ಸದ್ಯೋಜಾತ ಲಿಂಗವು ದೇವರ ದ್ವಂದ್ವ ಅಭಿವ್ಯಕ್ತಿಗಳ ಒಂದು ವಿಶಿಷ್ಟ ರೂಪವಾಗಿದೆ. ಒಂದು ಕಡೆ ಇದು ರೂಪ ಮತ್ತು ಹೆಸರನ್ನು (ನಾಮ) ಸೂಚಿಸುವ ಲಿಂಗವಾದರೆ, ಅದೇ ಸಮಯದಲ್ಲಿ ನಾಲ್ಕು ದಿಕ್ಕುಗಳತ್ತ ಮುಖ ಮಾಡುವ ಮೂಲಕ ಅನಂತತೆ ಮತ್ತು ಅತೀಂದ್ರಿಯತೆಯನ್ನು ಸಂಕೇತಿಸುತ್ತದೆ. ಒಂದೇ ವಿಗ್ರಹದಲ್ಲಿ ಸಗುಣ-ನಿರ್ಗುಣ ಹಾಗೂ ಸಾಕಾರ-ನಿರಾಕಾರದ ಈ ಏಕೀಕರಣವು ಸದ್ಯೋಜಾತನ ಸಾರ್ವತ್ರಿಕತೆಯನ್ನು (Universality) ಸಾರುತ್ತದೆ
ಪಂಚಮಸಾಲಿ ಸಮಾಜವು ಇಂದು ಸ್ವಹಿತಾಸಕ್ತಿಯ ರಾಜಕಾರಣದ ದಾಳವಾಗುತ್ತಿರುವುದು ದುರದೃಷ್ಟಕರ. ವೀರಶೈವ, ಲಿಂಗಾಯತ, ಹಿಂದೂ ಎಂಬ ವ್ಯಾಖ್ಯಾನಗಳ ನಡುವೆ ಈ ಸಮಾಜದ ಮೂಲ ಬೇರುಗಳನ್ನೇ ಮರೆಮಾಚುವ ಪ್ರಯತ್ನ ನಡೆಯುತ್ತಿದೆ.
ಅಕ್ಷರಗಳಿಗಿಂತ ಮಣ್ಣನ್ನೇ ನಂಬಿದ, ಕಲ್ಲುಗಳಲ್ಲಿ, ತಾಳೆಗರಿಗಳಲ್ಲಿ ಇತಿಹಾಸ ಬರೆಯುವ ಬದಲು ಮಣ್ಣಿನಲ್ಲಿ ಇತಿಹಾಸ ಸೃಷ್ಟಿಸಿದ ಈ ಕೃಷಿಕ ಸಮಾಜವು ಹದಿನೆಂಟು ಹಿಟ್ಟುಗಳನ್ನು (ಸಮಾಜಗಳನ್ನು) ಸಲಹಿದ ದಾತಾರರು. ಸತ್ಯದ ಹಾದಿ ನಿಧಾನವಿರಬಹುದು, ಆದರೆ ಅದು ಅಂತಿಮವಾಗಿ ಇತಿಹಾಸದ ಕತ್ತಲನ್ನು ಸೀಳಿ ಬೆಳಕಿಗೆ ಬಂದೇ ಬರುತ್ತದೆ. ಈ ಬರಹವು ಆ ಸತ್ಯದ ಹುಡುಕಾಟದ ಮೊದಲ ಹೆಜ್ಜೆ.
ಕಳೆದ ಲೇಖನದಲ್ಲಿ ವೀರಬಣಂಜುಗಳ ಹಾಗೂ ಪಂಚಮಸಾಲಿಗಳ ಸಂಬಂಧದ ಬಗ್ಗೆ ಚರ್ಚಿಸಲಾಗಿತ್ತು. “ಪಂಚಮಸಾಲಿ” ಪದನಿಷ್ಪತ್ತಿ ಅಷ್ಟು ಸರಳವಾಗಿ ಕೈಗೆಟುಕುವುದಿಲ್ಲ. ಇದರ ಸಂಶೋಧನೆಯ ಆಳಕ್ಕೆ ಇಳಿದು, ಬೇರುಗಳಿಂದ ಸತ್ಯವನ್ನು ಹೆಕ್ಕಿ ತೆಗೆಯಬೇಕಾಗುತ್ತದೆ.
