ಜೂ.28ರಂದು ಬಸವಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ “ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ” ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಕೊಲ್ಹಾಪುರದ ಕಾಡಸಿದ್ದೇಶ್ವರ ಮಠದ ಕನೇರಿ ಸ್ವಾಮೀಜಿಯವರ ಪ್ರವೇಶವನ್ನು ತಡೆಯುವಂತೆ ವಿವಿಧ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳಿಗೆ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಭಾಲ್ಕಿ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಅವರಿಗೆ ಸಲ್ಲಿಸಿದರು.
ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗಗನ ಫುಲೆ ಮಾತನಾಡಿ, “ಬಸವ ಭಕ್ತರನ್ನು ʼಬಸವ ತಾಲಿಬಾನಿʼ ಎಂದು ಪದ ಪ್ರಯೋಗ ಮಾಡಿ ಅವಮಾನಿಸಿರುವುದು ಹಾಗೂ ಬಸವತತ್ವ ಮತ್ತು ಸಂಸ್ಕೃತಿಯನ್ನು ನಾಡಿನಾದ್ಯಂತ ಪ್ರಚಾರ ಮಾಡುತ್ತಿರುವ ಪೂಜ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಸುಪ್ರೀಂ ಕೋರ್ಟ್‌ನಿಂದಲೂ ಟೀಕೆಗೆ ಗುರಿಯಾಗಿರುವ ಕನೇರಿ ಸ್ವಾಮೀಜಿಯವರ ನಡೆ ಬಸವ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಕನೇರಿ ಸ್ವಾಮೀಜಿಗೆ ಬಸವಕಲ್ಯಾಣ ಪ್ರವೇಶ ನೀಡಬಾರದು” ಎಂದು ಹೇಳಿದರು.
“ಸರ್ಕಾರ ಹಾಗೂ ಜಿಲ್ಲಾಡಳಿತವು ಬಸವ ಭಕ್ತರ ಭಾವನೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕು. ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಬಸವ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳು ಎದುರಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಜೂ.28ಕ್ಕೆ ಕನೇರಿ ಸ್ವಾಮೀಜಿ ಬಸವಕಲ್ಯಾಣ ಪ್ರವೇಶಿಸಿದರೆ ನಮ್ಮ ಸಂಘಟನೆಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಸೋರುವ ಕೊಠಡಿ, ಶಿಕ್ಷಕರ ಕೊರತೆ : ಆತಂಕದಲ್ಲಿ ಮಕ್ಕಳ ಕಲಿಕೆ!
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಮರೂರ ಸೇರಿದಂತೆ ಸಾಮಾಜಿಕ ಕಾರ್ಯಕರ್ತರಾದ ಶ್ರೀಮಂತ ಭೋಸ್ಲೆ, ಜೈವರ್ಧನ ಫುಲೆ, ಶಿವರಾಜ್ ಚೆಲ್ವಾ ಉಪಸ್ಥಿತರಿದ್ದರು.




