ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜಾತಿಯ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗದಂತೆ ತಡೆಯಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ 2026ರ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಮಾಹಿತಿ ನೀಡಿದರು. ನಿಯಮಾವಳಿಗಳಲ್ಲಿನ ‘ಜಾತಿ ಆಧಾರಿತ ತಾರತಮ್ಯ’ದ ವ್ಯಾಖ್ಯಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಈ ಹೇಳಿಕೆ ನೀಡಲಾಗಿದೆ.
ಏನಿದು ವಿವಾದ?
ಯುಜಿಸಿಯ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಾವಳಿ-2026’ ಅನ್ನು ಜನವರಿ 13ರಂದು ಅಧಿಸೂಚನೆ ಮೂಲಕ ಜಾರಿಗೊಳಿಸಲಾಗಿತ್ತು. ಆದರೆ ಜನವರಿ 29ರಂದು ಸುಪ್ರೀಂ ಕೋರ್ಟ್ ಈ ನಿಯಮಗಳಿಗೆ ತಡೆ ನೀಡಿ, 2012ರ ನಿಯಮಾವಳಿಗಳೇ ಮುಂದಿನ ಆದೇಶದವರೆಗೆ ಜಾರಿಯಲ್ಲಿರಬೇಕು ಎಂದು ಸೂಚಿಸಿತ್ತು.
ಹೊಸ ನಿಯಮದ 3(1)(c)ರ ಪ್ರಕಾರ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿರುದ್ಧ ಜಾತಿ ಅಥವಾ ಪಂಗಡದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ಜಾತಿ ಆಧಾರಿತ ತಾರತಮ್ಯ ಎಂದು ಪರಿಗಣಿಸಲಾಗಿದೆ.
ಇದನ್ನು ಪ್ರಶ್ನಿಸಿ ಮೇಲ್ವರ್ಗದವರು ಅರ್ಜಿ ಸಲ್ಲಿಸಿದರು. ಅವರ ಪ್ರಕಾರ ಈ ವ್ಯಾಖ್ಯಾನದಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಜಾತಿಯ ಆಧಾರದ ಮೇಲೆ ತಾರತಮ್ಯವಾದರೆ ಅವರಿಗೆ ಇದೇ ರೀತಿಯ ನಿರ್ದಿಷ್ಟ ರಕ್ಷಣೆ ಸಿಗುವುದಿಲ್ಲ. ಅಂದರೆ, “ಜಾತಿ ತಾರತಮ್ಯದಿಂದ ಯಾರೇ ಬಲಿಯಾದರೂ ಅವರಿಗೆ ಸಮಾನ ರಕ್ಷಣೆ ಇರಬೇಕು” ಎಂಬುದು ಅರ್ಜಿದಾರರ ವಾದ.
ಆದರೆ ಹೊಸ ನಿಯಮಗಳಲ್ಲಿರುವ ‘ತಾರತಮ್ಯ’ದ ಸಾಮಾನ್ಯ ವ್ಯಾಖ್ಯಾನವು ಜಾತಿಯ ಆಧಾರದ ಮೇಲೆ ಯಾವುದೇ ವ್ಯಕ್ತಿಯ ವಿರುದ್ಧ ನಡೆಯುವ ಅನ್ಯಾಯವನ್ನೂ ಒಳಗೊಂಡಿದೆ. ಹೀಗಾಗಿ ಈ ನಿಯಮ ನಿಜವಾಗಿಯೂ ಸಾಮಾನ್ಯ ವರ್ಗದವರನ್ನು ರಕ್ಷಣೆಯಿಂದ ಹೊರಗಿಡುತ್ತದೆಯೇ ಎಂಬುದೇ ಈಗಿನ ಪ್ರಮುಖ ಪ್ರಶ್ನೆ.
