ಮೊಬೈಲ್ ನೀಡುವ ವಿಚಾರಕ್ಕೆ ಉಂಟಾದ ವಾಗ್ವಾದದ ವೇಳೆ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಮಹಿಳೆಯೊಬ್ಬಳಿಗೆ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2023ರ ಏಪ್ರಿಲ್ 30ರಂದು ನಗರದ ಕೀರ್ತಿ ಹೋಟೆಲ್ ಸಮೀಪದ ಡೋರ ಗಲ್ಲಿ ಕ್ರಾಸ್ ಬಳಿ ನಾಗರಾಜ ಭೀಮಶಿ ರಾಗಿಪಾಟೀಲ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜಯಶ್ರೀ ಪವನ ಪವಾರ ಮೊಬೈಲ್ ನೀಡುವಂತೆ ಕೇಳಿದ್ದಳು. ಇದಕ್ಕೆ ನಾಗರಾಜ ಮರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಕೋಪಗೊಂಡ ಜಯಶ್ರೀ ತನ್ನ ಬಳಿಯಿದ್ದ ಚಾಕುವಿನಿಂದ ನಾಗರಾಜನ ಎದೆಗೆ ಇರಿದಿದ್ದಳು. ಗಂಭೀರವಾಗಿ ಗಾಯಗೊಂಡ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ಪಿಐ ಪಾಲ್ ಪ್ರಿಯಕುಮಾರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಅವರು ಆರೋಪಿ ಜಯಶ್ರೀ ಪವನ ಪವಾರಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕ ನಾರಾಯಣ ಆರಿ ತಿಳಿಸಿದ್ದಾರೆ.



