ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಜಾಲ ಪತ್ತೆಯಾದ ಬೆನ್ನಲ್ಲೆ ಗಣಿನಾಡು ಬಳ್ಳಾರಿಯಲ್ಲೂ ಲೈಸೆನ್ಸ್ ಇಲ್ಲದೇ ಔಷಧ ಸಂಗ್ರಹ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲೈಸೆನ್ಸ್ ಇಲ್ಲದೆ ಔಷಧ ಸಂಗ್ರಹ ಹಾಗೂ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿ ಮಂಜುಳ ನೇತೃತ್ವದಲ್ಲಿ ಬಳ್ಳಾರಿ ನಗರದ ಮೋತಿ ಸರ್ಕಲ್ ಬಳಿಯ ಶ್ರೀ ಮಹಾವೀರ ಮೆಡಿಕಲ್ ಏಜೆನ್ಸಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಔಷಧಗಳ ಸಂಗ್ರಹ ಹಾಗೂ ಮಾರಾಟಕ್ಕೆ ಅಗತ್ಯವಿರುವ ಲೈಸೆನ್ಸ್ ಮತ್ತು ದಾಖಲೆಗಳು ಇಲ್ಲದೆ ಮೆಡಿಕಲ್ ಏಜೆನ್ಸಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಇತ್ತು. ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದು, ಪರಿಶೀಲನೆ ವೇಳೆ ಆಯುರ್ವೇದಿಕ್ ಉತ್ಪನ್ನಗಳು, ಫುಡ್ ಪ್ರಾಡಕ್ಟ್ ಸೇರಿದಂತೆ ವಿವಿಧ ಮೆಡಿಕಲ್ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ: ಬಿಜೆಪಿ ನೋಂದಣಿ ರದ್ದುಪಡಿಸಲು ದಸಂಸ ಧರಣಿ
ಏಜೆನ್ಸಿ ಮಾಲೀಕ ಮಹಾವೀರ್ ಎಂದು ತಿಳಿದು ಬಂದಿದೆ. ದಾಳಿ ವೇಳೆ ಅಗತ್ಯ ಪರವಾನಗಿ ಇಲ್ಲದಿರುವುದು ಕಂಡುಬಂದಿದೆ ಎನ್ನಲಾಗಿದ್ದು, ಸ್ಥಳದಲ್ಲಿದ್ದ ಔಷಧ ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