2026ರ ಹೊಸ ನಿಯಮಗಳು ಜಾರಿಯಾದ ಕೆಲವೇ ದಿನಗಳಲ್ಲಿ ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಜನವರಿ 29ರಂದು ಸುಪ್ರೀಂ ಕೋರ್ಟ್ ಹೊಸ ನಿಯಮಗಳ ಜಾರಿಗೆ ತಡೆ ನೀಡಿತು. ಅಲ್ಲದೆ, ಮುಂದಿನ ಆದೇಶದವರೆಗೆ 2012ರ ಹಳೆಯ ನಿಯಮಗಳೇ ಜಾರಿಯಲ್ಲಿರಬೇಕು ಎಂದು ಸೂಚಿಸಿತು.
ಹೊಸ ನಿಯಮಗಳ ಕೆಲವು ಅಂಶಗಳು ಸ್ಪಷ್ಟವಾಗಿಲ್ಲ ಮತ್ತು ಅವು ದುರ್ಬಳಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂದು ನ್ಯಾಯಾಲಯ ಹೇಳಿತ್ತು. ಈ ನಿಯಮಗಳನ್ನು ಹಾಗೆಯೇ ಮುಂದುವರಿಸಿದರೆ ಅದರ ಪರಿಣಾಮಗಳು ವ್ಯಾಪಕವಾಗಬಹುದು ಮತ್ತು ಸಮಾಜವನ್ನು ವಿಭಜಿಸುವ ಸಾಧ್ಯತೆಯೂ ಇದೆ ಎಂದು ಪೀಠ ಆತಂಕ ವ್ಯಕ್ತಪಡಿಸಿತ್ತು.
2012ರ ನಿಯಮಗಳಲ್ಲಿ ಜಾತಿ ಸೇರಿದಂತೆ ವಿವಿಧ ಕಾರಣಗಳ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿ ಅಥವಾ ಸಿಬ್ಬಂದಿಗೆ ತಾರತಮ್ಯ ಮಾಡಬಾರದು ಎಂಬ ಸಾಮಾನ್ಯ ರಕ್ಷಣೆ ಇತ್ತು. 2026ರ ಹೊಸ ನಿಯಮದಲ್ಲಿ ಜಾತಿ ತಾರತಮ್ಯದ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸಲಾಗಿತ್ತು. ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ವಿರುದ್ಧದ ಜಾತಿ ತಾರತಮ್ಯವನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಇದೇ ಅಂಶ ಈಗ ವಿವಾದಕ್ಕೆ ಕಾರಣವಾಗಿದೆ.
ಹೊಸ ನಿಯಮಗಳಿಗೆ ಸಾಮಾನ್ಯ ವರ್ಗದ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೆ, ಸುಪ್ರೀಂ ಕೋರ್ಟ್ ಹೊಸ ನಿಯಮಗಳಿಗೆ ತಡೆ ನೀಡಿರುವುದನ್ನು ದಲಿತ ಮತ್ತು ಒಬಿಸಿ ಸಮುದಾಯಗಳ ಕೆಲವು ಸಂಘಟನೆಗಳು ವಿರೋಧಿಸಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ಹೊಸ ನಿಯಮಗಳಂತಹ ಬಲವಾದ ವ್ಯವಸ್ಥೆ ಅಗತ್ಯ. ಹಳೆಯ ನಿಯಮಗಳಿಗೆ ಮರಳುವುದರಿಂದ ದಲಿತ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಾಕಷ್ಟು ರಕ್ಷಣೆ ಸಿಗದೇ ಹೋಗಬಹುದು ಎಂಬುದು ಅವರ ಆತಂಕ.
2019ರಲ್ಲಿ ಪಾಯಲ್ ತಡ್ವಿ ಅವರ ತಾಯಿ ಮತ್ತು 2016ರಲ್ಲಿ ರೋಹಿತ್ ವೇಮುಲಾ ಅವರ ತಾಯಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ಪರಿಣಾಮಕಾರಿ ಮತ್ತು ಬಲವಾದ ವ್ಯವಸ್ಥೆ ರೂಪಿಸಬೇಕು ಎಂದು ಅವರು ಮನವಿ ಮಾಡಿದ್ದರು. ಈ ಅರ್ಜಿಗಳ ಹಿನ್ನೆಲೆಯಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ತಡೆಯುವ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ನಡೆಯಿತು.
