ಮುಂಗಾರು ಹಂಗಾಮಿನ ಸೋಯಾಬಿನ್ ಬಿತ್ತನೆ ಬೀಜಗಳು ವಿತರಣೆ ಮಾಡುವಲ್ಲಿ ಭಾರಿ ಮಟ್ಟದ ಭ್ರಷ್ಟಾಚಾರ ನಡೆದಿದ್ದು ರಾಜ್ಯದ ರೈತರಿಗೆ ಸಿಗಬೇಕಾದ ಸಬ್ಸಿಡಿ ದರದ ಬಿತ್ತನೆ ಬೀಜಗಳು ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ರೈತರ ಪಾಲಾಗಿವೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಗಂಭೀರವಾಗಿ ಆರೋಪಿಸಿದೆ.
ಈ ಕುರಿತು ರಾಷ್ಟ್ರೀಯ ಅಹಿಂದ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ ದೇವಕತ್ತೆ ನೇತ್ರತ್ವದಲ್ಲಿ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
“ರಾಜ್ಯದ ರೈತರಿಗೆ ಸಿಗಬೇಕಾದ ಬಿತ್ತನೆ ಬೀಜಗಳನ್ನು, ಅಧಿಕಾರಿಗಳು ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿ ರಾಜ್ಯಗಳ ರೈತರಿಗೆ ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೃಷಿ ಅಧಿಕಾರಿ ಔರಾದ್ ರೈತ ಸಂಪರ್ಕ ಕೇಂದ್ರದಲ್ಲಿ ಮನ ಬಂದಂತೆ ವ್ಯಕ್ತಿಗಳನ್ನು ಕರೆದುಕೊಂಡು ಕೇಂದ್ರದಲ್ಲಿ ಬೀಜ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ” ಎಂದು ದೂರಿದ್ದಾರೆ.
“ಔರಾದ್ ಕ್ಷೇತ್ರದ ಬಾವಲಗಾಂವ, ಸಾವರಗಾಂವ, ಹೊಕ್ರಣಾ, ಭಂಡಾರಕುಮಟಾ, ಖೇರ್ಡಾ, ಹುಲ್ಯಾಳ, ಎಕಂಬಾ, ಜಮಾಲಪೂರ, ಖಂಡೇಕೇರಿ, ಹಸ್ಸಿಕೇರಿ, ಗೌಂಡಗಾಂವ, ಡೋಣಗಾಂವ, ಮುಂಗನಾಳ, ಬೋರಾಳ, ಕಪ್ಪೆಕೇರಿ, ಎಕಲಾರ, ಅಲ್ಲಾಪೂರ ಈ ಎಲ್ಲಾ ಗ್ರಾಮದ ರೈತರಿಗೆ ಬಿತ್ತನೆ ಬೀಜಗಾಗಿ ಔರಾದ್ ರೈತ ಸಂಪರ್ಕ ಕೇಂದ್ರ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಬಂದಿದೆ. ಅಧಿಕಾರಿಗಳು ಸ್ಥಳೀಯ ರೈತರಿಗೆ ರಿಯಾಯತಿ ದರದಲ್ಲಿ ಬೀಜ ನೀಡದೆ ಸತಾಯಿಸುತ್ತಿದ್ದು, ಲಂಚ ಪಡೆದು ಅನ್ಯ ರಾಜ್ಯದ ರೈತರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸೋರುವ ಕೊಠಡಿ, ಶಿಕ್ಷಕರ ಕೊರತೆ : ಆತಂಕದಲ್ಲಿ ಮಕ್ಕಳ ಕಲಿಕೆ!
ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಸತ್ಯಾಗ್ರಹ ನಡೆಸುವುದಾಗಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಲಕ್ಷ್ಮಣ ದೇವಕತ್ತೆ, ರಮೇಶ ಚವ್ಹಾಣ್, ಘಾಳಪ್ಪ ಬೆಂಬಳಖೇಡೆ, ರಾಜು ಮುದಾಳೆ, ಸಚಿನ ಮತ್ರೆ, ಅಮರ ದ್ಯಾಡೆ, ಮಲ್ಲಿಕಾರ್ಜುನ ಹೊಳಸಮುದ್ರ, ರವೀಂದ್ರ ಬಳತೆ, ಭಂಗೆ ಹಾಗೂ ರಮೇಶ ಕಾಂಬಳೆ ಸೇರಿದಂತೆ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.




