ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕರ್ನಾಟಕ ತೆಲಂಗಾಣ ಗಡಿಯ ಬೀದರ್-ಜಹೀರಾಬಾದ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೀದರ್ ತಾಲ್ಲೂಕಿನ ಬಂಗ್ಲಾ ಮರ್ಜಾಪುರ ಗ್ರಾಮದ ನರಸಿಂಹಲು (54), ಅರುಣ್ (22) ಮೃತರು ಎಂದು ತಿಳಿದು ಬಂದಿದೆ.
ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮದಲ್ಲಿ ನಾಳೆ (ಮೇ 13) ಸಂಬಂಧಿಕರ ಮದುವೆ ಹಿನ್ನೆಲೆ ಊರಿನಿಂದ ಕಡೆಯಿಂದ ಬೈಕ್ ಮೇಲೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಬೀದರ್ ಕಡೆಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಜರುಗಿದೆ.
ಬೈಕ್ ಮತ್ತು ಬಸ್ ನಡುವಿನ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದ್ದು, ಅಪಘಾತದ ವೇಳೆ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿ, ಬಸ್ಸಿನಲ್ಲಿದ್ದ 13 ಮಂದಿ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್, ಇವಿಎಂಗೆ ವಿರೋಧ : 9ನೇ ದಿನ ಪೂರೈಸಿದ ಏಕಾಂಗಿ ಉಪವಾಸ ಸತ್ಯಾಗ್ರಹ
ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಬ್ರಿಮ್ಸ್‌ಗೆ ಸಾಗಿಸಲಾಗಿದೆ. ಆಸ್ಪತ್ರೆ ಸಮೀಪ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




