ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ನೇತೃತ್ವದಲ್ಲಿ ಗ್ಯಾಸ್ ದರ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಉದಯ್ ಶೆಟ್ಟಿ ಮುನಿಯಾಲು, “ಅಚ್ಚೇದಿನ್ ಕೊಡುತ್ತೇವೆ” ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ “ಕೊಚ್ಚೇದಿನ್” ನೀಡಿದೆ ಎಂದು ಟೀಕಿಸಿದರು. ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ, ಸರ್ಕಾರ ಜನರ ಕೂಗನ್ನು ಕೇಳುವುದಿಲ್ಲ ಎಂದು ಅವರು ಆರೋಪಿಸಿದರು. ಅಂತರರಾಷ್ಟ್ರೀಯ ಯುದ್ಧದ ಪರಿಣಾಮದಿಂದ ಕೆಲವು ಬೆಲೆ ಏರಿಕೆ ಸಂಭವಿಸಬಹುದು ಎಂದು ಒಪ್ಪಿಕೊಂಡರೂ, ಬೇರೆ ವಸ್ತುಗಳ ಬೆಲೆ ಇಳಿಕೆಯಾಗಿಲ್ಲವೆಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಗ್ಯಾಸ್ ದರವನ್ನು ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಏರಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದರು. ದೇಶದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಮಾತನಾಡಿ, ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಪಕ್ಷದ ಪುನರುಜ್ಜೀವನಕ್ಕೆ ಕಾರಣವಾಗಿದೆ ಎಂದರು. ಕೇರಳ ಹಾಗೂ ತಮಿಳುನಾಡಿನಲ್ಲೂ ಕಾಂಗ್ರೆಸ್‌ಗೆ ಆಡಳಿತದಲ್ಲಿ ಅವಕಾಶ ಸಿಕ್ಕಿರುವುದು ಪಕ್ಷದ ಶಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯದಿಂದ ದೇಶದ ಆರ್ಥಿಕ ಸ್ಥಿತಿ ದುರ್ಬಲವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಗ್ಯಾಸ್ ದರ ಏರಿಕೆ ಕುರಿತು ಕೇಂದ್ರ ಸಚಿವರ ಹೇಳಿಕೆಗಳನ್ನು ಪ್ರಶ್ನಿಸಿದರು. “ಗ್ಯಾಸ್ ಬೆಲೆ ಸರ್ಕಾರದ ಕೈಯಲ್ಲಿಲ್ಲ ಎಂದರೆ, ಸರ್ಕಾರದ ಪಾತ್ರವೇನು?” ಎಂದು ಪ್ರಶ್ನಿಸಿ, ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವಾಲಯದ ಹೊಣೆಗಾರಿಕೆಯನ್ನು ಎತ್ತಿಹಿಡಿದರು. ಮತದಾರರು ತಮ್ಮ ಆಯ್ಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದೂ ಅವರು ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಮಾತನಾಡಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗ್ಯಾಸ್ ಸೌಲಭ್ಯ ಪಡೆದಿದ್ದ ಮಹಿಳೆಯರು ಈಗ ಮತ್ತೆ ಕಟ್ಟಿಗೆ ಬಳಸುವ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಬೆಲೆ ಏರಿಕೆಯ ಹೊರೆ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಅತ್ತೂರ್, ಪುರಸಭೆಯ ಮಾಜಿ ಅಧ್ಯಕ್ಷರಾದ ರೆಹಮತ್ ಎನ್ ಶೇಖ್, ಪ್ರತಿಮಾ ರಾಣೆ, ಮಾಜಿ ಸದಸ್ಯರಾದ ವಿನ್ನಿ ಬೋಲ್ಡ್ ಮೆಂಡೋನ್ಸ, ವಿವೇಕಾನಂದ ಶೆಣೈ, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ದುರ್ಗಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಕೃಷ್ಣ ದುರ್ಗಾ, ದೇವದಾಸ್, ಅಣ್ಣಪ್ಪ ನಕ್ರೆ, ಸುನಿಲ್ ಭಂಡಾರಿ ಸೇರಿದಂತೆ ಅನೇಕ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ನಿರ್ವಹಿಸಿದರು. ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ವಂದಿಸಿದರು.






