ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ 55 ಮೀಟರ್ ಇಷ್ಟಲಿಂಗ ನಿರ್ಮಾಣಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಪೂಜೆ ಸಲ್ಲಿಸಿ ಅನುಭವ ಮಂಟಪದ ಕಾಮಗಾರಿಯನ್ನು ಪರಿಶೀಲಿಸಿದರು.
ಬಳಿಕ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ʼಬಸವಾದಿ ಶರಣರು ಈ ಜಗತ್ತಿನ ಸರ್ವಶ್ರೇಷ್ಟ ದಾರ್ಶನಿಕರು, ಮಹಾ ಮಾನವತಾವಾದಿಗಳು, ಕಾಯಕವೇ ಕೈಲಾಸವನ್ನು ಅಳವಡಿಸಿಕೊಂಡು ಜಗತ್ತಿಗೆ ಪ್ರಥಮ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದರು. 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಕೆತ್ತಲಾಗುತ್ತಿದೆ. ವೈಜ್ಞಾನಿಕವಾಗಿ ನೆಮ್ಮದಿ ನೀಡುವಂಥ ಇಷ್ಟಲಿಂಗ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಬದುಕನ್ನು ಹಸನಗೊಳಿಸಿಕೊಳ್ಳಲು ವೈಚಾರಿಕ ವಚನಗಳು ಸಹ ಆಧುನಿಕ ವಿಜ್ಞಾನ ತಂತ್ರಜ್ಞಾನ ಮೂಲಕ ಐಐಟಿ ವಿಜ್ಞಾನಿಗಳ ಮೂಲಕವಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದುʼ ಎಂದರು.
ʼಕಾಯಕವೇ ಕೈಲಾಸ ಎಂದು ಹೇಳಿರುವ ಶರಣರ ಜೀವನವನ್ನು ಬಿಂಬಿಸುವ ಶರಣ ಗ್ರಾಮ ನಿರ್ಮಾಣಗೊಳ್ಳುತ್ತಿದೆ. ಈಗಿನ ಯುವಕರಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಕೇಂದ್ರ ಆರಂಭಿಸಲಾಗುವುದು. ವೃತ್ತಿಯಲ್ಲಿ ಯಾವುದು ಮೇಲಿಲ್ಲ ಕೀಳಿಲ್ಲʼ ಎಂದು ಸಚಿವರು ತಿಳಿಸಿದರು.
ಅನುಭವ ಮಂಟಪಕ್ಕೆ ಹಣದ ಕೊರತೆ ಇಲ್., ಈವರೆಗೆ 480 ಕೋಟಿ ಖರ್ಚಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪೈಕಿ 280 ಕೋಟಿ ಅನುದಾನ ನೀಡಿದ್ದಾರೆ. ಉಳಿದ ಹಣವನ್ನು ಸಹ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ ಎಂದ ಅವರು ಕಾಲಮಿತಿಯಲ್ಲಿ ಕಾಮಗಾತಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ : ಬೀದರ್ | ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು : ವಿಜಯೋತ್ಸವ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅನುಭವ ಮಂಟಪದ ಸಂಯೋಜಕರಾದ ಡಾ.ಬಾಬಾಸಾಹೇಬ್ ಗಡ್ಡೆ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು.




