ಬೆಂಗಳೂರು ಸುಪ್ರೀಂ ಕೋರ್ಟ್ ಆದೇಶದ ಮಾದರಿಯನ್ನು ಅನುಕರಿಸಿ ನಕಲಿ ಆದೇಶವೊಂದನ್ನು ಸಿದ್ಧಪಡಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ ಆರೋಪದ ಪ್ರಕರಣದಲ್ಲಿ ಕಲಬುರಗಿ ಕಾರಾಗೃಹ ಉತ್ತರ ವಲಯದ ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2018ರ ನವೆಂಬರ್ 13ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಜೀವಾವಧಿ ಶಿಕ್ಷೆಯ ಕೈದಿ ಎ. ಶಂಕರ್ ನಕಲಿ ಆದೇಶದ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಕರ್ಣ ಬಿ. ಕ್ಷೇತ್ರಿ ಅವರು ಈ ವರ್ಷದ ಮೇ 20ರಂದು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ನಕಲಿ ನ್ಯಾಯಾಲಯದ ಆದೇಶ ಸೃಷ್ಟಿಸಿ ಕೈದಿಯ ಬಿಡುಗಡೆಗೆ ಸಹಕರಿಸಿದವರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಯಾಗಿದ್ದ ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಶಿಕ್ಷಾ ಬಂದಿ ಎ. ಶಂಕರ್ ಹಾಗೂ ಕಾರಾಗೃಹ ಇಲಾಖೆಯ ಅಂದಿನ ಪ್ರಥಮ ದರ್ಜೆ ಸಹಾಯಕ ಎಸ್. ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ನಕಲಿ ಆದೇಶ ಸೃಷ್ಟಿ ಹಾಗೂ ಕೈದಿಯ ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಬಂಧಿತ ಸೋಮಶೇಖರ್ ಅವರನ್ನು ಒಂಬತ್ತು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದ್ದು, ನಕಲಿ ಆದೇಶದ ಸೃಷ್ಟಿ, ಅದರ ಪರಿಶೀಲನೆ ಹಾಗೂ ಕೈದಿಯ ಬಿಡುಗಡೆ ಪ್ರಕ್ರಿಯೆಯಲ್ಲಿ ಯಾರ್ಯಾರು ಭಾಗಿಯಾಗಿದ್ದರು ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





