ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಜೈಲಿನಿಂದ ಬಿಡುಗಡೆಯಾದರೆ, ಸೇನೆ ಅಥವಾ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ಯಾವುದೇ ರೀತಿಯ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಅವರ ಆಪ್ತ ಹಾಗೂ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ (ಪಿಟಿಐ) ಪಕ್ಷದ ವಕ್ತಾರ ಜುಲ್ಫಿಕರ್ ಬುಖಾರಿ ಸ್ಪಷ್ಟಪಡಿಸಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಆದೇಶ ನೀಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು, ಸೇನೆಯ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಪಿಟಿಐ ಪಕ್ಷದ ನಿಲುವಿನಲ್ಲಿನ ಅಚ್ಚರಿಯ ಬದಲಾವಣೆಯನ್ನು ಇದು ಸೂಚಿಸುತ್ತಿದೆ. 2023ರಲ್ಲಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸಿದಾಗಿನಿಂದ ಸೇನಾ ಮುಖ್ಯಸ್ಥ ಮುನೀರ್ ವಿರುದ್ಧ ಪಿಟಿಐ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸ್ವತಃ ಇಮ್ರಾನ್ ಖಾನ್ ಕೂಡ ಮುನೀರ್ ಅವರನ್ನು ‘ಮಾನಸಿಕ ಅಸ್ವಸ್ಥ’ ಎಂದು ಈ ಹಿಂದೆ ಜರೆದಿದ್ದರು.
ಬುಧವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬುಖಾರಿ, “ಒಂದು ವೇಳೆ ಇಮ್ರಾನ್ ಖಾನ್ ನಾಳೆಯೇ ಬಿಡುಗಡೆಯಾದರೂ, ದೇಶಕ್ಕೆ ಹಾನಿಯಾಗುವಂತಹ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ. ಇದರರ್ಥ ಅವರು ಸೇನಾ ನಾಯಕರೊಂದಿಗೆ ಸಂಘರ್ಷಕ್ಕೆ ಇಳಿಯುತ್ತಾರೆ ಎಂದಲ್ಲ. ದೇಶದ ಒಳಿತಿಗಾಗಿ ಅವರು ತಮ್ಮ ನೋವನ್ನು ನುಂಗಿಕೊಳ್ಳಲಿದ್ದಾರೆ,” ಎಂದು ತಿಳಿಸುವ ಮೂಲಕ ಸೇನೆಯೊಂದಿಗೆ ರಾಜಿ ಮಾಡಿಕೊಳ್ಳುವ ಸ್ಪಷ್ಟ ಸುಳಿವು ನೀಡಿದ್ದಾರೆ.
ಸೇನೆ ಮತ್ತು ಪಿಟಿಐ ನಡುವೆ ಸದ್ಯ ಯಾವುದೇ ಅಧಿಕೃತ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುನೀರ್ ಅವರನ್ನು ಪಾಕಿಸ್ತಾನದ ಅತ್ಯಂತ ಪ್ರಬಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. “ಮುನೀರ್ ಅವರು ಮನಸ್ಸು ಮಾಡಿದರೆ, ಬಿಕ್ಕಟ್ಟನ್ನು ಶಮನಗೊಳಿಸಬಹುದು. ಪ್ರತಿಯೊಬ್ಬ ರಾಜಕೀಯ ಕೈದಿಯೂ 24 ಗಂಟೆಗಳಲ್ಲಿ ಹೊರಬರಬಹುದು,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ಲೇಷಕರ ಅನುಮಾನ:
