ಕರ್ನಾಟಕದಲ್ಲಿ ಮಹಿಳೆಯರಿಗೆ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಾಗ ಬಿಜೆಪಿ ಅದನ್ನು ಟೀಕಿಸಿತ್ತು. ಉಚಿತ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತವೆ, ರಾಜ್ಯ ದಿವಾಳಿಯಾಗುತ್ತದೆ ಎಂದೆಲ್ಲ ಬೊಬ್ಬೆ ಹೊಡೆದಿತ್ತು. ಇದೀಗ, ಅದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕದ ಮಾದರಿಯ ಉಚಿತ ಯೋಜನೆಗಳನ್ನು ಅಲ್ಲಿನ ಸರ್ಕಾರಗಳು ಜಾರಿಗೊಳಿಸುತ್ತಿವೆ. ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಸರ್ಕಾರ, ಬಂಗಾಳದಲ್ಲಿ ಜೂನ್ 1ರಿಂದ ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದಾಗಿ ಘೋಷಿಸಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, “ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾರಿಗೆಯನ್ನು ಮಹಿಳೆಯರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ನಿರ್ಧಾರವಾಗಿದೆ. ಮುಂಬರುವ ಜೂನ್ 1 ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಈ ಯೋಜನೆಯು ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸುವ ಅಲ್ಪಾವಧಿ (ಶಾರ್ಟ್ ರೂಟ್) ಮತ್ತು ದೀರ್ಘಾವಧಿ (ಲಾಂಗ್ ರೂಟ್) ಸೇರಿದಂತೆ ಎಲ್ಲ ರೀತಿಯ ಸರ್ಕಾರಿ ಬಸ್‌ಗಳಿಗೂ ಅನ್ವಯಿಸಲಿದೆ” ಎಂದು ಹೇಳಿದೆ..
“ಈ ಯೋಜನೆಯ ಪ್ರಯೋಜನ ಪಡೆಯಲು ಮಹಿಳಾ ಪ್ರಯಾಣಿಕರಿಗೆ ಕ್ಯೂಆರ್ ಕೋಡ್, ಭಾವಚಿತ್ರ ಹಾಗೂ ಫಲಾನುಭವಿಯ ವೈಯಕ್ತಿಕ ವಿವರಗಳನ್ನು ಒಳಗೊಂಡಿರುವ ವಿಶೇಷ ‘ಸ್ಮಾರ್ಟ್ ಕಾರ್ಡ್’ ಅನ್ನು ವಿತರಿಸಲಾಗುವುದು. ಸ್ಮಾರ್ಟ್ ಕಾರ್ಡ್ ಪಡೆಯಲು ಇಚ್ಛಿಸುವ ಮಹಿಳೆಯರು ತಮ್ಮ ವ್ಯಾಪ್ತಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಅಥವಾ ಉಪವಿಭಾಗೀಯ ಅಧಿಕಾರಿ (SDO) ಕಚೇರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳು (PSU) ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಪೂರಕ ದಾಖಲೆಗಳಾಗಿ ಬಳಸಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಗುರುತಿನ ಚೀಟಿಗಳನ್ನೂ ಪರಿಗಣಿಸಲಾಗುತ್ತದೆ” ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
“ಸಾರ್ವಜನಿಕರಿಗೆ ತಕ್ಷಣವೇ ಯೋಜನೆಯ ಲಾಭ ಸಿಗುವಂತೆ ಮಾಡುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ಮಾಡಿಸುವವರೆ, ಮಹಿಳೆಯರು ತಮ್ಮ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್‌ನಂತಹ ಯಾವುದೇ ಮಾನ್ಯತೆ ಇರುವ ಸರ್ಕಾರಿ ಭಾವಚಿತ್ರದ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ, ಪ್ರಯಾಣಿಸಬಹುದು. ನಿರ್ವಾಹಕರು ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಹಿಳಾ ಪ್ರಯಾಣಿಕರಿಗೆ ಯಾವುದೇ ಹಣವನ್ನು ಪಡೆಯದೆ ‘ಶೂನ್ಯ ಮೌಲ್ಯದ ಟಿಕೆಟ್’ಗಳನ್ನು ವಿತರಿಸಲಿದ್ದಾರೆ” ಎಂದು ಇಲಾಖೆ ಹೇಳಿದೆ.