ಪಂಚಮಸಾಲಿಗಳ ಉಗಮದ ಬಗ್ಗೆ ಶಿವಪ್ಪಶಾಸ್ತ್ರಿಗಳು ಹಾಗೂ ಡಾ. ಎಂ. ಎಂ. ಕಲಬುರ್ಗಿಯವರ ವಾದಕ್ಕೆ ವ್ಯತಿರಿಕ್ತವಾದ ಮಾಹಿತಿಯನ್ನು ‘ವೀರಶೈವ ಸದಾಚಾರ ಸಂಗ್ರಹ’ವು ಒದಗಿಸುತ್ತದೆ. ಇದರಲ್ಲಿ ಪಂಚಮಸಾಲಿಗಳ ಉಗಮಕ್ಕೆ ಕಾರಣನಾದ ‘ಪಂಚಮುಖ ಗಣೇಶ್ವರ’ನು ಶಿವನ ಐದನೆಯ ಮುಖವಾದ ‘ಈಶಾನ’ ಮುಖದಿಂದ ಹುಟ್ಟಿದನೆಂದು ಉಲ್ಲೇಖಿಸಲಾಗಿದೆ. ಈ ವಾದವನ್ನು ನಿವೃತ್ತ ಐ.ಎ.ಎಸ್. ಅಧಿಕಾರಿ ಹಾಗೂ ಸಂಶೋಧಕ ಬಾಸ್ರೂರು ಸುಬ್ಬರಾವ್ ಸಮರ್ಥಿಸುತ್ತಾರೆ. ಇವರು ಪಂಚಮಸಾಲಿಗಳು ಶಿವನ ಐದನೆಯ ಮುಖವಾದ ‘ಈಶಾನ’ ಮುಖದ ಅನುಯಾಯಿಗಳು ಹಾಗೂ ಅದೇ ಪಂಗಡದವರೆಂದು ತಾರ್ಕಿಕವಾಗಿ ವಿವರಿಸುತ್ತಾರೆ. ಅವರು ತಮ್ಮ ‘ಲಿಂಗಾಯತ ದರ್ಶನ’ ಪುಸ್ತಕದಲ್ಲಿ ಶಿವನ ಐದು ಮುಖಗಳ ಸ್ಥಾವರ ಲಿಂಗವನ್ನು ಗುರುತಿಸಿ, ಅದಕ್ಕೆ ಸದ್ಯೋಜಾತನೆಂದು ಹೆಸರಿಸಿ, ಆ ಅಪರೂಪದ ಲಿಂಗದ ವಿವರಣೆ ನೀಡುತ್ತಾರೆ.
“ಸದ್ಯೋಜಾತನು ಮಹಾದೇವನ ಪಶ್ಚಿಮಾಭಿಮುಖವಾದ ಮುಖ, ಮತ್ತು ಈಶಾನವು ಮೇಲ್ಮುಖವಾಗಿ ನೋಡುವ ಮುಖವಾಗಿದೆ. ನಾಲ್ಕು ದಿಕ್ಕುಗಳಲ್ಲಿ ಮುಖಗಳನ್ನು ಹೊಂದಿರುವ ಲಿಂಗವಿದು; ಐದನೆಯ ಮೇಲ್ಮುಖವನ್ನು ನಿಗೂಢ ಅಥವಾ ರಹಸ್ಯಮಯವೆಂದು ಪರಿಗಣಿಸಲಾಗಿದ್ದು, ಅದನ್ನು ಕಲಾಕೃತಿಗಳಲ್ಲಿ ತೋರಿಸಲಾಗುವುದಿಲ್ಲ (ಬಾದಾಮಿಯ ಮಹಾಕೂಟದಲ್ಲಿರುವ ಲಿಂಗ ಮತ್ತು ಹುಬ್ಬಳ್ಳಿಯ ಉಣಕಲ್ಲಿನಲ್ಲಿರುವ ಚಂದ್ರಮೌಳೀಶ್ವರ ಲಿಂಗಗಳನ್ನು ಗಮನಿಸಬಹುದು). ಸದ್ಯೋಜಾತ ಲಿಂಗವು ದೇವರ ದ್ವಂದ್ವ ಅಭಿವ್ಯಕ್ತಿಗಳ ಒಂದು ವಿಶಿಷ್ಟ ರೂಪವಾಗಿದೆ. ಒಂದು ಕಡೆ ಇದು ರೂಪ ಮತ್ತು ಹೆಸರನ್ನು (ನಾಮ) ಸೂಚಿಸುವ ಲಿಂಗವಾದರೆ, ಅದೇ ಸಮಯದಲ್ಲಿ ನಾಲ್ಕು ದಿಕ್ಕುಗಳತ್ತ ಮುಖ ಮಾಡುವ ಮೂಲಕ ಅನಂತತೆ ಮತ್ತು