ಆದರೆ, ರಾಜಕೀಯ ವಿಶ್ಲೇಷಕರು ಬುಖಾರಿ ಅವರ ಈ ಹೇಳಿಕೆಯನ್ನು ಎಚ್ಚರಿಕೆಯಿಂದ ಗಮನಿಸಿದ್ದಾರೆ. ಇಮ್ರಾನ್ ಖಾನ್ ಮತ್ತು ಅವರ ಆಪ್ತ ವಲಯದ ನಾಯಕರ ನಡುವೆ ಕಳೆದ ಎಂಟು ತಿಂಗಳಿನಿಂದ ಯಾವುದೇ ನೇರ ಸಂಪರ್ಕವಾಗಿಲ್ಲ. ಪ್ರತ್ಯೇಕ ಕೊಠಡಿಯಲ್ಲಿ (Solitary confinement) ಬಂಧಿಯಾಗಿರುವ ಖಾನ್ ಅವರ ಪ್ರಸ್ತುತ ಆಲೋಚನೆಗಳು ಪಕ್ಷದ ಇತರ ನಾಯಕರ ನಿಲುವಿಗಿಂತ ಭಿನ್ನವಾಗಿರುವ ಸಾಧ್ಯತೆಯಿದೆ. ಜೈಲಿನಲ್ಲಿರುವ ಖಾನ್ ಅವರ ಅನುಪಸ್ಥಿತಿಯಲ್ಲಿ, ಸರ್ಕಾರದ ಜೊತೆ ಮಾತುಕತೆ ನಡೆಸುವಷ್ಟು ಪಕ್ಷದ ನಾಯಕತ್ವ ಒಗ್ಗಟ್ಟಾಗಿದೆಯೇ ಎಂಬುದು ಅನುಮಾನ ಎಂದು ‘ಅಟ್ಲಾಂಟಿಕ್ ಕೌನ್ಸಿಲ್’ನ ಹಿರಿಯ ಫೆಲೋ ಮೈಕೆಲ್ ಕುಗೆಲ್‌ಮನ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮುನೀರ್ ಅವರನ್ನು ‘ಇತಿಹಾಸದ ಅತ್ಯಂತ ಕ್ರೂರ ಸರ್ವಾಧಿಕಾರಿ’ ಎಂದು ಇಮ್ರಾನ್ ಖಾನ್ ತೀವ್ರವಾಗಿ ಟೀಕಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸೆ. 27ರಂದು ಬೃಹತ್ ಪ್ರತಿಭಟನೆ:
ಸೇನೆಯೊಂದಿಗೆ ಮೃದು ಧೋರಣೆಯ ಲಕ್ಷಣಗಳು ಕಂಡುಬರುತ್ತಿದ್ದರೂ, ಸೆಪ್ಟೆಂಬರ್ 27ರಂದು ಪಿಟಿಐ ಯೋಜಿಸಿರುವ ದೇಶವ್ಯಾಪಿ ಪ್ರತಿಭಟನಾ ಮೆರವಣಿಗೆ ನಿಗದಿಯಂತೆ ನಡೆಯಲಿದೆ ಎಂದು ಬುಖಾರಿ ತಿಳಿಸಿದ್ದಾರೆ. ಇಮ್ರಾನ್ ಖಾನ್ ಅವರಿಗೆ ನ್ಯಾಯಾಲಯದ ಆದೇಶದಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗಬೇಕು, ಅವರ ಭೇಟಿಗೆ ಕುಟುಂಬ ಮತ್ತು ವಕೀಲರಿಗೆ ಮುಕ್ತ ಅವಕಾಶ ನೀಡಬೇಕು ಹಾಗೂ ಅಂತಿಮವಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ. ಅಜ್ಞಾತ ಸ್ಥಳದಲ್ಲಿರುವ ಪಕ್ಷದ ಹಿರಿಯ ನಾಯಕರು ಕೂಡ ಈ ಪ್ರತಿಭಟನಾ ಸಭೆಗಳನ್ನು ಸಂಘಟಿಸಲು ಹೊರಬರಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಸರ್ಕಾರ ಮತ್ತು ಸೇನೆಯು ಈ ವರದಿ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೇನೆಯು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರೆ, ಇಮ್ರಾನ್ ಖಾನ್ ಅವರ ಮೇಲಿನ ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಗೆ ಸೇರಿವೆ ಎಂದು ಸರ್ಕಾರ ಹೇಳುತ್ತಲೇ ಬಂದಿದೆ.




