ವಚನ ಕಲ್ಯಾಣ | ಈ ವಿಕಾರದ ಹಿಂಡ ಬಿಡಿಸಿ, ನಿಜ ನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು!

Date:

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ, ದೊಡ್ಡೆಯ ಹೊಡೆವುತ್ತ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯ
ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ, ನಿಜ ನಿಳಯ ನಿಮ್ಮಂಗವ ತೋರಿ,
ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗ.

- Advertisement -

ವೀರಗೊಲ್ಲಾಳನು ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ ಈತನ ಮೂಲಸ್ಥಳ. ಅಲ್ಲಿ ಗೊಲ್ಲಾಳನ ಹೆಸರಿನಲ್ಲಿ ದೇವಾಲಯ ಇದೆ. ವೀರಗೊಲ್ಲಾಳನಿಗೆ ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈತ ರಚಿಸಿರುವ ವಚನಗಳು ಬೆಡಗಿನ ಶೈಲಿಯಿಂದ ಕೂಡಿರುವುದು ಕಾಣುತ್ತೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ವೀರಗೊಲ್ಲಾಳನವರ ವಚನಗಳು ಗಮನಿಸಿದರೆ ಆಡು, ಕುರಿ, ಹೋತ ಕಾಯುವುದು ಈತನ ಕಾಯಕವಾಗಿತ್ತು ಎಂದು ತಿಳಿದುಬರುತ್ತದೆ. ಆತ ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನವನ್ನು ಪಡೆದುಕೊಂಡು, ಶರಣ ತತ್ವವನ್ನು ಪರಿಪಾಲಿಸುತ್ತ ಸಾತ್ವಿಕ ಜೀವನ ನಡೆಸಿದನು. ಸಮ ಸಮಾಜ ಕಟ್ಟಲು ಬಯಸಿದ ವಚನಕಾರರು ವಚನ ಸಾಹಿತ್ಯ ಮಾಧ್ಯಮವನ್ನಾಗಿ ರೂಪಿಸಿಕೊಂಡರು. ಹಾಗೇ ಕಾಯಕ ಶರಣ ವೀರಗೊಲ್ಲಾಳನು ತನ್ನ ವೃತ್ತಿಪರಿಭಾಷೆಯನ್ನೇ ಬಳಸಿ ʼವೀರಬೀರೇಶ್ವರಲಿಂಗʼ ಅಂಕಿತದಲ್ಲಿ ರಚಿಸಿರುವ 10 ವಚನಗಳು ಓದಲು ಲಭ್ಯವಾಗಿ ದೊರೆಯುತ್ತವೆ.

ವೀರಗೊಲ್ಲಾಳ ಕಾಯಕ ಸಿದ್ಧಾಂತ ಮೈಗೂಡಿಸಿಕೊಂಡು ಸಮಾಜದ ಬದಲಾವಣೆಗೆ ಶ್ರಮಿಸಿದ ಶಿವಶರಣ. ಆತನ ವಚನಗಳಲ್ಲಿ ಲೌಕಿಕ ಮತ್ತು ಆಧ್ಯಾತ್ಮದ ಮೌಲ್ಯಗಳನ್ನು ಏಕಕಾಲಕ್ಕೆ ಹೇಳಿರುವುದು ಚಿಂತನಾರ್ಹ. ಕುರಿ ಕಾಯುವ ವೃತ್ತಿ ಅನುಭಾವವನ್ನೇ ವಚನಗಳಾಗಿ ರೂಪಾಂತರ ಆಗಿರುವುದು ಆತನ ಕಾಯಕನಿಷ್ಠೆಯ ಬದ್ಧತೆಗೆ ಸಾಕ್ಷಿ. ಶರಣರು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿಯೇ ದುಡಿದವರು ಎಂಬುದಕ್ಕೆ ಕಾಯಕ ಶರಣ ವೀರಗೊಲ್ಲಾಳನ ವಚನಗಳು ಉದಾಹರಣೆಯಾಗಿವೆ.

ಆತ್ಮಜ್ಞಾನ, ಪರಿಶುದ್ಧತೆ ಹಾಗೂ ಸಾರ್ಥಕ ಬದುಕಿನ ಮೌಲ್ಯಗಳನ್ನು ಹೇಗೆ ಸಂಪಾದಿಸಿಕೊಳ್ಳಬೇಕು ಎಂಬ ನೀತಿಬೋಧನೆ, ತತ್ವಪ್ರತಿಪಾದನೆ ಸಂದೇಶವನ್ನು ವೀರಗೊಲ್ಲಾಳ ತನ್ನ ವಚನಗಳ ಮೂಲಕ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾನೆ. ಸಾರ್ಥಕ ಬದುಕಿನ ಬಗ್ಗೆ ಸಲಹೆ ನೀಡುವ ಈ ವಚನದ ಸಾಲುಗಳು ಪ್ರಸ್ತುತ ಎನಿಸುತ್ತವೆ. ಅದಕ್ಕಾಗಿಯೇ ವೀರಗೊಲ್ಲಾಳ ಜನಪದರ ಹೃದಯದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾನೆ.