ಇದನ್ನೂ ಓದಿ: 44 ನೇಮಕಾತಿ ರದ್ದುಗೊಳಿಸಿದ್ದ ಜಾರ್ಖಂಡ್ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ವಸತಿ ನಿಲಯ, ತರಗತಿ, ಮಾರ್ಗದರ್ಶನ ಗುಂಪುಗಳಂತಹ ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡುವ ವ್ಯವಸ್ಥೆ ಯಾವ ಸಂದರ್ಭದಲ್ಲಿ ತಾರತಮ್ಯವಾಗುತ್ತದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ. ಅದೇ ರೀತಿ, ರ‍್ಯಾಗಿಂಗ್ ಅನ್ನು ಜಾತಿ ತಾರತಮ್ಯದ ನಿರ್ದಿಷ್ಟ ರೂಪವಾಗಿ ಹೊಸ ನಿಯಮಗಳಲ್ಲಿ ಸೇರಿಸದಿರುವುದು ಸರಿಯೇ? ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ. ಜೊತೆಗೆ, ಹೊಸ ನಿಯಮಗಳು ಸಂವಿಧಾನದ ಸಮಾನತೆ ಮತ್ತು ಭ್ರಾತೃತ್ವದ ಹಕ್ಕುಗಳಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯಕ್ಕೆ ಕಡಿವಾಣ ಹಾಕಲು ಬಲಿಷ್ಠ ನಿಯಮಗಳ ಅಗತ್ಯದ ಬಗ್ಗೆ ದಲಿತ, ಆದಿವಾಸಿ ಮತ್ತು ಹಿಂದುಳಿದ ಸಮುದಾಯಗಳು ಹಲವು ವರ್ಷಗಳಿಂದ ಧ್ವನಿ ಎತ್ತುತ್ತಲೇ ಬಂದಿವೆ. ಜಾತಿ ಆಧಾರಿತ ಕಿರುಕುಳದ ಆರೋಪಗಳ ನಡುವೆ ಪಾಯಲ್ ತಡ್ವಿ, ರೋಹಿತ್ ವೇಮುಲಾ ಅವರಂತಹ ವಿದ್ಯಾರ್ಥಿಗಳ ಸಾವಿನ ಬಳಿಕ ಇಂತಹ ತಾರತಮ್ಯವನ್ನು ತಡೆಯಲು ಪರಿಣಾಮಕಾರಿ ವ್ಯವಸ್ಥೆ ರೂಪಿಸುವ ಒತ್ತಾಯ ಮತ್ತಷ್ಟು ಬಲಗೊಂಡಿತ್ತು. ಅದರ ಪರಿಣಾಮವಾಗಿ ಹೊಸ ಯುಜಿಸಿ ನಿಯಮಗಳು ಜಾರಿಗೆ ಬಂದ ಬೆನ್ನಲ್ಲೇ, ನಿಯಮದಲ್ಲಿನ ಒಂದು ವ್ಯಾಖ್ಯಾನದಿಂದ ಸಾಮಾನ್ಯ ವರ್ಗದವರು ತಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಆಕ್ಷೇಪ ಕೇಳಿಬಂದ ತಕ್ಷಣವೇ ಕೇಂದ್ರ ಸರ್ಕಾರ ನಿಯಮಗಳನ್ನು ಮರುಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ನಿವೇದಿಸಿದೆ. ಸರ್ಕಾರದ ಈ ನಡೆ ಜಾತಿ ತಾರತಮ್ಯದಿಂದ ದಶಕಗಳಿಂದ ಬಳಲುತ್ತಿರುವ ಸಮುದಾಯಗಳ ರಕ್ಷಣೆಯ ಪ್ರಶ್ನೆಯಲ್ಲಿ ಸರ್ಕಾರದ ಆದ್ಯತೆಗಳೇನು ಎಂಬುದರ ಮೇಲೆ ಚರ್ಚೆ ಹುಟ್ಟುಹಾಕಿದೆ.




