2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟವಾಗಿದ್ದು, ಔರಾದ್ ತಾಲ್ಲೂಕಿನ ಸಂತಪೂರ ಜ್ಞಾನ ಭಾರತಿ ಗುರುಕುಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಕೀರ್ತಿ ತಂದಿದ್ದಾರೆ.
ಶಾಲೆಗೆ ಶೇ 100ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17 ವಿದ್ಯಾರ್ಥಿಗಳು ಅಗ್ರಶ್ರೇಣಿ, ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 5 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದಾರೆ. ತ್ರತೀಯ ಭಾಷೆ ಹಿಂದಿ ಹಾಗೂ ಸಮಾಜ ವಿಷಯಗಳಲ್ಲಿ ಕ್ರಮ 13, 8 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಎಂದು ಶಾಲೆಯ ಮುಖ್ಯಗುರು ಮಧುಕರ ಬಂಗಾರೆ ತಿಳಿಸಿದ್ದಾರೆ.
ʼನಾಗೂರ(ಎಂ) ಗ್ರಾಮದ ದಿವ್ಯಾ ಮಲ್ಲಪ್ಪಾ ಶೇ 99.04 (619) ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಶೆಂಬೆಳ್ಳಿ ಗ್ರಾಮದ ಪುಷ್ಪಲತಾ ಶ್ರೀಕಾಂತ ದೇಶಮುಖ ಶೇ 98.72 (617) ಹಾಗೂ ಧೂಪತಮಹಾಗಾಂವ್ ಗ್ರಾಮದ ವರ್ಷಾ ಮಾರುತಿ ಶೇ97.06 (610) ಅಂಕ ಪಡೆದು ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ್ದಾರೆ.

ದಿವ್ಯಾ ಅವರ ತಂದೆ ಮಲ್ಲಪ್ಪಗೌಡ ಪತ್ರಕರ್ತರಾಗಿದ್ದು, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ನಿರಂತರ ಓದು, ಕಠಿಣ ಪರಿಶ್ರಮದಿಂದ ಈ ಸಾಧನೆಗೈದು ಸೈ ಎನಿಸಿಕೊಂಡಿದ್ದಾರೆ. ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿ ಮುಂದೆ ಐಎಎಸ್ ಆಗಬೇಕೆಂಬ ಕನಸಿದೆ ಎಂದು ದಿವ್ಯಾ ಹೇಳಿದ್ದಾಳೆ.
ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಬಾಬಣೆ, ಕಾರ್ಯದರ್ಶಿ ಗುರುನಾಥ ದೇಶಮುಖ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕರಾದ ಶಿವಾನಂದ ಕೋಟೆ, ಅಂಬಾದಾಸ್ ಖರಾಟೆ, ವಿಜಯಕುಮಾರ ಸಿಂಧೆ, ಚಿರಂಜೀವಿ ಪಾಟೀಲ್ ನಾಗೇಂದ್ರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : SSLC Result 2026 | ಫಲಿತಾಂಶ-ಸ್ಥಾನದಲ್ಲಿ ಸುಧಾರಣೆ : 28ನೇ ಸ್ಥಾನಕ್ಕೇರಿದ ಬೀದರ್
ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಔರಾದ್ ತಾಲೂಕಿನ ನಾಗುರ(ಎಂ) ದಿವ್ಯಾಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ರಾಘವೇಂದ್ರಗೌಡಾ ಹಾಗೂ ಪೋಷಕರು ಸಿಹಿ ತಿನ್ನಿಸಿ ಶುಭ ಕೋರಿದರು.





