ಬಸವಕಲ್ಯಾಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ 2025-26ನೇ ಸಾಲಿನ ವಿವಿಧ ಸಮಿತಿಗಳ ಸಮಾರೋಪ ಸಮಾರಂಭ ಅತ್ಯಂತ ಸಂಭ್ರಮದಿಂದ ಜರುಗಿತು.
ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಸತೀಶ್ ಡೋಂಗ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಿವೆ. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪಠ್ಯ ಪುಸ್ತಕ ಓದಿನೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು” ಎಂದರು.
ಬಸವಕಲ್ಯಾಣದ ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ್ ಮಾತನಾಡಿ, ʼಉತ್ತಮ ಬದುಕು ರೂಪಿಸಿಕೊಳ್ಳಲು ಮೌಲ್ಯ ಶಿಕ್ಷಣದ ಅಗತ್ಯವಾಗಿದೆ. ಸಂಸ್ಕಾರ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರ ಸಂಘರ್ಷಮಯ ಜೀವನವೇ ನಮ್ಮೆಲ್ಲರಿಗೂ ದಾರಿದೀಪವಾಗಿದೆʼ ಎಂದು ಹೇಳಿದರು.
ಉಪನ್ಯಾಸಕ ಡಾ.ಮಹಾಲೇಶ.ಡಿ.ಎಸ್. ಮಾತನಾಡಿ, ʼಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕಾಗಿ ಪರೀಕ್ಷೆಗಳು ಹೇಗೆ ಎದುರಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಚೆಂಗಟೆ ಮಾತನಾಡಿ, ʼವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಧೈರ್ಯ, ಸ್ವಾಭಿಮಾನ ಹಾಗೂ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು. ಕಠಿಣ ಅಧ್ಯಯನದಿಂದ ಉತ್ತಮ ಗುರಿ ತಲುಪಲು ಸಾಧ್ಯ. ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಜೀವನವೂ ಅಪ್ಡೇಟ್ ಆಗಬೇಕುʼ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಬೀದರ್ | ರಾಜಕಾರಣದಲ್ಲಿ ಶರಣ ಚಿಂತನೆ ಬೆರೆತರೆ ಹೊಸ ಸಮಾಜ ನಿರ್ಮಾಣ ಸಾಧ್ಯ : ಡಾ.ವಾಸು
ಕಾರ್ಯಕ್ರಮದಲ್ಲಿ ಐಕ್ಯೂಎಸ್ಸಿ ಸಂಯೋಜಕ ಡಾ.ಚಂದ್ರಕಾಂತ್ ಗಾಯಕವಾಡ್, ಎನ್‌ಎಸ್‌ಎಸ್ ಸಂಯೋಜಕಾಧಿಕಾರಿ ಡಾ.ಶ್ರೀಕಾಂತ್ ಚೌಹಾಣ್, ಮಹಿಳಾ ಕೋಶದ ಸಂಯೋಜಕಿ ಮೀನಾಕ್ಷಿ ಬಿರಾದರ, ಕಛೇರಿ ಅಧೀಕ್ಷಕ ಶರಣಬಸಪ್ಪ ಜನ್ನಾ ಹಾಗೂ ಉಪನ್ಯಾಸಕ ಸುಭಾಷ ಮಚಕುರೆ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