ವೀರಗೊಲ್ಲಾಳನ ಮೇಲಿನ ವಚನದಲ್ಲಿ ಮನುಷ್ಯನ ಅಂತರಂಗ ಮತ್ತು ಬಹಿರಂಗದ ತೊಳಲಾಟವನ್ನು ವಿಶ್ಲೇಷಿಸಲಾಗಿದೆ. ಲೌಕಿಕ ಬದುಕಿನ ಗಂಟು ಹಾಕಿಕೊಂಡು, ಚಿಂದಿಯ ಬಟ್ಟೆ ತೊಟ್ಟು, ಚರ್ಮವನ್ನು ಹೊದಿಕೆಯಾಗಿ ಮಾಡಿಕೊಂಡು, ಚರ್ಮದ ಚೀಲವನ್ನು ಹೊತ್ತು ಕುರಿ-ಮರಿಗಳ ಹಿಂಡನ್ನು ನಡೆಸುತ್ತಿದ್ದೇನೆ. ಕುರಿಗಳ ಹಿಂಡಿನಲ್ಲಿ ದೊಡ್ಡ ಮತ್ತು ಚಿಕ್ಕ ಕುರಿಗಳು ಇರುತ್ತವೆ. ಅವುಗಳನ್ನು ತಾಳ್ಮೆಯಿಂದ ನಿಯಂತ್ರಿಸಿ ಮುನ್ನಡೆಸುವ ಅನುಭವವನ್ನು ಆತ ಮಾನವ ಬದುಕಿಗೆ ರೂಪಕವಾಗಿ ಬಳಸಿದ್ದಾರೆ.

‘ದೊಡ್ಡ ಕುರಿ’, ‘ಚಿಕ್ಕ ಕುರಿ’ ಮುಂತಾದವು ಆತನ ವೃತ್ತಿ ಪರಿಭಾಷೆಯ ಪದಗಳಾದರೂ, ಅವು ಮಾನವನ ಬದುಕಿನ ವಿವಿಧ ಸ್ವಭಾವಗಳಿಗೆ ಹೋಲಿಕೆಯಾಗಿ ಬಳಕೆಯಾಗಿವೆ ಎಂಬುದು ಅರಿಯಬೇಕಿದೆ. ಮಾನವನ ಜೀವನದಲ್ಲಿ ಆಸೆ, ದುರಾಸೆ, ಅಪೇಕ್ಷೆ, ಆಕಾಂಕ್ಷೆ ಮತ್ತು ಕನಸುಗಳು ಇರುವುದು ಸಹಜ. ಸಣ್ಣಪುಟ್ಟ ತೊಂದರೆಗಳು ಎದುರಾದಾಗ ಅವುಗಳಿಂದ ಹಿಮ್ಮೆಟ್ಟದೆ ಮುನ್ನಡೆಯಬೇಕು. ಬದುಕಿನ ತೊಡಕುಗಳನ್ನು ಜ್ಞಾನ, ತಾಳ್ಮೆ ಮತ್ತು ವಿವೇಕದಿಂದ ಪರಿಹರಿಸಿಕೊಳ್ಳಬೇಕೆಂಬ ದೂರದೃಷ್ಟಿ ಚಿಂತನೆ ಬೋಧಿಸುವ ವೀರಗೊಲ್ಲಾಳ ಆತ್ಮಸ್ಥೈರ್ಯದ ಮಾತು ಹೇಳುತ್ತಾನೆ.