ಅತೀಂದ್ರಿಯತೆಯನ್ನು ಸಂಕೇತಿಸುತ್ತದೆ. ಒಂದೇ ವಿಗ್ರಹದಲ್ಲಿ ಸಗುಣ-ನಿರ್ಗುಣ ಹಾಗೂ ಸಾಕಾರ-ನಿರಾಕಾರದ ಈ ಏಕೀಕರಣವು ಸದ್ಯೋಜಾತನ ಸಾರ್ವತ್ರಿಕತೆಯನ್ನು (Universality) ಸಾರುತ್ತದೆ. ಹಿಂದಿನ ಕಾಳಾಮುಖ ಶೈವರು ಮತ್ತು ನಾಥ ಪಂಥದವರು ಸದ್ಯೋಜಾತನನ್ನು ತಮ್ಮ ಆರಾಧ್ಯ ದೈವವಾಗಿ ಸ್ವೀಕರಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಮಹಾಕೂಟದಲ್ಲಿರುವ ಈ ಸದ್ಯೋಜಾತನ ವಿಗ್ರಹವು ದೇವಾಲಯದ ಆವರಣದ ಹೊರಗೆ ನೆಲೆಗೊಂಡಿದ್ದು, ದಲಿತರ ಪೂಜೆಗೂ ಮುಕ್ತವಾಗಿ ಲಭ್ಯವಿತ್ತು”. ಇಂತಹ ಸದ್ಯೋಜಾತ ಲಿಂಗಗಳು ಇಡೀ ಭಾರತದಲ್ಲಿ ಕೇವಲ ಎರಡು ಮಾತ್ರ ಇವೆ ಎನ್ನುತ್ತಾರೆ ಬಾಸ್ರೂರು ಸುಬ್ಬರಾವ್. ಇವು ಲಿಂಗಾಯತರ ಮೂಲ ನೆಲೆಯಲ್ಲಿರುವುದು ಕಾಕತಾಳೀಯವಲ್ಲ. ಬಸವಪೂರ್ವ ಯುಗದಲ್ಲಿ ಪಂಚಮಸಾಲಿಗಳು ಕಲಾಮುಖ ಮತ್ತು ನಾಥ ಪಂಥಗಳಲ್ಲಿ ಗುರುತಿಸಿಕೊಂಡಿದ್ದರು. ಮಹಾಕೂಟದಲ್ಲಿರುವ ಲಿಂಗವು ದೇವಸ್ಥಾನದ ಹೊರಗಡೆ ಇರುವುದು ವೈಚಾರಿಕವಾಗಿ ಬಹಳ ಮಹತ್ವದ್ದಾಗಿದೆ.

ಅಲ್ಲದೆ, ಇಂಥಹದೇ ಇನ್ನೊಂದು ಲಿಂಗವು ಉಣಕಲ್ ದೇವಸ್ಥಾನದಲ್ಲಿದೆ. ಅಲ್ಲಿರುವ ಗರ್ಭಗುಡಿಯ ಬಾಗಿಲುಗಳು ನಾಲ್ಕು ದಿಕ್ಕುಗಳಲ್ಲಿ ತೆರೆದುಕೊಂಡಿವೆ.


ಇದಕ್ಕೆ ಇಂಬು ಕೊಡುವಂತೆ ಸಂಶೋಧಕ ಡಾ. ರಮೀಂದ್ರನಾಥ ನಂದಿಯವರು ಅವಿಭಾಜ್ಯ ಧಾರವಾಡ, ವಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳು ಲಿಂಗಾಯತರ ಮೂಲ ನೆಲೆ ಎನ್ನುತ್ತಾರೆ. ಹನ್ನೆರಡನೆಯ ಶತಮಾನದ ನಂತರವೇ ಲಿಂಗಾಯತವು ಉಳಿದ ಪ್ರದೇಶಗಳಿಗೆ ಪಸರಿಸಿತು ಎಂಬ ಇವರ ಹೇಳಿಕೆಯು, ಈ ಪ್ರದೇಶದಲ್ಲಿ ಪಂಚಮಸಾಲಿಗಳು ಇಂದಿಗೂ ಬಹುಸಂಖ್ಯಾತರಾಗಿರುವುದನ್ನು ಪುಷ್ಟೀಕರಿಸುತ್ತದೆ.

