ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸೋಮವಾರ ಮಧ್ಯಾಹ್ನ ಭೇಟಿ ನೀಡಿ, ಅನುಭವ ಮಂಟಪ ಕಾಮಗಾರಿಯ ವೀಕ್ಷಿಸಿದರು.
ಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, “ನೂತನ ಅನುಭವ ಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಬಿಂಬಿಸುವ ಒಂದು ಬೃಹತ್ ಯೋಜನೆಯಾಗಿದೆ. ತ್ರಿಪುರಾಂತ ಕೆರೆಯ ದಡದಲ್ಲಿ ನಿರ್ಮಾಣವಾಗುತ್ತಿರುವ ಈ ಐತಿಹಾಸಿಕ ಸಂಕೀರ್ಣವು ಕಲ್ಯಾಣ ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿ ವಿಶ್ವದೆಲ್ಲೆಡೆ ಗುರುತಿಸಿಕೊಂಡಿತ್ತು. ಇದೇ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸಲಾಗುತ್ತಿದೆ” ಎಂದರು.
“ಅನುಭವ ಮಂಟಪವು ಕೇವಲ ಕಟ್ಟಡವಲ್ಲ, ಬಸವ ತತ್ವ, ವಚನ ಸಾಹಿತ್ಯ, ಕಾಯಕ ದಾಸೋಹ, ಸಮಾನತೆ ಹಾಗೂ ಶರಣ ಸಂಸ್ಕೃತಿಯ ಜೀವಂತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಶರಣ, ಶರಣೆಯರ ಚಿಂತನೆ, ವಚನಗಳು ಹಾಗೂ ಅವರ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಪರಿಚಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ” ಎಂದರು.
ಇಷ್ಟಲಿಂಗ ಧ್ಯಾನ ಮಾಡಿದ ಸಿಎಂ
ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಐತಿಹಾಸಿಕ ಅನುಭವ ಮಂಟಪಕ್ಕೆ ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಬಸವಾದಿ ಶರಣರು ಪ್ರತಿಪಾದಿಸಿದ ಇಷ್ಟಲಿಂಗವನ್ನು ತಮ್ಮ ಹಸ್ತದಲ್ಲಿಟ್ಟುಕೊಂಡು ಎರಡು ನಿಮಿಷಗಳ ಕಾಲ ಧ್ಯಾನ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅವರು, “ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶ ಮತ್ತು ಸಂದೇಶಗಳು ವಿಶ್ವದಾದ್ಯಂತ ಪ್ರಚಾರವಾಗುತ್ತಿವೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದ್ದು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿವೆ. ಸುಮಾರು 740 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅನುಭವ ಮಂಟಪ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಶೀಘ್ರದಲ್ಲೇ ಪೂರ್ಣಗೊಳಿಸಿ ರಾಜ್ಯದ ಜನತೆಗೆ ಸಮರ್ಪಿಸಲಾಗುವುದು” ಎಂದು ತಿಳಿಸಿದರು.

“12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಅವರು ಸಮಾಜದ ಎಲ್ಲ ವರ್ಗದ ಶ್ರಮಜೀವಿಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿ ಹಾಡಿದರು. ಸುಮಾರು 770 ಶರಣರನ್ನು ಒಳಗೊಂಡ ಅನುಭವ ಮಂಟಪದಲ್ಲಿ ಸಮಾಜದ ಅಂಕುಡೊಂಕುಗಳನ್ನು ಚರ್ಚಿಸಿ, ಮೂಢನಂಬಿಕೆಗಳನ್ನು ತೊಡೆದುಹಾಕುವ ಕಾರ್ಯ ನಡೆಸಿದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಬಸವಣ್ಣ, ಇಷ್ಟಲಿಂಗ ಶಿವಯೋಗ ಸಾಧನೆಯ ಮೂಲಕ ಮನುಷ್ಯನು ದೈವತ್ವವನ್ನು ಹೊಂದಬಹುದೆಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಮನಸ್ಸಿಗೆ ನೆಮ್ಮದಿ, ವ್ಯಕ್ತಿತ್ವ ವಿಕಾಸ ಹಾಗೂ ಪರಮಾತ್ಮನ ಅನುಭೂತಿಗೆ ಬಸವಾದಿ ಶರಣರು ನೀಡಿರುವ ಇಷ್ಟಲಿಂಗ ಶಿವಯೋಗ ಸಾಧನೆಯು ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.
ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು
ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಮಹಿಳೆಯರು ನಮಗೆ ಬೆಂಬಲ ನೀಡಿದ್ದು, ಅವರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಸೋಮವಾರ ನಡೆದ ಅಕ್ಕಪಡೆ-ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಿ ಕವಾಯತ ವೀಕ್ಷಿಸಿದ ಬಳಿಕ ಮಾತನಾಡಿದರು.
“ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು. ನಿಮ್ಮ ಮಾರ್ಗದರ್ಶನದಂತೆ ಪ್ರತಿಯೊಂದು ಕುಟುಂಬ ಬೆಳಗುತ್ತಿದೆ. ನಾರಿ ಶಕ್ತಿ ದೇಶದ ಶಕ್ತಿ. ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅನುಭವ ಮಂಟಪದಿಂದ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಆರಂಭಿಸಲಾಗಿದೆ. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮದೇವತೆ ಬಗ್ಗೆ ಕೇಳುತ್ತೇವೆ. ನಮ್ಮ ಭೂಮಿಯನ್ನು ಮಾತೃಭೂಮಿ, ಭೂಮಿತಾಯಿ ಎಂದು ಪರಿಗಣಿಸುತ್ತೇವೆ” ಎಂದು ಬಣ್ಣಿಸಿದರು.

“ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ಆರಂಭಿಸಲಾಗಿದೆ. ನಮ್ಮ ಸರ್ಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖಂಡತ್ವದಲ್ಲಿ ಈ ಪಡೆಯನ್ನು ರಚಿಸಿದೆ. ಈ ಪಡೆಗೆ ಸೇರಿರುವವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಶಕ್ತಿ, ಧೈರ್ಯ, ಸಾಧನೆಗೆ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಲಿದೆ. ಮಹಿಳೆಯರಿಗಾಗಿ ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿ ಕಾರ್ಯಕ್ರಮಗಳು ಈಗಾಗಲೇ ನೀಡಿದ್ದೇವೆ. ಮಹಿಳೆಯರು ಹಾಗೂ ಯುವಕರಿಗೆ ಪ್ರತಿ ಪಂಚಾಯ್ತಿಯಲ್ಲಿ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ಹಾಗೂ ಜಾತ್ಯಾತೀತ ತತ್ವ ಉಳಿಸಿಕೊಂಡು ಒಗ್ಗಟ್ಟಿನಿಂದ ಇರಲು ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯವ ಸಂಘ ರಚಿಸಲು ಸರ್ಕಾರ ಆದೇಶಿಸಿದೆ” ಎಂದು ತಿಳಿಸಿದರು.
“ನಾವು ಮಾತೃ ದೇವೋಭವ ಎಂದು ಪರಿಗಣಿಸಿದ್ದೇವೆ. ನೀವೆಲ್ಲರೂ ನಮ್ಮ ಜೊತೆ ಕೈಜೋಡಿಸಿ, ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ಶಕ್ತಿ ನೀಡುವ ಜವಾಬ್ದಾರಿ ನಮ್ಮದು. ನಿಮ್ಮಲ್ಲಿ ನಾಯಕತ್ವ ಬೆಳೆಯಬೇಕು. ಪಂಚಾಯತಿಯಿಂದ ಸಂಸತ್ತಿನವರೆಗೂ ನಾಯಕತ್ವ ಬೆಳೆಯಬೇಕು. ರಾಜಕೀಯವಾಗಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನಾಯಕರಾಗಿ ಬೆಳೆಯಬೇಕು. ನಿಮ್ಮ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ನೇತ್ರತ್ವದ ಸರ್ಕಾರ ಇರಲಿದೆ” ಎಂದು ಅಕ್ಕಪಡೆ-ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಪ್ರಕಾಶ ಪಾಟೀಲ, ಸಂಸದ ಸಾಗರ ಖಂಡ್ರೆ, ಶಾಸಕರಾದ ರಹೀಂ ಖಾನ್, ಶರಣು ಸಲಗಾರ, ಡಾ.ಸಿದ್ದು ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನಪರಿಷತ್ ಸದಸ್ಯ ಬಸನಗೌಡ, ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಅರವಿಂದಕುಮಾರ ಅರಳಿ, ಹಿರಿಯ ಐಎಎಸ್ ಅಧಿಕಾರಿಗಳಾದ ಎಲ್.ಕೆ.ಅತೀಕ್, ಶಾಲಿನಿ ರಜನೀಶ್, ಗೌರವ್ ಗುಪ್ತ, , ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮಾಲಾ ಬಿ.ನಾರಾಯಣ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಶಿವಾನಂದ ಮಹಾಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಗಂಗಾಬಿಕೆ ಅಕ್ಕ, ಬಸವ ಪ್ರಭು ಸ್ವಾಮೀಜಿ, ಸಿದ್ದರಾಮ ಶರಣರು ಬೆಲ್ದಾಳ, ಪರ್ವತಲಿಂಗ ಪರಮೇಶ್ವರ ಮಹಾರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಕಾಂಗ್ರೆಸ್‌ನಿಂದ ಜನರನ್ನು ಒಗ್ಗೂಡಿಸುವ ಕಾರ್ಯ : ಸಿಎಂ ಡಿ.ಕೆ.ಶಿವಕುಮಾರ




