ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಆತಂಕ ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ, ಅವರ ಸುರಕ್ಷತೆಯನ್ನು ಸುಧಾರಿಸುವ ಮತ್ತು ಅವರಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸುವ ಉದ್ದೇಶದಿಂದ ಚೆನ್ನೈನಲ್ಲಿ ‘ಪಿಂಕ್ ಆಟೋ’ (ಗುಲಾಬಿ ಆಟೋ) ಯೋಜನೆ ಪ್ರಾರಂಭಿಸಲಾಗಿದೆ. ಯೋಜನೆಯಡಿ ಮೊದಲ ಹಂತದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ 50 ಮಹಿಳೆಯರು ಆಟೋ ಮಾಲೀಕತ್ವ ಪಡೆದಿದ್ದಾರೆ. ಆಟೋ ಸವಾರಿ ಮತ್ತು ದುಡಿಮೆ ಆರಂಭಿಸಿದ್ದಾರೆ.
ಯೋಜನೆಯ ಫಲಾನುಭವ ಪಡೆದ ಮಹಿಳೆಯರಲ್ಲಿ ಒಂಟಿ ತಾಯಿ ನಂದಿನಿ ಕೂಡ ಒಬ್ಬರು. ಅವರು ಈವರೆಗೆ ಮಾಲ್ ಒಂದರ ಪಾರ್ಕಿಂಗ್ ಲಾಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 15,000 ರೂಪಾಯಿ ದುಡಿಯುವುದೂ ಅವರಿಗೆ ತ್ರಾಸದಾಯಕವಾಗಿತ್ತು. ಇದೀಗ, ಅವರು ‘ಪಿಂಕ್ ಆಟೋ’ದ ಮಾಲಕಿಯಾಗಿದ್ದಾರೆ. ತಮ್ಮ ಮಗಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುವ ಭರವಸೆ ತಮ್ಮಲ್ಲಿ ಮೂಡಿದೆ ಎಂದು ಹೇಳಿಕೊಂಡಿದ್ದಾರೆ.
“ನನ್ನ ಆದಾಯ ದುಪ್ಪಟ್ಟಾಗಿದೆ. ಮಗಳಿಗೆ ಉತ್ತಮ ಭವಿಷ್ಯ ರೂಪಿಸುವ ಭರವಸೆ ಬಂದಿದೆ. ಈ ಹಿಂದೆ ನನ್ನನ್ನು ಕೀಳಾಗಿ ನೋಡಿದವರು ಇಂದು ನಮ್ಮ ಯಶಸ್ಸನ್ನು ಕಂಡು ಪಶ್ಚಾತ್ತಾಪ ಪಡುವಂತಾಗಿದೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಅಲ್ಲದೆ, ಅವರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ವೃದ್ಧರು ಮತ್ತು ವಿಶೇಷಚೇತನರಿಗೆ ಉಚಿತ ಸವಾರಿ ನೀಡುವ ಮೂಲಕ ಮಾದರಿಯಾಗುತ್ತಿದ್ದಾರೆ.
ಇದೇ ರೀತಿ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಮೋಹನಾ ಅವರ ಜೀವನವೂ ಈಗ ಹೊಸ ತಿರುವು ಪಡೆದಿದೆ. ಅವರು ಈಗ ಪಿಂಕ್ ಆಟೋ ಚಾಲನೆ ಮಾಡುವುದರ ಜೊತೆಗೆ ಇತರ ಮಹಿಳೆಯರಿಗೂ ಆಟೋ ಚಾಲನೆಯ ತರಬೇತಿ ನೀಡುತ್ತಿದ್ದಾರೆ. ಈ ವೃತ್ತಿ ತಮಗೆ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅವರು, “ನಮ್ಮ ಬದುಕಿಗೆ ನಾನೇ ರಾಣಿ. ಯಾವಾಗ ಕೆಲಸ ಮಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇವೆ. ನಮ್ಮ ಕುಟುಂಬದ ಜವಾಬ್ದಾರಿಗಳು ಮತ್ತು ವೃತ್ತಿಜೀವನ ಎರಡನ್ನೂ ಸಮನಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ” ಎಂದು ಹೇಳಿಕೊಂಡಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ.
