ಯುವಜನರಲ್ಲಿರುವ ಪ್ರತಿಭೆಯನ್ನು ಹೊರತರುವುದರ ಜೊತೆಗೆ, ದೈನಂದಿನ ಜೀವನದ ಮಾನಸಿಕ ಒತ್ತಡ ನಿವಾರಿಸಿ ಹೊಸ ಉಲ್ಲಾಸ ನೀಡಲು ಸಾಂಸ್ಕೃತಿಕ ಹಾಗೂ ಪುನಶ್ಚೇತನ ಚಟುವಟಿಕೆಗಳು ಅಗತ್ಯವಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ, ಎನ್‌ಎಸ್‌ಎಸ್ ಘಟಕಗಳು ಹಾಗೂ ಬ್ರಿಮ್ಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಯುವಜನರ ಪ್ರತಿಭಾ ಪ್ರದರ್ಶನಕ್ಕೆ ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಯುವಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಯುವಜನೋತ್ಸವದಲ್ಲಿ ನೃತ್ಯ, ವರ್ಣಚಿತ್ರ, ಜಾನಪದ ಗೀತೆ, ಬೀದಿ ನಾಟಕ ಹಾಗೂ ಕವಿತೆ ಬರವಣಿಗೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳಿಗೆ ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, “ಯುವಜನೋತ್ಸವವು ಜಿಲ್ಲೆಯ ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ. ಜಿಲ್ಲಾ ಮಟ್ಟದಿಂದ ಆಯ್ಕೆಯಾಗುವ ಸ್ಪರ್ಧಿಗಳು ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದವರೆಗೆ ಬೆಳೆಯಲು ಈ ಕಾರ್ಯಕ್ರಮ ಪ್ರೇರಣೆ ನೀಡಲಿದೆ” ಎಂದರು.

ಯುವಜನೋತ್ಸವ ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗದೆ, ಸಾರ್ವಜನಿಕರು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸಬೇಕು. ಪ್ರೇಕ್ಷಕರ ಪ್ರೋತ್ಸಾಹವು ಸ್ಪರ್ಧಿಗಳಲ್ಲಿ ಮತ್ತಷ್ಟು ಉತ್ಸಾಹ ತುಂಬಲಿದೆ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ನಿಮ್ಕಡಿ ಸೋಯಾ ಕೊಯ್ಲಕ ಮಂದಿ ಸಿಗ್ತಾರೇನ್?
ಕಾರ್ಯಕ್ರಮದಲ್ಲಿ ಬೀದರ್ ಸಹಾಯಕ ಆಯುಕ್ತ ಅಭಿನವ ಜೈನ್, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಾಜಶೇಖರ ಪಸಾರೆ, ಓಂಪ್ರಕಾಶ್ ರೊಟ್ಟೆ, ವೀರೂಪಾಕ್ಷ ಗಾದಗಿ, ಶಿವಕುಮಾರ ಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ನಿರ್ದೇಶಕಿ ಡಾ.ಕೌಜಲಗಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಪ್ರಭುಲಿಂಗ ಬಿರಾದಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ರಘುವೀರ ವಾಡೆಕರ್, ರಾಜಕುಮಾರ ಪಸಾರೆ, ಸುನೀಲ ಭಾವಿಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




