ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಸಮಾನತಾ ಸಿದ್ಧಾಂತ ಗಟ್ಟಿಗೊಳಿಸುವುದೇ ನಮ್ಮ ಗುರಿಯಾಗಬೇಕು ಎಂದು ಡಾ.ಸಿದ್ಧರಾಮ ಶರಣರು ಬೆಲ್ದಾಳ ಅವರು ಹೇಳಿದರು.
ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2025-26 ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಸೋಮವಾರ ಸಂಜೆ ಬೀದರ್‌ನ ಚನ್ನಬಸವ ಪಟ್ಟದ್ದೇವರು ರಂಗ ಮಂದಿರನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ ಕುರಿತು ವಿಚಾರ ಗೋಷ್ಠಿ, ಸಾಂಸ್ಕೃತಿಕ ಸಂಭ್ರಮದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ಚಿಂತನೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಇಡೀ ಮನುಕುಲಕ್ಕೆ ಬೆಳಕಾಗಿವೆ. ಮಹಾತ್ಮರನ್ನು ಆರಾಧನೆ ಅಷ್ಟೇ ಅಲ್ಲದೆ ಅವರ ವಿಚಾರಧಾರೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕಿದೆ ಎಂದರು.
ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ ಅವರು ತಮಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ʼಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ಮುನ್ನಡೆದರೆ ಸಮಾಜದಲ್ಲಿ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಶಿಕ್ಷಣ ಎಂಬ ಅಸ್ತ್ರದಿಂದ ಇಡೀ ಸಮಾಜವೇ ಬದಲಾವಣೆ ಮಾಡಬಹುದು ಎಂದು ತೋರಿಸಿದ ವಿಶ್ವಜ್ಞಾನಿ ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗಿದರೆ ಪ್ರಬುದ್ಧ ಭಾರತ ನಿರ್ಮಾಣವಾಗುತ್ತದೆ. ದಿನ ದಲಿತರು, ಕಾರ್ಮಿಕರು, ಬಡವರು ಆಡಂಬರದ ಮದುವೆ ಮಾಡಿ ದುಂದು ವೆಚ್ಚ ಮಾಡದೆ ಸರಳವಾಗಿ ಬದುಕಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಿ ಉತ್ತಮ ವ್ಯಕ್ತಿತ್ವ ರೂಪಿಸಿʼ ಎಂದು ಸಲಹೆ ನೀಡಿದರು.

ಯುವ ಮುಖಂಡ ತರುಣ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆ ತತ್ವ ಹಾಗೂ ವೈಚಾರಿಕ ಚಿಂತನೆಗಳು ಇಂದಿನ ಸಮಾಜಕ್ಕೆ ಆದರ್ಶವಾಗಿವೆ. ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುವ ಸಂಘ-ಸಂಸ್ಥೆಗಳಿಗೆ ನಾಗಮಾರಪಳ್ಳಿ ಕುಟುಂಬ ಸದಾ ಸಹಕಾರ ನೀಡುತ್ತದೆʼ ಎಂದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮತದಾನದ ಹಕ್ಕು ವಿಷಯ ಕುರಿತು ಮಾತನಾಡಿ, ʼ18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡುತ್ತಿರುವುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಪ್ರತಿಫಲವಾಗಿದೆ. ಅಂಬೇಡ್ಕರ್ ಅವರು ದಲಿತ ಸೂರ್ಯ ಮಾತ್ರ ಅಲ್ಲ, ಭವ್ಯಭಾರತದ ನಿರ್ಮಾತೃ ವಿಶ್ವಸೂರ್ಯ. ಅಂಬೇಡ್ಕರ್ ಅವರು ತೊರಿದ ಮಾರ್ಗದಲ್ಲಿ ಎಲ್ಲಾ ಶೋಷಿತರು ಬಹುಜನರು ರಾಜಕೀಯವಾಗಿ ಸಂಘಟಿತರಾದರೆ ಮಾತ್ರ ಎಲ್ಲಾ ವರ್ಗಕ್ಕೂ ನ್ಯಾಯ ನೀಡಬಹುದುʼ ಎಂದರು
ಜವಾಹರಲಾಲ್ ನೆಹರು ನವೋದಯ ವಿದ್ಯಾಲಯ ಶಿಕ್ಷಕ ಧರ್ಮಣ್ಣಾ ಚಿಟ್ಟಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಶಿಕ್ಷಣ ವಿಷಯ ಕುರಿತು ಮಾತನಾಡಿ, ʼಡಾ.ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅನೇಕ ನೋವು, ಅಪಮಾನಗಳನ್ನು ಎದುರಿಸಿ ಇಡೀ ವಿಶ್ವವೇ ಭಾರತದತ್ತ ಕಣೆತ್ತಿ ನೋಡುವ ಹಾಗೇ ಶ್ರೇಷ್ಠ ಸಂವಿಧಾನ ರಚಿಸಿ ದೇಶದ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಪುಸ್ತಕಗಳನ್ನು ಅಧ್ಯಯನ ಮಾಡಬೇಕುʼ ಎಂದರು.