ತನ್ನ ಪತಿಯನ್ನು ಕಳೆದುಕೊಂಡು ಮೂರು ವರ್ಷದ ಮಗನನ್ನು ಸಾಕಿ ಬೆಳೆಸುತ್ತಿರುವ ರಾಜೇಶ್ವರಿ ಎಂಬುವವರಿಗಂತೂ ಈ ಪಿಂಕ್ ಆಟೋ ಹೊಸ ಆತ್ಮವಿಶ್ವಾಸ ತಂದುಕೊಟ್ಟಿದೆ. ತಾವು ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ನಂಬಿಕೆಯನ್ನು ಈ ಆಟೋ ಮೂಡಿಸಿದೆ ಎಂದು ಅವರು ಹೇಳುತ್ತಾರೆ.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ‘ರೋಟರಿ ಕ್ಲಬ್ ಆಫ್ ಅಣ್ಣಾನಗರ್ ಮದ್ರಾಸ್’ ಸಂಸ್ಥೆಯು, ‘ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ ಮತ್ತು ‘ಅನ್ಯೂ’ (ANEW) ಎಂಬ ಎನ್‌ಜಿಒ ಜೊತೆ ಜಂಟಿಯಾಗಿ ಹಮ್ಮಿಕೊಂಡಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿ ಮಹಿಳೆಗೆ ಆಪ್ಟಸ್ ಸಂಸ್ಥೆಯು 1 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುತ್ತದೆ. ಚಾಲನೆ ಕಲಿಯುವ ಪ್ರತಿಯೊಬ್ಬ ಮಹಿಳೆಯೂ ತನ್ನ ಕಡೆಯಿಂದ 20,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇನ್ನುಳಿದ 1.5 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಸಾಲದ ಮೂಲಕ ಒದಗಿಸಲಾಗುತ್ತದೆ. ಇದನ್ನು ಮಹಿಳೆಯರು ಸುಲಭ ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿರುವ ಮಹಿಳೆಯರನ್ನು ಗುರುತಿಸಿ, ಅವರಿಗೆ ವೃತ್ತಿಪರ ಚಾಲನಾ ತರಬೇತಿ ನೀಡುವ ಜವಾಬ್ದಾರಿಯನ್ನು ‘ಅನ್ಯೂ’ ಸಂಸ್ಥೆ ವಹಿಸಿಕೊಂಡಿದೆ.
ಮಹಿಳೆಯರ ಆರ್ಥಿಕ ಸ್ಥಿರತೆಯೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಕ್ಯಾಬ್ (ಕಾರು) ಓಡಿಸುವ ತರಬೇತಿ ನೀಡುವ ಯೋಜನೆಯೂ ಇದೆ ಎಂದು ಅನ್ಯೂ ಸಂಸ್ಥೆಯ ಅಧ್ಯಕ್ಷರಾದ ಡಾ. ಅನ್ನಲಕ್ಷ್ಮಿ ಎಂ. ತಿಳಿಸಿದ್ದಾರೆ.
ಆಟೋ ಚಾಲನೆ ಮಾಡುವ ಮೂಲಕ ಮಹಿಳೆಯರು ದಿನಕ್ಕೆ 1,500 ರೂಪಾಯಿಗಳವರೆಗೆ ಸಂಪಾದಿಸಬಹುದಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ತಮ್ಮ ಗುರಿ ಎಂದು ಆಪ್ಟಸ್ ಸಂಸ್ಥೆಯ ಸಂಸ್ಥಾಪಕ ಎಂ. ಆನಂದನ್ ಹೇಳುತ್ತಾರೆ. ಮಹಿಳೆಯರ ಸಬಲೀಕರಣವೇ ದೇಶದ ಸಬಲೀಕರಣ ಎಂದು ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಜೈನ್ ಆಶಯ ವ್ಯಕ್ತಪಡಿಸಿದ್ದಾರೆ.



