ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ ಮಟ್ಟದಲ್ಲೇ ಉಳಿದಿದೆ. ಪ್ರಧಾನಿಗಳ ಬೋಧನೆ ಮಾತ್ರ ಚಾಲ್ತಿಯಲ್ಲಿದೆ...
ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ಒಂದು ಕಡೆ ಉರಿಯುತ್ತಿರುವ ಉಷ್ಣ ಹವೆ, ಮತ್ತೊಂದು ಕಡೆ ರಸಗೊಬ್ಬರ ಕೊರತೆ. ಈ ಎರಡೂ ಸೇರಿ ಕೃಷಿ ಕ್ಷೇತ್ರವನ್ನು ಕುಗ್ಗಿಸುತ್ತಿವೆ. ರೈತನ ಬೆವರಿಗೆ ಬೆಲೆ ಇಲ್ಲದಂತೆ ಮಾಡುತ್ತಿವೆ. ಸದ್ಯದ ಸಂಕಷ್ಟ ಕೇವಲ ಒಂದು ಋತುಮಾನದ ಸಮಸ್ಯೆ ಅಲ್ಲ; ಇದು ದೇಶದ ಕೃಷಿ ಕ್ಷೇತ್ರವನ್ನು ನಿರಂತರವಾಗಿ ಕಾಡದೇ ಬಿಡುವುದಿಲ್ಲ.
ಈ ಬಾರಿ ಬೇಸಿಗೆ ಸಾಮಾನ್ಯವಲ್ಲ. ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಸೇಷನ್ ಮತ್ತು ವರ್ಲ್ಡ್ ಮೆಟ್ರೊಲಾಜಿಕಲ್ ಆರ್ಗನೈಸೇಷನ್ ಬಿಡುಗಡೆ ಮಾಡಿದ ವರದಿ ಪ್ರಕಾರ, ಉಷ್ಣ ಅಲೆಗಳ ಪರಿಣಾಮದಿಂದ ವಿಶ್ವದಾದ್ಯಂತ ಹತ್ತು ಲಕ್ಷಕ್ಕಿಂತ ಹೆಚ್ಚು ಜನರ ಜೀವನೋಪಾಯ ಮತ್ತು ಆರೋಗ್ಯಕ್ಕೆ ಅಪಾಯ ಎದುರಾಗಿದೆ. ಭಾರತದಲ್ಲಿ ಇದರ ಪರಿಣಾಮ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಮೇ ಮುಗಿಯುವ ಮುನ್ನವೇ ಉತ್ತರ ಭಾರತದಿಂದ ದಕ್ಷಿಣದವರೆಗೆ ಉಷ್ಣಾಂಶ ದಾಖಲೆ ದಾಟುತ್ತಿದೆ. ಹೊಲ ಉಳುವುದರಿಂದ ಹಿಡಿದು ಬೀಜ ಬಿತ್ತುವ, ಬೆಳೆಯುವ, ಕಟಾವು ಮಾಡುವ ಹಂತದವರೆಗೆ ಇದರ ಪರಿಣಾಮ ಕಾಣುತ್ತಿದೆ.
ಉತ್ತರ ಭಾರತದಲ್ಲಿ ಸದ್ಯ ಗೋಧಿ ಕೊಯ್ಲಿನ ವೇಳೆಯಲ್ಲಿ ಉಷ್ಣ ಅಲೆ ಅಟ್ಟಹಾಸ ಮೆರೆದಿದೆ. ಅದರ ಪರಿಣಾಮವಾಗಿ ಉತ್ಪಾದನೆ ಕುಸಿಯುವ ಭೀತಿ ಎದುರಾಗಿದೆ. ಭತ್ತ ಬೆಳೆ ಕಾಲ ಆರಂಭವಾಗುವ ಮುನ್ನವೇ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದೆ. ಬೀಜ ಮೊಳಕೆಯೊಡೆಯುವಿಕೆ ನಿಧಾನಗೊಳ್ಳುತ್ತಿದೆ. ಉಷ್ಣ ಹವೆಗೆ ಮಾವು ಮರದಲ್ಲಿಯೇ ಒಣಗಿ ಇಳುವರಿ ಕುಂಠಿತಗೊಂಡಿದೆ. ಇದು ಕೃಷಿ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಬಹುದು ಎಂಬುದನ್ನು ಊಹಿಸಿಯೇ ರೈತರು ಹೈರಾಣಾಗಿದ್ದಾರೆ.