ಆಣದೂರು ಪೂಜ್ಯ ಭಂತೆ ಸಂಘ ರಖ್ಖೀತ ಸಾನಿಧ್ಯ ವಹಿಸಿದರು ಮನೆ-ಮನೆಗೆ ಅಂಬೇಡ್ಕರ್ ಅಭಿಯಾನದ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ಅಧ್ಯಕ್ಷತೆ ವಹಿಸಿದರು. ಬುದ್ಧ ಬೆಳಕು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಪೂಜ್ಯ ದಾದಾ ಮಹಾರಾಜ ನಗರಕರ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ನಿಗಮದ (ಲಿಡ್ಕರ್) ಅಧ್ಯಕ್ಷ ಮುಂಡರಗಿ ನಾಗರಾಜ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಕಾರಂಜಾ ರೈತ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಸಂಚಾಲಕಿ ಸಪ್ನಾದೀಪಾ ಭಾವಿಮನಿ ಸೇರಿದಂತೆ ಪ್ರಮುಖರಾದ ಲಾಲಪ್ಪಾ ಕುದರೆ, ಶಂಭುಲಿಂಗ ಕುದರೆ, ಜಗದೀಶ್ವರ ಬಿರಾದರ, ಓಂಪ್ರಕಾಶ ರೊಟ್ಟಿ, ಮಲ್ಲಿಕಾರ್ಜುನ ಟಂಕಸಾಲೆ, ಬಾಲಾಜಿ ಕುಂಬಾರ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಪುರಸ್ಕಾರ ಪುರಸ್ಕೃತ ಡಾ.ಸಿದ್ದರಾಮ ಶರಣರು ಬೆಲ್ದಾಳ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ತೃತೀಯ ಸ್ಥಾನಕ್ಕೆ ಆಯ್ಕೆಯಾದ ಶಿಕ್ಷಕ ಎಂ.ಎಸ್.ಮನೋಹರ್ ಹಾಗೂ ಸಂಗಡಿಗರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಕಾದ ಕಾವಲಿಯಾದ ಭಾರತ: ‘ಎಲ್ ನಿನೊ’ ಭೀತಿಯ ನಡುವೆ ಮುಂಗಾರು ಕ್ಷೀಣಿಸುವ ಎಚ್ಚರಿಕೆ
ಕಲಾವಿದ ತುಕಾರಾಮ ಭೋಲೆ ಅವರು ಜಾನಪದ ಜಾದು ಕಾರ್ಯಕ್ರಮ ನಡೆಸಿಕೊಟ್ಟರು. ಶಿವರಾಜ ತಡಪಳ್ಳಿ, ಸಂತೋಷ ಪೂಜಾರಿನಿಜಂಪೂರ, ಗಂಗಮ್ಮಾ ಫೂಲೆ, ಪುನೀತಾ ಗಾಯಕವಾಡ, ಕರ್ನಾಟಕ ಪಂಚಶೀಲ ಕಲಾ ಸಾಹಿತ್ಯ ಪರಿಷತ್ತಿನ ಅರ್ಜುನ ಕಾಂಚೆ ಹಾಗೂ ಸಂಗಡಿಗರು ಅಂಬೇಡ್ಕರ್ ಗೀತೆ, ಭಾವ ಗೀತೆ, ಜಾನಪದ ಗೀತೆಗಳನ್ನು ನಡೆಸಿಕೊಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಬೀದರ ಜಿಲ್ಲಾ ಸದಸ್ಯರು ಶಾಮರಾವ ನೆಲವಾಡೆ, ಡಾ.ಸ್ವಯಂಪ್ರಕಾಶ ಪ್ರಭಾ, ಜೈಶ್ರೀ ಎಸ್ .ಪ್ರಭಾ, ಆತ್ಮಾನಂದ ಬಂಬುಳಗೆ, ಸತೀಶ್ ಶಿಂದೆ, ರಮೇಶ ಮಡಿವಾಳ ಹಾಗೂ ಪ್ರಮುಖರಾದ ಅರುಣ ಪಟೇಲ್, ಅಮರ ಅಲ್ಲಾಪೂರ, ಕಲ್ಪನಾ ಮಹೇಶ ಗೋರನಾಳಕರ್ ಮತ್ತಿತರರಿದ್ದರು.




