’ ಸಂಘಟನೆಯನ್ನು ಸೇರಿ, ರಾಣಿಪೇಟೆ ಜಿಲ್ಲಾ ಕಾರ್ಯದರ್ಶಿಯಾಗಿ ಬೆಳೆದರು. ವಿಧಾನಸಭೆ ಚುನಾವಣೆ ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ಗಾಂಧಿರಾಜ್ ಅರಕ್ಕೋಣಂ ಮುನ್ಸಿಪಾಲಿಟಿಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಪಿ. ಮದನ್ ರಾಜಾ
ಪಿ. ಮದನ್ ರಾಜಾ ತಮಿಳುನಾಡಿನ ಒಟ್ಟಪಿಡಾರಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ತಮಿಳುನಾಡು ಸರ್ಕಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME – Micro, Small and Medium Enterprises) ಸಚಿವರಾಗಿದ್ದಾರೆ. ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಪೂರೈಸಿರುವ ಮದನ್ ರಾಜಾ ರಾಜಕೀಯ ಪ್ರವೇಶಿಸುವ ಮುನ್ನ ಉದ್ಯಮಿಯಾಗಿದ್ದರು.

ವಾಣಿಜ್ಯ ತೆರಿಗೆಗಳು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಸಚಿವ ಡಿ. ಲೋಕೇಶ್ ತಮಿಳ್ ಸೆಲ್ವನ್
ಡಿ. ಲೋಕೇಶ್ ತಮಿಳ್ ಸೆಲ್ವನ್ (ಲೋಗೇಶ್ ತಮಿಳ್ ಸೆಲ್ವನ್) ಪ್ರಸ್ತುತ ತಮಿಳುನಾಡು ಸರ್ಕಾರದಲ್ಲಿ ವಾಣಿಜ್ಯ ತೆರಿಗೆಗಳು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಿಳ್ ಸೆಲ್ವನ್ ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಪಿ. ಧನಪಾಲ್ ಅವರ ಪುತ್ರ. ತಮಿಳ್ ಸೆಲ್ವನ್ ಚೆನ್ನೈನ ಪ್ರತಿಷ್ಠಿತ ಲೋಯೋಲಾ ಕಾಲೇಜಿನಿಂದ 2005ರಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಮುಗಿಸಿದ್ದಾರೆ. ಹಾಗೆಯೇ ದೆಹಲಿಯ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಅಂಡ್ ಮ್ಯಾನೇಜ್‌ಮೆಂಟ್’ (IIPM) ಸಂಸ್ಥೆಯಿಂದ 2007ರಲ್ಲಿ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಪರ್ಸನಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತಮ್ಮ ತಂದೆಯ ರಾಜಕೀಯ ಹಿನ್ನೆಲೆಯಿಂದಾಗಿ ಆರಂಭದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಸಕ್ರಿಯರಾಗಿದ್ದ ತಮಿಳ್ ಸೆಲ್ವನ್, 2024ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ ನೀಲಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಕಡೆಗಣನೆಯಿಂದಾಗಿ ಕಳೆದ ಫೆಬ್ರವರಿಯಲ್ಲಿ ಎಐಎಡಿಎಂಕೆ ತೊರೆದು, ನಟ ವಿಜಯ್ ಅವರ ಟಿವಿಕೆ ಸೇರಿದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾಮಕ್ಕಲ್ ಜಿಲ್ಲೆಯ ರಾಷ್ಟಿಪುರಂ ಕ್ಷೇತ್ರದಲ್ಲಿ ಸ್ಪರ್ಧಿಸಿ, ಭರ್ಜರಿ ಜಯ ಸಾಧಿಸಿದ್ದಾರೆ.
ಅನಿವಾಸಿ ತಮಿಳರ ಕಲ್ಯಾಣ ಸಚಿವ ಕೆ. ತೇನ್ನರಸು
ವಿಧಾನಸಭೆ ಚುನಾವಣೆಯಲ್ಲಿ ಶ್ರೀಪೆರಂಬದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಅಂದಿನ ಹಾಲಿ ಶಾಸಕ ಕೆ. ಸೆಲ್ವಪೆರುಂತಗೈ ಅವರನ್ನು 54,246 ಮತಗಳ ಭಾರಿ ಅಂತರದಿಂದ ಸೋಲಿಸಿದವರು ಕೆ. ತೇನ್ನರಸು. ತಮಿಳುನಾಡಿನ ತಿರುಪುಟ್ಕುಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ತೇನ್ನರಸು 8ನೇ ತರಗತಿ ಉತ್ತೀರ್ಣರಾಗಿದ್ದಾರೆ. ಸದ್ಯ ತೇನ್ನರಸು ಅನಿವಾಸಿ ತಮಿಳರ ಕಲ್ಯಾಣ, ನಿರಾಶ್ರಿತರು ಮತ್ತು ದೇಶಭ್ರಷ್ಟರ ಕಲ್ಯಾಣ ಇಲಾಖೆಯ ಸಚಿವ ಸ್ಥಾನವನ್ನು ಹೊಂದಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಇವರು ಕಮಿಷನ್ ಏಜೆಂಟ್ ಆಗಿ ವ್ಯಾಪಾರ ನಡೆಸುತ್ತಿದ್ದರು. ಯಾವುದೇ ಪ್ರಭಾವಿ ರಾಜಕೀಯ ಹಿನ್ನೆಲೆ ಇಲ್ಲದೆ, ತಳಮಟ್ಟದ ಕಾರ್ಯಕರ್ತರಾಗಿ ಬೆಳೆದು ಇಂದು ಸಚಿವರಾಗಿ ಹೊರಹೊಮ್ಮಿದ್ದಾರೆ.

