ಭಾಲ್ಕಿಯ ಬಸವಲಿಂಗ ಪಟ್ಟದ್ದೇವರ ಅವಿರತ ಶ್ರಮದ ಫಲವಾಗಿ ಗಡಿ ಭಾಗದಲ್ಲಿ ತಲೆಯೆತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆಯು ಈ ಭಾಗದ ವಿದ್ಯಾರ್ಥಿಗಳ ಪಾಲಿಗೆ ವರವಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ʼಗುರುಕುಲ ಶಾಲೆಯು ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರಕ್ಕೆ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಈ ಶಾಲೆಯ ವಿದ್ಯಾರ್ಥಿ ಆನಂದ ಪಾಂಡುರಂಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ನಮ್ಮ ಭಾಗದ ಕೀರ್ತಿಯನ್ನು ರಾಜ್ಯದಾದ್ಯಂತ ಪಸರಿಸಿದ್ದಾನೆ. ಜೊತೆಗೆ ಶಾಲೆಯ 130ಕ್ಕೂ ಅಧಿಕ ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆʼ ಎಂದು ತಿಳಿಸಿದರು.
ʼನಮ್ಮ ಭಾಗದ ಏಳಿಗೆಗೆ ಶಿಕ್ಷಣವೇ ಮೂಲ ಎಂಬುದನ್ನು ಮನಗಂಡಿದ್ದ ಪಟ್ಟದ್ದೇವರು ಅನೇಕ ಕಷ್ಟ, ಕಾರ್ಪಣ್ಯಗಳನ್ನು ಎದುರಿಸಿ ಗುರುಕುಲ ಎಂಬ ಶ್ರೇಷ್ಠ ಕಲಿಕಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಪೂಜ್ಯರ ಪರಿಶ್ರಮದ ಫಲವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕುʼ ಎಂದು ಕಿವಿಮಾತು ಹೇಳಿದರು.
This video cannot be played in your browser. Open the video directly
ಗುರುಕುಲ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ನೀಟ್, ಐಐಟಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೋಘ ಸಾಧನೆಗೈದು ವೈದ್ಯರು, ಎಂಜಿನಿಯರ್ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದೇವರು ನೇತೃತ್ವ ವಹಿಸಿದ್ದರು.
ಇದನ್ನೂ ಓದಿ : ಬೀದರ್ | ₹2.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ಪ್ರಮುಖರಾದ ಶಿವರಾಜ ಅಲ್ಮಾಜೆ, ಪ್ರವೀಣ ಕಾರಬಾರಿ, ರಾಮಶೆಟ್ಟಿ ಪನ್ನಾಳೆ, ಪೃಥ್ವಿ ಪವಾರ್, ನಾಗರಾಜ ಬಿರಾದಾರ, ಅರವಿಂದ ಮೇತ್ರೆ, ಶರಣಪ್ಪ ಪಾಟೀಲ, ಸಂಜು ರೆಡ್ಡಿ ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ರಾಜಕುಮಾರ ಮೋರಗೆ ಸೇರಿದಂತೆ ಇತರರು ಇದ್ದರು.