ದೊಡ್ಡ ಕೆಲಸಗಳನ್ನು ಕೈಗೊಂಡಾಗ ದೊಡ್ಡ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಅಂತಹ ಸಂದರ್ಭದಲ್ಲಿ ಸವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಿ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕು. ಹಾಗೆಯೇ ಸಣ್ಣ ಕುರಿಗಳು ಸಾಲಾಗಿ ಸರಿದಾರಿಯಲ್ಲಿ ಸಾಗಿದರೆ, ದೊಡ್ಡ ಕುರಿಗಳು ಕೆಲವೊಮ್ಮೆ ಅಡ್ಡದಾರಿ ಹಿಡಿಯುತ್ತವೆ. ಅವುಗಳನ್ನು ಮತ್ತೆ ಸರಿದಾರಿಗೆ ತರಲು ಜ್ಞಾನವೆಂಬ ಕೋಲು ಅಗತ್ಯ ಎಂಬ ಒಳನೋಟ ಚಿಂತನೆಯನ್ನು ಅನುಭಾವಿ ಶರಣ ವೀರಗೊಲ್ಲಾಳ ಪ್ರತಿಪಾದಿಸುತ್ತಾನೆ.

ಸರಿದಾರಿ ಬಿಟ್ಟು ಅಡ್ಡದಾರಿ ಹಿಡಿಯುವ ಚುಕ್ಕಿ-ಚುಕ್ಕಿ ಬಣ್ಣದ ಕುರಿಗಳನ್ನು ಬಯ್ಯುತ್ತೇನೆ, ಕೋಲಿನಿಂದ ಹೊಡೆದು ತಿದ್ದುತ್ತೇನೆ ಎಂದು ಹೇಳುವ ವಚನದಲ್ಲಿ, ಸತ್ಯ, ನಿಷ್ಠೆ ಹಾಗೂ ಸನ್ಮಾರ್ಗದಲ್ಲಿ ಸಾಗುವ ಮನುಷ್ಯನೂ ಒಮ್ಮೊಮ್ಮೆ ಅಡ್ಡದಾರಿ ಹಿಡಿಯಬಹುದು, ಅರಿವಿನ ಕೊರತೆಯಿಂದ ಅಜ್ಞಾನದ ಕೂಪದಲ್ಲಿ ಸಿಲುಕಿಕೊಳ್ಳಬಹುದು ಎಂಬ ಎಚ್ಚರಿಕೆಯೂ ನೀಡುತ್ತಾನೆ. ಅಂಥವರನ್ನು ಜ್ಞಾನ ಮತ್ತು ವಿವೇಕದ ಮಾರ್ಗದರ್ಶನದ ಮುಖಾಂತರ ತಿದ್ದುತ್ತ, ಮತ್ತೆ ಉತ್ತಮ ಹಾದಿಯಲ್ಲಿ ತರುವುದು ಅಗತ್ಯವಾಗಿದೆ ಎಂದು ವಿಶ್ಲೇಷಿಸುತ್ತಾನೆ.

ಕುರಿಗಳಲ್ಲಿ ಒಂದೇ ರೀತಿಯ ಕುರಿಗಳು ಇರುವುದಿಲ್ಲ. ಹಾಗೆ ಮನುಷ್ಯರಲ್ಲಿಯೂ ಒಂದೇ ವಿಚಾರಧಾರೆಯುಳ್ಳವರು ಇರುವುದಕ್ಕೆ ಅಸಾಧ್ಯವೂ ಹೌದು. ಕೆಲವರು ಸತ್ಯ, ಶುದ್ಧ ಮತ್ತು ಸಹನೆಯುಳ್ಳವರಾಗಿದ್ದರೆ, ಇನ್ನೂ ಕೆಲವರು ಕೋಪ, ದ್ವೇಷ, ಚಂಚಲ ಮನಸ್ಸಿನವರು ಇರುತ್ತಾರೆ. ಒಂದಿಷ್ಟು ಜನ ಸಮಾಜಘಾತುಕ ಕೃತ್ಯ ಎಸಗುವುದರಲ್ಲೇ ನಿರತರಾಗಿರುತ್ತಾರೆ. ಕುರಿಯ ಹಿಂಡನ್ನು ತೊರೆದು ಅಡ್ಡದಾರಿ ಹಿಡಿದು ಹೋಗುವ ಸೊಕ್ಕೇರಿದ ಟಗರನ್ನು ಕೋಲಿನಿಂದ ಬಾರಿಸಿ ಸತ್ಪಥದಲ್ಲಿ ಸಾಗುವಂತೆ ತಿರುಗಿಸುತ್ತೇನೆ ಎಂದು ಬಳಸಿರುವ ರೂಪಕದಲ್ಲಿ ಮನುಷ್ಯನು ಸಾರ್ಥಕ ಜೀವನಕ್ಕೆ ಅಗತ್ಯವಾದ ಸದ್ಗುಣಗಳನ್ನು ಅಳವಡಿಸಿಕೊಳ್ಳದೆ ಹೋದಾಗ ಕೆಟ್ಟ ಪ್ರವೃತ್ತಿಗಳಿಗೆ ದಾಸನಾಗುತ್ತಾನೆ. ಅಂತಹ ದಾರಿತಪ್ಪಿದವರನ್ನು ಸರಿದಾರಿಗೆ ತರಲು ಪ್ರಜ್ಞಾವಂತರ ಮಾರ್ಗದರ್ಶನ ಅಗತ್ಯ ಗೂಢಾರ್ಥ ಇದೆ.

