ಬೀದರ್ | ಈಶ್ವರ ಖಂಡ್ರೆಗೆ ಇರುವ ಸಿಎಂ ಯೋಗ ತಪ್ಪಿಸಬೇಡಿ: ಮಾಜಿ ಸಚಿವ ಪಿಜಿಆರ್ ಸಿಂಧ್ಯಾ

ಬೀದರ್‌ ಜಿಲ್ಲೆಯ ಹಲವೆಡೆ ಚುನಾವಣಾ ಪ್ರಚಾರ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಆಗುವ ಎಲ್ಲ ಸಾಧ್ಯತೆಗಳು ಇವೆ. ಹಾಗಾಗಿ ಕ್ಷೇತ್ರದ ಜನ ಇಂತಹ ಅವಕಾಶ ಕಳೆದು ಕೊಳ್ಳದೆ ಈಶ್ವರ ಖಂಡ್ರೆ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದರು.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಸಿಂಧ್ಯಾ ರೋಡ್ ಶೋ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಮಾತಯಾಚಿಸಿದ ವೇಳೆ ಮಾತನಾಡಿದರು. “ಕ್ಷೇತ್ರದ ಶಾಸಕರಾಗಿ ಈಶ್ವರ ಖಂಡ್ರೆ ಅವರು ಕಳೆದ ಹದಿನೈದು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವುದರ ಜತೆಗೆ ಭರಪೂರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಗಡಿಭಾಗ ಹಿಂದಿಗಿಂತ ಹೆಚ್ಚು ಅಭಿವೃದ್ದಿ ಹೊಂದಿದೆ. ಕುಡಿವ ನೀರು, ರಸ್ತೆ ಅಭಿವೃದ್ಧಿ, ನೀರಾವರಿ ಯೋಜನೆ ಅನುಷ್ಟಾನ ಸೇರಿದಂತೆ ಕಲವು ಮೂಲಭೂತ ಸೌಲಭ್ಯಗಳಿಗೆ ಒತ್ತು ಕೊಟ್ಟಿದ್ದಾರೆ” ಎಂದು ಹೇಳಿದರು.

“ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಭಿವೃದ್ಧಿಪರ ಚಿಂತನೆಯುಳ್ಳ ನಾಯಕರು ಕ್ಷೇತ್ರ ಮತ್ತು ರಾಜ್ಯಕ್ಕೆ ಅವಶ್ಯಕ. ಮತದಾರರು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಕಾಂಗ್ರೆಸ್‌ಗೆ ಮತ ನೀಡಬೇಕು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಮಾತನಾಡಿ, “ಈ ಬಾರಿಯ ಚುನಾವಣೆ ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿದೆ. ಬಿಜೆಪಿ ಅಸತ್ಯದ ಮಾರ್ಗದಲ್ಲಿ ನಡೆದು ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಬಡವರಿಗೆ ಸಿಂಗಲ್ ಮನೆ ನೀಡಲಿಲ್ಲ. ಬೆಲೆ ಏರಿಕೆ ಬಿಸಿಯಿಂದ ಜನರು ಹೈರಾಣಾಗಿದ್ದಾರೆ. ಬೀಜ, ರಸಗೊಬ್ಬರ ಏರಿಕೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರದಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆಯಲು ಜನ ಸಂಕಲ್ಪ ಮಾಡಬೇಕು” ಎಂದರು.

“ಗಡಿಭಾಗವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದೇನೆ. ಶಾಸಕನಾದ ಬಳಿಕ ಗಡಿಭಾಗದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ. ಹಿಂದೆಯೆಂದೂ ಕಾಣದ ರೀತಿಯಲ್ಲಿ ರಸ್ತೆ ಅಭಿವೃದ್ಧಿ, ನೀರಾವರಿ ಯೋಜನೆ,  ಆಸ್ಪತ್ರೆ, ಶಾಲಾ-ಕಾಲೇಜು ಕಟ್ಟಡ ನಿರ್ಮಾಣ, ದೇಗುಲಗಳ ಜೀರ್ಣೋದ್ಧಾರ ಸೇರಿ ಮುಂತಾದ ಅಭಿವೃದ್ಧಿಪರ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಅಭಯ ಸಾಲೊಂಕಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

ಬೀದರ್ ದಕ್ಷಿಣದಲ್ಲಿ ಜೆಡಿಎಸ್ ಅಭ್ಯರ್ಥಿ ಮನೆ-ಮನೆ ಪ್ರಚಾರ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಬಂಡೆಪ್ಪ ಖಾಶೆಂಪುರ್ ಗುರುವಾರ ಬೆಳಗ್ಗೆ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದ ವೇಳೆ ಮಾತನಾಡಿ, “ಜೆಡಿಎಸ್ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಈ ಚುನಾವಣೆಯಲ್ಲಿ ನಮ್ಮನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತಂದರೆ, ನಾವು ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲಿದ್ದೇವೆ. ರೈತರ ಬೋರ್ವೆಲ್‌ಗಳಿಗೆ ದಿನದ ಇಪ್ಪತ್ನಾಲ್ಕು ತಾಸು ವಿದ್ಯುತ್ ಪೂರೈಕೆ ಮಾಡಲಿದ್ದೇವೆ”  ಎಂದರು.

