ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕಿನ ಮುಮ್ಮಡಿಕಾವಲ್ ಗ್ರಾಮದಲ್ಲಿ ಯುವಜನ ಗ್ರಾಮಾಭಿವೃದ್ಧಿ ಟ್ರಸ್ಟ್ (ರಿ) ನೇತೃತ್ವದಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಒಟ್ಟಿಗೆ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೊತೆಗೆ ವಾಲಿಬಾಲ್, ಕಬಡ್ಡಿ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ ಯುವಜನರಲ್ಲಿ ಉತ್ಸಾಹ ಹೆಚ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, “ಹಳ್ಳಿಗಳಿಂದ ಸಮಾಜಕ್ಕೆ ಮಾರ್ಗದರ್ಶನ ನೀಡುವ ಚಳುವಳಿಗಳು ಹುಟ್ಟಬೇಕು. ಎಡ-ಬಲ ರಾಜಕೀಯ ಕಿತ್ತಾಟಗಳಿಗಿಂತ ಶೋಷಿತ ಸಮುದಾಯಗಳ ಒಗ್ಗಟ್ಟನ್ನು ಬಲಪಡಿಸುವ ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲ ಹಾಗೂ ದೇವರತ್ನ ಫೌಂಡೇಶನ್ ಅಧ್ಯಕ್ಷರಾದ ಎಂ. ಶಿವಪ್ರಸಾದ್ ಮಾತನಾಡಿ, ಶಿಕ್ಷಣವೇ ಎಲ್ಲಾ ಬಗೆಯ ವಿಮೋಚನೆಗೆ ಸಾಧನವಾಗಿದ್ದು, ಹಳ್ಳಿಯಲ್ಲಿ ಶಿಕ್ಷಣಕ್ಕೆ ಒತ್ತುಕೊಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಸಲಹೆ ನೀಡಿ ತಮ್ಮ ಸಹಕಾರವನ್ನೂ ಘೋಷಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ತಂಬಾಕು ದರ ಕುಸಿತ, ಬೆಳೆ ಮಿತಿ ಹೇರಿಕೆ: ಮೈಸೂರು ಜಿಲ್ಲೆಯ ರೈತರು ಸಂಕಷ್ಟದಲ್ಲಿ
ಮುಖ್ಯ ಭಾಷಣಕಾರರಾದ ಬಾರುಕೋಲು ರಂಗಸ್ವಾಮಿ ಮಾತನಾಡಿ, “ಅಂಬೇಡ್ಕರ್ ಮತ್ತು ಜಗಜೀವನರಾಮ್ ಅವರ ಚಿಂತನೆಗಳನ್ನು ಅರಿಯದವರು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಅವರೇ ನೀಡಿದ ಹಕ್ಕುಗಳ ಫಲಾನುಭವಿಗಳೇ ಅವರನ್ನು ವಿಭಜಿಸುವುದು ಸರಿಯಲ್ಲ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳ ಮೂಲಕ ಮುಮ್ಮಡಿಕಾವಲ್ ಗ್ರಾಮ ರಾಜ್ಯಕ್ಕೇ ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಬ್ಯಾರಿ ಭಾಷೆ–ಸಂಸ್ಕೃತಿ ಉಳಿಸಿ ಬೆಳೆಸಲು ಒಗ್ಗಟ್ಟಿನ ಶ್ರಮ ಅಗತ್ಯ: ಯು.ಟಿ. ಖಾದರ್
ಕಾರ್ಯಕ್ರಮದಲ್ಲಿ ಹಿರಿಯ ದಸಂಸ ಹೋರಾಟಗಾರ ಆರ್.ಎಸ್. ದೊಡ್ಡಣ್ಣ, ದೊಡ್ಡಯ್ಯ, ಊರಿನ ಯಜಮಾನರು, ಟ್ರಸ್ಟ್ ಪದಾಧಿಕಾರಿಗಳಾದ ಅಭಿಜಿತ್, ಪ್ರವೀಣ್ ಕುಮಾರ್, ಪ್ರದೀಪ್ ಮುಮ್ಮಡಿ, ರಾಮು, ಚಂದ್ರು, ವಿಜಯ್ ಕುಮಾರ್, ವೆಂಕಟೇಶ್, ಕೃಷ್ಣಮೂರ್ತಿ ಸೇರಿದಂತೆ ಗ್ರಾಮಸ್ಥರು ಇದ್ದರು.






