ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಮಂಗಳವಾರ ಊಟ ಸೇವಿಸಿದ ಬಳಿಕ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮಧ್ಯಾಹ್ನದ ಊಟದಲ್ಲಿ ರೊಟ್ಟಿ, ಅನ್ನ ಹಾಗೂ ಸಾಂಬರ್ ಸೇವಿಸಿದ ಕೆಲ ಸಮಯದಲ್ಲೇ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ವಾಂತಿ ಸೇರಿದಂತೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಕೆಲವರು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಳಂದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಒಂದೇ ವಸತಿ ನಿಲಯದ ಹಲವು ವಿದ್ಯಾರ್ಥಿಗಳು ಊಟದ ಬಳಿಕ ಏಕಕಾಲದಲ್ಲಿ ಅಸ್ವಸ್ಥಗೊಂಡಿರುವುದು ಆಹಾರ ವಿಷಬಾಧೆಯ ಶಂಕೆ ಮೂಡಿಸಿದೆ. ವಸತಿ ನಿಲಯದಲ್ಲಿ ಬಳಸಲಾಗುತ್ತಿರುವ ಅಕ್ಕಿ, ಬೇಳೆ, ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಬಳಕೆಯಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ವಿಜಯಲಕ್ಷ್ಮಿ ಹೋಲ್ಕರ್ ಹಾಗೂ ವಸತಿ ನಿಲಯದ ವಾರ್ಡನ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಡುಗೆ ಕೋಣೆ, ಆಹಾರ ತಯಾರಿಕೆ ವ್ಯವಸ್ಥೆ ಹಾಗೂ ಅಡುಗೆಗೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನು ಪರಿಶೀಲಿಸಿದರು.
ಬಳಿಕ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಘಟನೆಗೆ ಆಹಾರವೇ ಕಾರಣವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ
ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏಕಾಏಕಿ ಉಂಟಾದ ಏರುಪೇರು ಪೋಷಕರು ಹಾಗೂ ವಸತಿ ನಿಲಯದ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಆಹಾರದ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.