‘ವೀರಶೈವ ಸದಾಚಾರ ಸಂಗ್ರಹ’ವು ಪಂಚಮಸಾಲಿಗಳು ಶಿವನ ‘ಈಶಾನ’ ಮುಖದಿಂದ ಹುಟ್ಟಿದ ಪಂಚಮುಖ ಗಣೇಶ್ವರನ ಐವರು ಮಕ್ಕಳ ಸಂತತಿ ಎಂದು ದಾಖಲಿಸುತ್ತದೆ. ಆದರೆ ಇದನ್ನು ಡಾ. ಎಂ. ಚಿದಾನಂದಮೂರ್ತಿಯವರು ತಳ್ಳಿಹಾಕುತ್ತಾ, “ಮುಖಾರಿ, ಕಾಲಾರಿ, ಪುರಾರಿ ಹೆಸರುಗಳೆಲ್ಲ ಜಂಗಮರಿಂದ ಆಧುನಿಕ ಕಾಲದಲ್ಲಿ ಕಲ್ಪಿತವಾಗಿವೆ” ಎಂದು ತಿರಸ್ಕರಿಸುತ್ತಾರೆ.
“ಸ್ವಯಂಭವಾಗಮ” ಮತ್ತು “ವೀರಶೈವ ಸದಾಚಾರ ಸಂಗ್ರಹ” ಗ್ರಂಥಗಳಲ್ಲಿ “ಗಣ” ಶಬ್ದ ಪ್ರಮುಖವಾಗಿ ಬಳಕೆಯಾಗಿದೆ. ಪಂಚಮಸಾಲಿಗಳ ಮೂಲ ಪುರುಷನನ್ನು ಒಂದರಲ್ಲಿ “ಪಂಚಮುಖಗಣೇಶ್ವರ”ನೆಂದರೆ, ಇನ್ನೊಂದರಲ್ಲಿ “ಪಂಚಗಣಾಧೀಶ್ವರ”ನೆಂದು ಕರೆಯಲಾಗಿದೆ. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯದಲ್ಲಿಯೂ 770 ಅಮರಗಣಂಗಳಿಗೆ ವಿಶೇಷ ಮಹತ್ವವಿದೆ.
ಗಣ ಎಂದರೇನು?
“ಗಣ” ಎಂದರೆ ಸಮುದಾಯ, ಬುಡಕಟ್ಟು (Tribal unit) ಅಥವಾ ಸಂಘ ಎಂದರ್ಥ. ಪಂಚಮಸಾಲಿಗಳು ಮೂಲತಃ ಒಂದು ಗಣ ಅಥವಾ ಬುಡಕಟ್ಟಿನ ಜನರಾಗಿದ್ದರು ಎಂದು ಹೇಳಬಹುದು. ವೇದಕಾಲದ ಉತ್ತರಾರ್ಧದಲ್ಲಿ ‘ಯಾದವರು’ ಮತ್ತು ‘ತುರ್ವಸುಗಳು’ ಇಂತಹ ಗಣ ಸಂಘಗಳಲ್ಲಿ ಬದುಕುತ್ತಿದ್ದರು. ಅಲ್ಲಿ ಗಣದ ಮುಖ್ಯಸ್ಥ ಅಥವಾ ಗಣಾಧಿಪತಿಯು ಚುನಾಯಿತನಾಗಿರುತ್ತಿದ್ದನೇ ಹೊರತು ವಂಶಪಾರಂಪರ್ಯವಾಗಿರಲಿಲ್ಲ. ಪಂಚಮಸಾಲಿಗಳು ಮೂಲದಲ್ಲಿ ಶೈವ ಸಂಪ್ರದಾಯದ ‘ಶಿವಗಣ’ದವರು. ಗುಬ್ಬಿಯ ಮಲ್ಲಣಾರ್ಯನ ‘ಗಣಭಾಷ್ಯ ರತ್ನಾಕರಮಾಲೆ’ಯ ನೂರೊಂದು ಗಣಗಳಲ್ಲಿ ಪಂಚಮಸಾಲಿಯೂ ಒಂದು ಗಣವಾಗಿತ್ತೆಂದು ಊಹಿಸಬಹುದು.