“ಜೆಡಿಎಸ್‌ ಅಧಿಕಾರಕ್ಕೆ ಬಂದ ಕೂಡಲೆ ರೈತರಿಗೆ ಪ್ರತಿ ಎಕರೆಗೆ ಹತ್ತು ಸಾವಿರ ರೂ.ನಂತೆ ಹತ್ತು ಎಕರೆವರೆಗೂ ಕೃಷಿ ಖರ್ಚಿಗಾಗಿ ಸಹಾಯಧನ ನೀಡುತ್ತೇವೆ. ಹಲವು ವೇತನಗಳನ್ನು ಹೆಚ್ಚಿಸುತ್ತೇವೆ. ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡುತ್ತೇವೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಜನಪರ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ” ಎಂದರು.

“ಮಹತ್ವದ ಜನಪರ ಯೋಜನೆಗಳ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಕ್ಷೇತ್ರದ ಮತ್ತು ರಾಜ್ಯದ ಮತದಾರರು ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತ ನೀಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು” ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಂದ್ರಸಿಂಗ್

ಬೀದರ ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಂದ್ರಸಿಂಗ್ ಅವರು ಗುರುವಾರ ಕ್ಷೇತ್ರದ ಮನ್ನಾಏಖೇಳ್ಳಿ, ಮಂಗಲಗಿ, ಬನ್ನಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಗ್ರಾಮಗಳ ಮನೆ ಮನೆಗೂ ತೆರಳಿ ಮತಯಾಚನೆ ನಡೆಸಿದರು. ತಮಗೆ ಮತ ನೀಡುವಂತೆ ಮನವಿ ಮಾಡಿದರು.

“ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಕ್ರಮ ಸಂಖ್ಯೆ 09 ʼವಿದ್ಯುತ್ ಕಂಬʼದ ಗುರುತಿಗೆ ತಮ್ಮ ಅಮೂಲ್ಯ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು” ಎಂದು ಪಕ್ಷೇತರ ಅಭ್ಯರ್ಥಿ ಚಂದ್ರಸಿಂಗ್ ಮತದಾರರಿಗೆ ಕೋರಿದರು.

“ಕ್ಷೇತ್ರದಲ್ಲಿ ಈವರೆಗೆ ಮೂರು ಚುನಾವಣೆಗಳು ನಡೆದಿವೆ. ಗೆದ್ದವರು ಕೆಲಸ ಮಾಡಿದರೆ ಕ್ಷೇತ್ರ ಹೀಗಿರುತ್ತಿರಲಿಲ್ಲ. ಯಾವುದೇ ಕೆಲಸ ಆಗದಿರುವುದರಿಂದ ಜನ ರೋಸಿ ಹೋಗಿದ್ದಾರೆ. ಹೊಸ ಮುಖದತ್ತ ಕ್ಷೇತ್ರದಲ್ಲಿ ಅಲೆ ಸೃಷ್ಟಿಯಾಗಿದೆ. ಪಕ್ಷೇತರ ಅಭ್ಯರ್ಥಿಯಾದ ನನಗೆ ಎಲ್ಲ ಕಡೆಯಿಂದಲೂ ಬೆಂಬಲ ಸಿಗುತ್ತಿದ್ದೆ. ನನ್ನ ಗೆಲುವು ಖಚಿತ” ಎಂದು ಚಂದ್ರಸಿಂಗ್ ‌ ವಿಶ್ವಾಸ ವ್ಯಕ್ತಪಡಿಸಿದರು.

“ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಕ್ಷೇತ್ರದ ಎಲ್ಲ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಪಾದಯಾತ್ರೆ ಮೂಲಕ ಮನೆ ಮನೆಗೂ ಭೇಟಿ ನೀಡಿ ಮತಯಾಚಿಸುತ್ತಿದೇನೆ. ಹೋದಲ್ಲೆಲ್ಲ ಮತದಾರರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ” ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ತಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸ್ಥಳೀಯ ಅನೇಕ ಗಣ್ಯರು, ಹಲವಾರು ಮುಖಂಡರು, ಯುವಕರು ಮತ್ತು ಕಾರ್ಯಕರ್ತರು ಇದ್ದರು.

ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಹೀಂಖಾನ್

ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಹೀಂಖಾನ್ ಅವರು ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಮಿಂಚಿನ ಪ್ರಚಾರ ನಡೆಸಿದರು.