ಉನ್ನತ ಶಿಕ್ಷಣ ಸಚಿವ ಪಿ. ವಿಶ್ವನಾಥನ್
ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಪಿ. ವಿಶ್ವನಾಥನ್ ಪ್ರಸ್ತುತ ತಮಿಳುನಾಡು ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಪಿ. ವಿಶ್ವನಾಥನ್ ಬಿ.ಎ. ಅರ್ಥಶಾಸ್ತ್ರ ಪದವೀಧರರಾಗಿದ್ದಾರೆ. ವಿಶ್ವನಾಥನ್ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಒಳಪಡುವ ಕಡಲೂರು ಜಿಲ್ಲೆಯ ಪೆರಿಯಾರ್ ಸರ್ಕಾರಿ ಕಲಾ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು 1989ರಲ್ಲಿ ಪೂರ್ಣಗೊಳಿಸಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಇವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪಿ. ವಿಶ್ವನಾಥನ್ ಅವರು 2009ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನ ಕಾಂಚೀಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸುವ ಮೂಲಕ 15ನೇ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದರು. ಸಂಸದರಾಗಿದ್ದ ಅವಧಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧುರೈ ಜಿಲ್ಲೆಯ ಮೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದಾರೆ. ವಿಶ್ವನಾಥನ್ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಏಕೈಕ ದಲಿತ ಅಭ್ಯರ್ಥಿ.
ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ವನ್ನಿ ಅರಸು
ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ (VCK) ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ವನ್ನಿ ಅರಸು ಸದ್ಯ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವನ್ನಿ 1989ರಲ್ಲಿ ಮಲ್ಲಂಗಿನಾರ್‌ನ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ತಮ್ಮ 12ನೇ ತರಗತಿಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ, ವನ್ನಿ ತಮ್ಮನ್ನು ಪೂರ್ಣಾವಧಿ ಸಾಮಾಜಿಕ ಸೇವಕ ಎಂದು ಘೋಷಿಸಿಕೊಂಡಿದ್ದಾರೆ.

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಾನೂರು ಕ್ಷೇತ್ರದಿಂದ ವಿಸಿಕೆ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ, ಎಐಎಡಿಎಂಕೆ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು. 2026ರ ವಿಧಾನಸಭೆ ಚುನಾವಣೆಯಲ್ಲಿ ತಿಂಡಿವನಂ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆಯ ಪಿ. ಅರ್ಜುನನ್ ಅವರನ್ನು 734 ಮತಗಳ ಕಡಿಮೆ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ತಮಿಳುನಾಡಿನ ಇತಿಹಾಸದಲ್ಲಿ ಒಟ್ಟಿಗೆ 8 ಮಂದಿ ದಲಿತ ಸಮುದಾಯದ ನಾಯಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಈ ಹಿಂದೆ ಡಿಎಂಕೆ ಸರ್ಕಾರದಲ್ಲಿದ್ದ ಗರಿಷ್ಠ ಸಂಖ್ಯೆ 4 ಆಗಿತ್ತು. ಒಟ್ಟು 35 ಸದಸ್ಯ ಬಲ ಇರುವ ವಿಜಯ್ ಸಚಿವ ಸಂಪುಟದಲ್ಲಿ ಶೇ.20ಕ್ಕಿಂತ ಅಧಿಕ ಪ್ರಾತಿನಿಧ್ಯವನ್ನು ದಲಿತ ಸಮುದಾಯಕ್ಕೆ ನೀಡಲಾಗಿದೆ. ಇನ್ನು ಕೇವಲ ಸಾಂಪ್ರದಾಯಿಕ ಇಲಾಖೆಗಳನ್ನಷ್ಟೇ ನೀಡದೆ, ಶಾಲಾ ಶಿಕ್ಷಣ (ಎ. ರಾಜಮೋಹನ್) ಹಾಗೂ ಉನ್ನತ ಶಿಕ್ಷಣದಂತಹ (ಪಿ. ವಿಶ್ವನಾಥನ್) ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಖಾತೆಗಳನ್ನು ದಲಿತ ಸಮುದಾಯದ ನಾಯಕರಿಗೆ ನೀಡಲಾಗಿದೆ ಎಂಬುದು ವಿಶೇಷ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



