“ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿನಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಜ್ಞಾನ ಹಂಚುವ ಪುಸ್ತಕ ಮನೆ ಸ್ಥಾಪನೆಗಾಗಿ 2026ರ ಅನ್ಸಂಗ್ ಹೀರೋಸ್ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ” ಎಂದು ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದಲ್ಲಿ ಸಂಜಯ ಪ್ರಕಾಶನ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವಿರ ವರ್ಷಗಳ ಹಿಂದೆ ನಳಂದ ವಿಶ್ವವಿದ್ಯಾನಿಲಯದಲ್ಲಿದ್ದ ಧರ್ಮಗಂಜ್ ಎಂಬ ಮೂರು ಅಂತಸ್ತಿನ ಗ್ರಂಥಾಲಯದಲ್ಲಿ ಜಗತ್ತಿನ ಮೂಲೆಮೂಲೆಗಳಿಂದ ಸಂಗ್ರಹಿಸಿದ್ದ ಹಸ್ತಪ್ರತಿಗಳು ಬೆಂಕಿಗೆ ಆಹುತಿಯಾಗಿದ್ದವು. ಅದೇ ಮಾದರಿಯ ಜ್ಞಾನ ಭಂಡಾರವನ್ನು ಪುನರ್‌ನಿರ್ಮಿಸುವ ಕನಸು ಹೊಂದಿದ್ದು, ಹರಳಹಳ್ಳಿ ಗ್ರಾಮದ ‘ಪುಸ್ತಕದ ಮನೆ’ಯನ್ನು ಜ್ಞಾನ ದೀಪವಾಗಿ ಹಾಗೂ ಜ್ಞಾನ ವಿಶ್ವವಿದ್ಯಾನಿಲಯದ ಮಾದರಿಯಾಗಿ ಬೆಳೆಸಬೇಕಿದೆ ಎಂದರು.
“ಇದು ಕೇವಲ ಇಟ್ಟಿಗೆ-ಸಿಮೆಂಟ್ ಕಟ್ಟಡವಾಗಿರಬಾರದು. ಜ್ಞಾನದ ವಿಶ್ವವಿದ್ಯಾನಿಲಯವಾಗಿ ರೂಪುಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ” ಎಂದು ಅವರು ಹೇಳಿದರು.

ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು 20 ಲಕ್ಷಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿರುವುದು ಅಪರೂಪದ ಸಾಧನೆ. ಪ್ರಶಸ್ತಿಗಿಂತಲೂ ಅವರು ನಿರ್ಮಿಸಿರುವ ‘ಪುಸ್ತಕದ ಮನೆ’ ಸಮಾಜಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಎಂದರು.
ಮಹಾತ್ಮ ಗಾಂಧಿಯವರ ‘ನಿಜವಾದ ಶಿಕ್ಷಣ ಎಂದರೆ ಹೃದಯ ಮತ್ತು ಮನಸ್ಸನ್ನು ಒಟ್ಟಿಗೆ ಕಟ್ಟುವುದು’ ಎಂಬ ವಿಚಾರಕ್ಕೆ ಜೀವಂತ ರೂಪ ನೀಡಿರುವ ವ್ಯಕ್ತಿಯನ್ನು ಸನ್ಮಾನಿಸುತ್ತಿರುವುದು ಮಂಡ್ಯ ಜಿಲ್ಲೆಯ ಹೆಮ್ಮೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಜಯ ಪ್ರಕಾಶನದ ವತಿಯಿಂದ ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ; ಮತದಾರರ ಹಕ್ಕು ರಕ್ಷಣೆಗೆ ಕರೆ

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್.ಎಂ. ಶಿವಕುಮಾರ್, ಯುವ ಬರಹಗಾರ ಬಳಗದ ಸಂಸ್ಥಾಪಕ ಸತೀಶ್ ಜವರೇಗೌಡ, ಮಹಿಳಾ ಸಾಂತ್ವನ ಸಂಸ್ಥಾಪಕಿ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆ ಖಜಾಂಚಿ ಆಯುಬ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸುಮಂಗಲ, ಸುಧಾ, ಶಿಕ್ಷಕಿ ಎಚ್.ಜೆ. ಶೀಲಾ, ಕನ್ನಡ ಪ್ರಾಧ್ಯಾಪಕ ಶಿವಕುಮಾರ್ ಕಾರೆಪುರ, ಡಾ. ಬಿ.ಕೆ. ರಾಮು, ಪ್ರಾಧ್ಯಾಪಕ ಬ್ಯಾಡರಹಳ್ಳಿ ಧನಂಜಯ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಪತ್ರಕರ್ತ ಗಣಂಗೂರು ನಂಜೇಗೌಡ, ವಕೀಲ ಎಸ್.ಆರ್. ಸಿದ್ದೇಶ್, ಚಿಕ್ಕತಮ್ಮೆಗೌಡ, ಸದಾನಂದ, ಸುರೇಶ್ ಸೇರಿದಂತೆ ಹಲವರು ಇದ್ದರು.