ಕ್ಷೇತ್ರದ ಗುಮ್ಮಾ, ಅಲಿಯಂಬರ್, ಯರನಳ್ಳಿ, ರಾಜನಾಳ ಮತ್ತಿತರ ಗ್ರಾಮಗಳಲ್ಲಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತ ಕೋರಿದರು.

“ನನ್ನನ್ನು ಮೂರು ಬಾರಿ ಆಯ್ಕೆ ಮಾಡಿರುವ  ಬೀದರ್ ಕ್ಷೇತ್ರದ ಜನರಿಗೆ ಚಿರಋಣಿಯಾಗಿದ್ದೇನೆ. ಕ್ಷೇತ್ರದಲ್ಲಿ ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗುಣಮಟ್ಟದ ರಸ್ತೆ, ಆಸ್ಪತ್ರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಮುಂತಾದ ಮಹತ್ವದ ಕೆಲಸಗಳಿಂದಾಗಿ ಜಿಲ್ಲಾ ಕೇಂದ್ರ ಬೀದರ್ ಚಿತ್ರಣವೇ ಬದಲಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್ ದಕ್ಷಿಣ ಕ್ಷೇತ್ರ | ‘ತೆನೆ’ ಕೋಟೆ ಭೇದಿಸಲು ಕೈ-ಕಮಲ ಗುದ್ದಾಟ

“ಬೀದರ್ ಕ್ಷೇತ್ರದಲ್ಲಿ ಇನ್ನೂ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಯೋಜನೆ ಇದೆ. ಕ್ಷೇತ್ರವನ್ನು ಸಮಸ್ಯೆಮುಕ್ತಗೊಳಿಸುವುದು ತಮ್ಮ ಸಂಕಲ್ಪವಾಗಿದೆ. ಈ ಎಲ್ಲ ಕಾರ್ಯಗಳ ಸಾಕಾರಕ್ಕಾಗಿ ಮತದಾರರು ತಮಗೆ ಇನ್ನೊಂದು ಅವಕಾಶ ಕೊಡಬೇಕು” ಎಂದು ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಔರಾದ(ಬಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಪ್ರಭು.ಬಿ ಚವ್ಹಾಣ 

ಸಚಿವ ಪ್ರಭು.ಬಿ ಚವ್ಹಾಣ  ಔರಾದ(ಬಿ) ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಂಚರಿಸಿ ಭರ್ಜರಿ ಪ್ರಚಾರ ನಡೆಸಿ‌ ಮತ ಯಾಚಿಸಿದರು.

“ಔರಾದ(ಬಿ) ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಜನತೆ ನೆಮ್ಮದಿಯಿಂದ ಜೀವಿಸುವ ವಾತಾವರಣ ನಿರ್ಮಿಸಲಾಗಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕಿದೆ. ಕ್ಷೇತ್ರದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಣ್ಣಪುಟ್ಟ ಕಂಪನಿಗಳನ್ನು ತಂದು ಯುವಕರ ಕೈಗೆ ಉದ್ಯೋಗಗಳನ್ನು ಒದಗಿಸುವ ಯೋಜನೆ ತಯಾರಿಸಲಾಗಿದೆ. ಅದನ್ನು ಅನುಷ್ಠಾನಕ್ಕೆ ತರುವುದಿದೆ” ಎಂದು ತಿಳಿಸಿದರು.

“ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿ ಪಥದಲ್ಲಿರುವ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳು ಮತ್ತು ಅನುದಾನ ತಂದು ಅಭಿವೃದ್ಧಿಗೆ ವೇಗ ನೀಡಬೇಕಿರುವುದರಿಂದ ಮತ್ತೊಮ್ಮೆ ಅವಕಾಶ ನೀಡಬೇಕು” ಎಂದು ಕೋರಿದರು.  

ಈ ಸಂದರ್ಭದಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ, ಮುಖಂಡರು ಸುರೇಶ ಭೊಸ್ಲೆ, ದೊಂಡಿಬಾ ನರೋಟೆ, ಕಿರಣ ಪಾಟೀಲ, ಶರಣಪ್ಪ ಪಂಚಾಕ್ಷರಿ, ದಯಾನಂದ ಕಾಳೆ, ಬಾಜಿರಾವ ಬಿರಾದಾರ, ಅನಿಲ ವಾಡೇಕರ್, ಸಂತೋಷ ಬಾರೋಳೆ, ವೆಂಕಟರಾವ ಡೊಂಬಾಳೆ, ಧನಾಜಿ ಡೊಂಬಾಳೆ, ಶತೃಘನ್ ಬಿರಾದಾರ, ವೈಜಿನಾಥ, ರಾಜೇಂದ್ರ ಮಾಳೆ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here