ಎಲ್ಲಿ ಕತ್ತಲೆ ಆವರಿಸುತ್ತದೆಯೋ ಅಲ್ಲಿ ಸುಜ್ಞಾನದ ಬೆಳಕು ಹರಿಯಬೇಕು. ಆ ಬೆಳಕಿನ ಸಂಕೇತವಾಗಿ ಜ್ಞಾನವೆಂಬ ಕೋಲು ನಮ್ಮ ಕೈಯಲ್ಲಿರಬೇಕು ಎಂಬ ರೂಪಕದಿಂದ ಶರಣರು ಮನುಷ್ಯತ್ವದ ಬೀಜ ಬಿತ್ತಿದ್ದಾರೆ. ಉತ್ತಮ ಬದುಕು ಕಂಡುಕೊಳ್ಳದವರು ಮದ, ಮತ್ಸರ ಮತ್ತು ಅಹಂಕಾರದಂತಹ ದುರ್ಗುಣಗಳಿಗೆ ದಾಸರಾಗುತ್ತಾರೆ. ಸೊಕ್ಕೇರಿದ ಟಗರಿನಂತೆ ಮನುಷ್ಯನೂ ಕೆಲವೊಮ್ಮೆ ತನ್ನ ನೀಚಬುದ್ಧಿ, ಕ್ರೌರ್ಯ, ಹಿಂಸೆ ಮತ್ತು ಶೌರ್ಯ ಪ್ರದರ್ಶಿಸುತ್ತಾನೆ. ಅಂಥ ಹೀನ ಬುದ್ಧಿ ಸರಿಪಡಿಸಲು ಶರಣ ಚಿಂತನೆ ಅಗತ್ಯವಾಗಿದೆ.

ಸಮಾಜದಲ್ಲಿ ಜೀವಪರ, ಜನಪರ ವಿಚಾರಧಾರೆ ವ್ಯಕ್ತಿತ್ವಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಮದವೇರಿದ ಟಗರಿನ ಸೊಕ್ಕು ಮುರಿಯಲು ಅಹಿಂಸೆಯೇ ಪರಮ ಅಸ್ತ್ರ, ಸಂಪ್ರೀತಿ ಮತ್ತು ಸುಜ್ಞಾನದ ದಾರಿಯಲ್ಲಿ ಸಮಾಜವನ್ನು ಮುನ್ನಡೆಸುವುದೇ ನಿಜವಾದ ಶರಣ ಮಾರ್ಗವಾಗಿದೆ. ಕುರಿಗಳ ಹಿಂಡಿನೊಳಗೆ ತಿರುಗಾಡುತ್ತಿದ್ದ ಅನುಭಾವಿ ವಚನಕಾರ ವೀರಗೊಲ್ಲಾಳ, ಕುರಿಗಳೊಂದಿಗಿನ ತನ್ನ ಒಡನಾಟದ ಅನುಭವ ಮತ್ತು ತತ್ವಸಾರವನ್ನು ಮನುಷ್ಯನ ಬದುಕಿಗೆ ಕೇಂದ್ರಿಕರಿಸಿ ಬೋಧಿಸಲು ಪ್ರಯತ್ನಿಸಿದ್ದಾನೆ. ʼಈ ವಿಕಾರಗಳನ್ನು ಬಿಡಿಸಿ, ನನ್ನೊಳಗೆ ಅಡಗಿರುವ ಘನಜ್ಞಾನವನ್ನು ಕರುಣಿಸು; ನಿನ್ನ ನಿಜಸ್ವರೂಪವನ್ನು ತೋರಿಸುವ ಮೂಲಕ ನನ್ನ ಅರಿವಿನ ಬೆಳಕನ್ನು ಹೆಚ್ಚಿಸು’ ಎಂದು ದೇವರಲ್ಲಿ ಪ್ರಾರ್ಥಿಸುವುದು ನೋಡುತ್ತೇವೆ.