ಪಂಚಮಸಾಲಿ ಸಮಾಜದ ಐತಿಹಾಸಿಕ ಅಧ್ಯಯನದಲ್ಲಿ “ಪಂಚ” (ಐದು) ಸಂಖ್ಯೆಯು ಪದೇಪದೇ ಬರುತ್ತದೆ. ವೈದಿಕ ವಿದ್ವಾಂಸ ಸಾಯಣಾಚಾರ್ಯರು ಗಣ ಪುರುಷರನ್ನು ಐದು ಸಮೂಹಗಳಾಗಿ ವಿಭಜಿಸುತ್ತಾರೆ (ದೇವತಾ, ಮನುಷ್ಯ, ಯಜಮಾನ, ಸಂಘಭೂತ ಮತ್ತು ಸ್ತೋತ್ರ ಸಂಘ). ಈ ಐದು ವಾಹಿನಿಗಳ ಒಗ್ಗೂಡುವಿಕೆಯೇ ಪಂಚಮಸಾಲಿ ಸಮಾಜವೇ? ಎಂಬ ಪ್ರಶ್ನೆ ಮೂಡುತ್ತದೆ.
ಅನೇಕ ಶತಮಾನಗಳಿಂದ ಪಂಚಮಸಾಲಿಗಳ ಗುರುಗಳೆಂದು ಪೂಜಿಸಲ್ಪಡುವ ಪಂಚಪೀಠಾಧೀಶ್ವರರೇ ಪಂಚಗಣಾಧೀಶ್ವರರೇ? ಎಂಬ ಅನುಮಾನ ಓದುಗರನ್ನು ಕಾಡುವುದು ಸಹಜ. ವೀರಶೈವ ಪುರಾಣಗಳು ಪಂಚಮಸಾಲಿಗಳ ಮೂಲಪುರುಷ ಶಿವನ ಕಂಕುಳದಿಂದ ಜನಿಸಿದ ಪಂಚಗಣಾಧೀಶ್ವರ ಎಂದು ಹೇಳುತ್ತವೆ. ಆದರೆ ತಮಗೆ ತಾವು ಶಿವನ ಮುಖದಿಂದ ಜನಿಸಿದ ಅಯೋನಿಜರು ಎಂದು ಹೇಳಿಕೊಳ್ಳುವ ಪಂಚಾಚಾರ್ಯರು, ಪಂಚಗಣಾಧೀಶ್ವರನಿಗಿಂತ ತಾವು ಶ್ರೇಷ್ಠವೆಂದು ದಾಖಲಿಸುತ್ತಾರೆ. ಇದಕ್ಕೆ ಪ್ರಮಾಣವಾಗಿ ಶೈವಾಗಮಗಳನ್ನು ಮತ್ತು ‘ವೀರಲಿಂಗೋಪನಿಷತ್ತಿನ’ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ. ಪಂಚಪೀಠಾಧೀಶ್ವರರ ದ್ವಂದ್ವಗಳು ಇಲ್ಲಿಗೆ ಮುಕ್ತಾಯಗೊಳ್ಳುವುದಿಲ್ಲ. ಇವರು ಐದು ಸ್ಥಾವರ ಲಿಂಗಗಳಿಂದ ಉದ್ಭವಿಸಿದರೆಂದು ಹೇಳಿಕೊಳ್ಳುವಾಗ, ಪಂಚಮಗಣದ ಮೂಲ ಇವರಾಗಲು ಹೇಗೆ ಸಾಧ್ಯ? ಇಲ್ಲಿ ಎರಡು ಪ್ರಮುಖ ವ್ಯತ್ಯಾಸಗಳಿವೆ:
- ಶಿವನ ಮುಖದಿಂದ ಉದ್ಭವಿಸಿದ ಪಂಚಪೀಠಾಧೀಶರು ಬ್ರಾಹ್ಮಣರಂತೆ ಪುರೋಹಿತ ಶ್ರೇಷ್ಠತೆಯನ್ನು ಕಾಪಾಡಿಕೊಂಡವರು.
- ಶಿವನ ಕಂಕುಳದಿಂದ ಜನಿಸಿದ ಪಂಚಗಣಾಧೀಶ್ವರ (ಪಂಚಮಸಾಲಿ ಮೂಲ) ಕೃಷಿಕ ಅಥವಾ ರಕ್ಷಕ ವರ್ಗದವನಾಗಿ ಚಿತ್ರಿಸಲ್ಪಟ್ಟನು. ಇದು ಮನುಸ್ಮೃತಿಯ ಚಾತುರ್ವರ್ಣ ವ್ಯವಸ್ಥೆಯನ್ನೇ ಹೋಲುತ್ತದೆ.