ಇದನ್ನು ಓದಿದ್ದೀರಾ?: ಗ್ಯಾಸ್ ಸಿಲಿಂಡರ್ ದುಬಾರಿ; ಬಿಕ್ಕಟ್ಟಿನತ್ತ ಜನಸಾಮಾನ್ಯರ ಬದುಕು
ಭಾರತದ ಕೃಷಿ ಈಗಲೂ ಮಳೆಯನ್ನೇ ನಂಬಿಕೊಂಡಿದೆ. ದೇಶದ ಬಹುಭಾಗದಲ್ಲಿ ಸಮರ್ಪಕ ನೀರಾವರಿ ವ್ಯವಸ್ಥೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಉಷ್ಣ ಹವೆ ನೀರನ್ನು ವೇಗವಾಗಿ ಆವಿಯಾಗಿಸುತ್ತಿದೆ. ರೈತರು ಅಂತರ್ಜಲದತ್ತ ಮುಖ ಮಾಡಬೇಕಾಗಿದೆ. ಆದರೆ ಭೂಗರ್ಭ ಜಲವೂ ಅನೇಕ ಕಡೆ ಕುಸಿಯುತ್ತಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದಲ್ಲಿಯೂ ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದೆ. ಇದು ದೇಶದ ಸಂಪೂರ್ಣ ಕೃಷಿ ಆರ್ಥಿಕತೆಗೇ ಹೊಡೆತ ನೀಡಬಹುದು. ಕೃಷಿಯ ಭವಿಷ್ಯವೇ ಬರಿದಾಗಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಇದು ಒಂದು ರೀತಿಯ ಬಿಕ್ಕಟ್ಟಾದರೆ, ಮತ್ತೊಂದು ರಸಗೊಬ್ಬರದ ಬಿಕ್ಕಟ್ಟು. ಪಶ್ಚಿಮ ಏಷ್ಯಾದ ಯುದ್ಧ, ಹಡಗು ಸಾಗಣೆ ಮಾರ್ಗಗಳ ಅಸ್ಥಿರತೆ, ನೈಸರ್ಗಿಕ ಅನಿಲದ ಬೆಲೆ ಏರಿಕೆ- ಇವೆಲ್ಲವೂ ರಸಗೊಬ್ಬರ ಉತ್ಪಾದನೆ ಮತ್ತು ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಿವೆ. ಹಾರ್ಮುಜ್ ಜಲಸಂಧಿ ಮುಚ್ಚಿರುವುದಿಂದ ಜಗತ್ತಿನ ಪ್ರಮುಖ ರಸಗೊಬ್ಬರ ವ್ಯಾಪಾರ ಮಾರ್ಗವೇ ಸ್ಥಗಿತಗೊಂಡಿದೆ. ಜಗತ್ತಿನ ಪ್ರಮುಖ ಉತ್ಪಾದಕ ರಾಷ್ಟ್ರಗಳು, ದೇಶೀಯ ಬೇಡಿಕೆಗೆ ಆದ್ಯತೆ ನೀಡುತ್ತಿರುವುದರಿಂದ ಭಾರತಕ್ಕೆ ಆಮದು ಕಡಿಮೆಯಾಗುತ್ತಿದೆ. ರೈತನಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗದಿದ್ದರೆ, ಬೆಳೆ ನಲುಗುತ್ತದೆ, ಉತ್ಪಾದನೆ ಕುಸಿಯುತ್ತದೆ. ಸಂಪೂರ್ಣ ಕೃಷಿ ಚಕ್ರವೇ ಅಸ್ತವ್ಯಸ್ತಗೊಳ್ಳುತ್ತದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ನೀಡಿರುವ ಇತ್ತೀಚಿನ ಮಾಹಿತಿಯಂತೆ, 2026ರ ಮುಂಗಾರು ಹಂಗಾಮಿಗೆ ಸುಮಾರು 390.54 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅವಶ್ಯಕತೆ ಇದೆ. ಅದರಲ್ಲಿ ಮೇ 11ರ ವೇಳೆಗೆ ಸುಮಾರು 199.65 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾತ್ರ ಲಭ್ಯವಿದೆ. ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ದೇಶದ ರೈತರಲ್ಲಿ ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ, ದೇಶ ದುಃಸ್ಥಿತಿಯಲ್ಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅಂದರೆ, ಕೃಷಿ ಕ್ಷೇತ್ರದ ಮೇಲೆ ಯುದ್ಧ ಗಂಭೀರ ಪರಿಣಾಮ ಬೀರಿದೆ, ಅದನ್ನು ಪ್ರಧಾನಿ ಅರಿಯುವಲ್ಲಿ ವಿಫಲವಾಗಿದ್ದಾರೆ, ಈಗ ರೈತರಿಗೆ ಬೋಧನೆ ಮಾಡುತ್ತಿದ್ದಾರೆ.
ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ ಮಟ್ಟದಲ್ಲೇ ಉಳಿದಿದೆ. ಉಷ್ಣತೆಯನ್ನು ತಡೆದುಕೊಳ್ಳಬಲ್ಲ ಬೀಜಗಳ ಸಂಶೋಧನೆ, ನೀರಿನ ಸಮರ್ಥ ನಿರ್ವಹಣೆ, ಹವಾಮಾನ ಆಧರಿತ ಕೃಷಿ ಸಲಹೆಗಳು, ಸ್ಥಳೀಯ ಮಟ್ಟದಲ್ಲಿ ಗೊಬ್ಬರ ಉತ್ಪಾದನೆ- ಇವೆಲ್ಲವೂ ವರ್ಷಗಳಿಂದ ಚರ್ಚೆಯಾಗುತ್ತಿದೆಯೇ ಹೊರತು ಗಟ್ಟಿಯಾದ ನೀತಿಗಳಾಗಿ ರೂಪುಗೊಂಡಿಲ್ಲ. ರಾಜ್ಯ-ಕೇಂದ್ರ ಸರ್ಕಾರಗಳು ಸಮನ್ವಯದೊಂದಿಗೆ ಕೆಲಸ ಮಾಡಿದ್ದು ಕಾಣುತ್ತಿಲ್ಲ.
ಇನ್ನು ರೈತರ ಬೆನ್ನೆಲುಬಾಗಿ ಕೆಲಸ ಮಾಡಬೇಕಿದ್ದ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಬಹುರಾಷ್ಟ್ರೀಯ ಬೀಜ, ಗೊಬ್ಬರ, ಕೀಟನಾಶಕ ಕಂಪನಿಗಳ ಏಜೆಂಟ್‌ಗಳಂತೆ ಕೆಲಸ ಮಾಡಿದ್ದೇ ಹೆಚ್ಚು. ತಳ ಹಂತದ ಕೃಷಿ ಅಧಿಕಾರಿಗಳಂತೂ ಕ್ಷೇತ್ರ ಕಾರ್ಯ ನಡೆಸಿದ ಇತಿಹಾಸವೇ ಇಲ್ಲ. ಹೀಗಾಗಿಯೇ ಸೂಕ್ತ ಮಾರ್ಗದರ್ಶನವಿಲ್ಲದೆ, ಮಾರುಕಟ್ಟೆಯಿಲ್ಲದೆ ಗ್ರಾಮೀಣ ರೈತರು ಬಸವಳಿದಿದ್ದಾರೆ. ಬೆಟ್ಟದಷ್ಟು ಸಾಲವನ್ನು ಹೊತ್ತುಕೊಂಡೇ ತಿರುಗುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ- 2020ರಿಂದ 2024ರವರೆಗೆ- ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 54 ಸಾವಿರಕ್ಕೂ ಹೆಚ್ಚು ರೈತರು ಮತ್ತು ಕೃಷಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು NCRB ಅಂಕಿ-ಅಂಶಗಳು ಸೂಚಿಸುತ್ತವೆ.
ಇದನ್ನು ಓದಿದ್ದೀರಾ?: ಬಿಎಸ್‌ವೈ ಅಭಿಮಾನೋತ್ಸವ ಮತ್ತು ಬಳಸಿ ಬಿಸಾಡುವ ಬಿಜೆಪಿ ರಾಜಕಾರಣ
ಇಂದು ಭಾರತ ಎದುರಿಸುತ್ತಿರುವ ಭೀಕರ ಸಮಸ್ಯೆಗಳಲ್ಲಿ ಕೃಷಿ ಕ್ಷೇತ್ರದ ಬಿಕ್ಕಟ್ಟು ಪ್ರಮುಖ ಎನ್ನಬಹುದು. ಸರ್ಕಾರಗಳ ನೀತಿಗಳಿಂದಾಗಿ ಕೃಷಿ ಕ್ಷೇತ್ರ ಕಾರ್ಪೊರೇಟ್ ಕುಳಗಳ ಮಡಿಲು ಸೇರುತ್ತಿದೆ. ಗ್ರಾಮೀಣ ಜನತೆ ಉದ್ಯೋಗವನ್ನರಸಿ ವಲಸೆ ಹೋಗುವ ದುಃಸ್ಥಿತಿ ಎದುರಾಗಿ ಬಹುತೇಕ ಹಳ್ಳಿಗಳು ಬಿಕೋ ಎನ್ನುತ್ತಿವೆ. ದೇಶದೆಲ್ಲೆಡೆ ರೈತರು ಸಂಘಟಿತರಾಗಿ ಸರ್ಕಾರದ ನೀತಿಗಳ ವಿರುದ್ಧ ತಮ್ಮ ಘನತೆಯ ಬದುಕಿಗಾಗಿ ಹೋರಾಟ, ಪ್ರತಿಭಟನೆ, ಜಾಥಾ, ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ.
ಇಂತಹ ದಿಕ್ಕೆಟ್ಟ ಸ್ಥಿತಿಯಲ್ಲಿ, ಉಷ್ಣ ಹವೆ ಮತ್ತು ಗೊಬ್ಬರದ ಕೊರತೆ ಭಾರತದ ಕೃಷಿಯನ್ನು ಇನ್ನಷ್ಟು ಬಿಕ್ಕಟ್ಟಿಗೆ ದೂಡಲಿದೆ. ಪ್ರಕೃತಿಯ ಉಗ್ರ ಸ್ವರೂಪ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ನಡುವೆ ರೈತ ನಲುಗುತ್ತಿದ್ದಾನೆ. ಆದರೆ ಅವನ ಸಹನೆಗೂ ಮಿತಿಯಿದೆ. ಕೃಷಿ ಕುಸಿದರೆ ಅದು ಕೇವಲ ರೈತನ ಕುಸಿತವಲ್ಲ. ಅದು ಆಹಾರ ಭದ್ರತೆ, ಗ್ರಾಮೀಣ ಬದುಕು ಮತ್ತು ದೇಶದ ಆರ್ಥಿಕ ಸ್ಥಿರತೆಯ ಮೇಲಿನ ದೊಡ್ಡ ಹೊಡೆತ ಬೀಳಲಿದೆ. ಈಗಲೂ ನಮ್ಮನ್ನಾಳುವವರು ಚುನಾವಣೆ, ಅಧಿಕಾರ, ಹಣವೆಂಬ ಮೋಹಿನಿಯ ಹಿಂದೆ ಬಿದ್ದರೆ- ಅವರೂ ಉಳಿಯುವುದಿಲ್ಲ, ಈ ಜಗತ್ತೂ ಉಳಿಯುವುದಿಲ್ಲ.