ದೇವರ ಜ್ಞಾನವನ್ನು ಪಡೆಯಲು ‘ಶರಣ ಮಾರ್ಗ’ದಲ್ಲಿ ಇರಿಸು ಎಂದು ಆಧ್ಯಾತ್ಮ ಗುರು ವೀರಬೀರೇಶ್ವರನಲ್ಲಿ ಬಿನ್ನಹಿಸಿಕೊಳ್ಳುತ್ತಾನೆ. ಬಸವಣ್ಣನವರು ಸ್ಥಾಪಿಸಿದ ಶರಣ ಮಾರ್ಗವು ಸಾತ್ವಿಕ ಬದುಕಿನ ಸತ್ಪಥವನ್ನು ತೋರಿಸುತ್ತದೆ. ಶರಣರು ಕಾಯಕದ ಮೂಲಕ ಆತ್ಮಜ್ಞಾನವನ್ನು ಪಡೆದುಕೊಂಡವರು, ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

WhatsApp Image 2026 08 14 at 11.58.13 AM 1
ಜಾಹೀರಾತು

ಜೀವನದಲ್ಲಿ ಎದುರಾಗುವ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಆದರೆ ಪರಿಹಾರ ಕಂಡುಕೊಳ್ಳುವಲ್ಲಿ ಬಹುತೇಕರು ವಿಫಲರಾಗುತ್ತಾರೆ. ಅದಕ್ಕೆ ಜ್ಞಾನ, ತಾಳ್ಮೆ ಮತ್ತು ಧೈರ್ಯದ ಅಗತ್ಯವಿದೆ. ಕಾಯಕದ ಅನುಭವದ ಮೂಲಕ ಜ್ಞಾನಚೈತನ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ. ಬಸವಾದಿ ಶರಣರು ಜೀವನಚೈತನ್ಯರಾಗಿ, ವಿಶ್ವಮಾನವರಾಗಿ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರ ಜೀವನದರ್ಶನ ಸಾರ್ವಕಾಲಿಕ ಸತ್ಯ. ಶರಣರ ವಚನಗಳಲ್ಲಿರುವ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ.

“ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು” ಎಂಬ ವಚನದಲ್ಲಿ ಕಲ್ಲು, ಮಣ್ಣು ಮತ್ತು ಮರ ದೇವರ ಬಗ್ಗೆ ಶರಣ ವೀರಗೊಲ್ಲಾಳ ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಿಳಿಸುತ್ತ ಅರಿವಿನ ಪ್ರಜ್ಞೆ ವಿಸ್ತಾರಗೊಳಿಸುತ್ತಾನೆ.

ಕಲ್ಲು ದೇವರಲ್ಲ; ಅದು ಉಳಿಯ ಮೊನೆಗೆ ಒಡೆಯುತ್ತದೆ. ಮರ ದೇವರಲ್ಲ; ಅದು ಬೆಂಕಿಯಲ್ಲಿ ಸುಡುತ್ತದೆ. ಮಣ್ಣು ದೇವರಲ್ಲ; ಅದು ನೀರಿನಲ್ಲಿ ಕರಗುತ್ತದೆ ಎಂಬುದರ ಮೂಲಕ ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಅರಿವು ಮುಖ್ಯ ಎಂಬ ತಾತ್ವಿಕ ಸಂದೇಶವನ್ನು ಶರಣ ವೀರಗೊಲ್ಲಾಳ ದಾಖಲಿಸಿರುವುದು ಆತನ ವಚನಗಳಿಂದ ತಿಳಿಯುತ್ತದೆ.

ಇದನ್ನೂ ಓದಿ : ವಚನ ಕಲ್ಯಾಣ | ಹದ ಮಣ್ಣಲ್ಲದೆ ಮಡಕೆಯಾಗಲಾರದು!

ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಕಾಯಕ, ದಾಸೋಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು, ನಡೆ-ನುಡಿ ಸಿದ್ಧಾಂತದಲ್ಲಿ ನಿಷ್ಠೆಯಿದ್ದರೆ ಶರಣರು ಕಂಡ ಕನಸಿನ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ. ವೀರಗೊಲ್ಲಾಳನ ವಚನಗಳು ಇದೇ ಸನ್ಮಾರ್ಗದತ್ತ ನಮ್ಮನ್ನು ಕರೆದೊಯ್ಯುತ್ತವೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಪ್ರತಿದಿನ ವಿಶೇಷ ಬರಹ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಬೆಳಕಿನ ಬೆನ್ನೇರಿ ಹೋದ ಕತ್ತಲು, ಮತ್ತೆ ಮರಳದಂತೆ ಮುಚ್ಚಿದ ಕಬ್ಬಿಣದ ಬಾಗಿಲುಗಳು…

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್...

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...