ಪಂಚಾಚಾರ್ಯರ ಶಿಷ್ಯವರ್ಗವು ರಚಿಸಿದ “ಸ್ವಯಂಭವಾಗಮ” ಪಂಚಮಸಾಲಿಗಳನ್ನು ಪಂಚಪೀಠಗಳನ್ನು ಆರಾಧಿಸುವ ವರ್ಗವನ್ನಾಗಿ ಸೃಷ್ಟಿಸಿತು. ಆದರೆ ಡಾ. ಎಂ. ಎಂ. ಕಲಬುರ್ಗಿಯವರು ಈ ಸಂಬಂಧವನ್ನು ಸಂಪೂರ್ಣವಾಗಿ ನಿರಾಕರಿಸುತ್ತಾ, ಇದು ಹದಿನೇಳನೆಯ ಶತಮಾನದಷ್ಟು ಇತ್ತೀಚೆಗೆ ಕಲ್ಪಿಸಿದ ಸಂಬಂಧ ಎಂದು ಸ್ಪಷ್ಟಪಡಿಸುತ್ತಾರೆ.
ಡಾ. ರಮೇಂದ್ರನಾಥ ನಂದಿಯವರು ಲಿಂಗಾಯತ ಮತ್ತು ಜಂಗಮರ ನಡುವೆ ವಿವಾಹ ಸಂಬಂಧಗಳು ನಿಷೇಧವಾಗಿದ್ದವು ಎಂದು ತಿಳಿಸುತ್ತಾ, ಅಂದಿನ ಜಂಗಮರು (ಆರಾಧ್ಯರು) ಲಿಂಗದ ಜೊತೆಗೆ ಜನಿವಾರವನ್ನೂ ಧರಿಸುತ್ತಿದ್ದರು ಎಂದು ಉಲ್ಲೇಖಿಸುತ್ತಾರೆ. ದೇವಾಲಯಗಳ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಈ ಗುಂಪುಗಳ ನಡುವಿನ ಸಂಘರ್ಷ ಮತ್ತು ಮತಾಂತರದ ಪ್ರಕ್ರಿಯೆಯನ್ನು ನಂದಿಯವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಹಾಗಿದ್ದರೆ ಪಂಚಗಣಾಧೀಶ್ವರರು ಯಾರು? ಸಮಾಜಶಾಸ್ತ್ರಜ್ಞ ಸತೀಶ ಪಾಟೀಲರು ತಮ್ಮ ಪಿ. ಎಚ್. ಡಿ, ಪ್ರಬಂಧದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಕೊಟ್ಟೂರು ಗುರುಬಸವೇಶ್ವರ, ಅರಸೀಕೆರೆ ಕೋಲು ಶಾಂತಯ್ಯ, ಕೂಲಹಳ್ಳಿಯ ಮುದ್ದಾನೇಶ್ವರ ಮತ್ತು ಹರಪನಹಳ್ಳಿಯ ಕೆಂಪಯ್ಯ ಎಂಬ ಐವರು ಸಂತರನ್ನು ಪಂಚಗಣಾಧೀಶ್ವರರೆಂದು ಗುರುತಿಸುತ್ತಾರೆ. ಕಾರಣ ಇವರು ಜನಸಾಮಾನ್ಯರ ಜೊತೆ ಬೆರೆತು ಅವರಿಗೆ ನೀರಾವರಿ, ಶಿಕ್ಷಣ ಮತ್ತು ಶಾಂತಿಯನ್ನು ನೀಡಿದವರು. ಆದರೆ ಪ್ರೊ. ಎಸ್. ಎಸ್. ಹಿರೇಮಠರು ಈ ವಾದವನ್ನು ತಳ್ಳಿಹಾಕುತ್ತಾ, ಲಿಖಿತ ಪರಂಪರೆಯಲ್ಲಿ ಇವರ ಉಲ್ಲೇಖವಿಲ್ಲ ಎನ್ನುತ್ತಾರೆ. ವೇದಕಾಲದಿಂದಲೂ ಇರುವ ಪಂಚಮಸಾಲಿ ಸಮಾಜಕ್ಕೆ ಮಧ್ಯಕಾಲೀನ ಸಂತರು ಹೇಗೆ ಮೂಲಪುರುಷರಾಗಬಲ್ಲರು? ಚಿಂತನಾರ್ಹವಾಗಿದೆ.
ಮುಂದುವರಿಯುವುದು…..

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ



