ಬೀದರ್‌ | ಮೈಸುಡುವ ಕೆಂಡದಂತಹ ಬಿಸಿಲಿಗೆ ತತ್ತರಿಸಿದ ಜನ : ಪಾರಾಗುವುದು ಹೇಗೆ?

Date:

‌ಬೀದರ್‌ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಬಿಸಿಲಾಘತಕ್ಕೆ ಒಳಗಾಗುವ ಅಪಾಯದ ಕುರಿತು ಜಿಲ್ಲಾಡಳಿತ, ತಾಲೂಕು ಆಡಳಿತಗಳು ಹಾಗೂ ಕಾರ್ಮಿಕ ಇಲಾಖೆ ಜಾಗೃತಿ ಮೂಡಿಸಬೇಕಾಗಿದ. ಗುತ್ತಿಗೆದಾರರು, ಮಾಲೀಕರು, ಕೂಲಿ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಅವರಿಗೆ ಬೇಸಿಗೆಯ ಬಿಡುವ ನೀಡುವುದು ಅವಶ್ಯಕವಾಗಿದೆ.

ಬೀದರ್ ಜಿಲ್ಲಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ.‌ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. ಉಷ್ಣಾಂಶ ನಿಧಾನವಾಗಿ ಏರುಗತಿಯಲ್ಲಿ ಸಾಗಿದ್ದು ಇದೀಗ 42ರ ಗಡಿ ದಾಟಿದೆ. ಕೆಂಡದಂತಹ ಬಿಸಿಲಿಗೆ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

- Advertisement -

ಜಿಲ್ಲೆಯಲ್ಲಿ ಮಾರ್ಚ್‌ ಆರಂಭದಿಂದಲೇ ಸೂರ್ಯನ ಪ್ರಖರತೆ ಜೋರಾಗಿತ್ತು. ಏಪ್ರಿಲ್‌ ತಿಂಗಳಲ್ಲಿ ಅದು ದಿಢೀರಾಗಿ ಏರುತ್ತಲೇ ಜನರನ್ನು ಹೈರಾಣಾಗಿಸಿದೆ. ಇದು ಮೇ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ. ಬಿಸಿಲಿನ ಧಗೆಗೆ ಇನ್ನೊಂದು ತಿಂಗಳು ಹೇಗೆ ಕಳೆಯಬೇಕೆಂಬ ಆತಂಕ ಕಾಡುತ್ತಿದೆ. ಬಿಸಿಗಾಳಿಯ ಅಬ್ಬರದಿಂದಾಗಿ ಜನರ ಓಡಾಟ ವಿರಳವಾಗಿದೆ, ಮನೆಯಿಂದ ಹೊರಬರಲು ಜನ ಭಯಪಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಬಿಸಿಲ ಝಳಕ್ಕೆ ಕೆರೆ-ಕಟ್ಟೆ, ಬಾವಿ, ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಜಿಲ್ಲೆಯ ಹಲವು ಗ್ರಾಮ, ತಾಂಡಾಗಳಲ್ಲಿ ಕುಡಿಯುವ ನೀರಿನ ಉಲ್ಬಣ ತಲೆದೋರಿದ್ದು, ಜನರು ನೀರಿಗಾಗಿ ಸುಡುಬಿಸಿಲಿನಲ್ಲಿ ಖಾಲಿ ಕೊಡ ಹಿಡಿದು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿವೆ. ಬಿಸಿಲಿನ ತಾಪ ತಾಳಲಾಗದೆ ಜನತೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದಾರೆ. ಬಿಸಿಲಿನ ಸೆಕೆ ಜನಸಾಮಾನ್ಯರಿಗೆ ಬೇಡವೆಂದರೂ ಬೆವರಿನ ಸ್ನಾನದ ಭಾಗ್ಯ ಪ್ರಾಪ್ತಿಯಾಗುತ್ತಿದೆ.

ಬೆಂಕಿಯುಗುಳುವ ಸೂರ್ಯ ನೆತ್ತಿಮೇಲೆ ಬರುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ರಸ್ತೆಗಳು ಕಾದ ಕಾವಲಿಯಂತಾಗುತ್ತಿವೆ. ಬೆಳಿಗ್ಗೆ 9ಗಂಟೆ ಸುಮಾರಿಗೆ ಶುರುವಾದ ಬಿಸಿಲಿನ ಝಳ ಸಂಜೆ 6 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ರಸ್ತೆ, ಕಟ್ಟಡಗಳು, ಮನೆಯ ಛಾವಣಿ ಕಾದ ಕಾವಲಿಯಗುತ್ತಿವೆ. ವಿದ್ಯುತ್‌ ಕಡಿತದಿಂದ ಫ್ಯಾನ್, ಕೂಲರ್‌, ಎಸಿಗಳು ಕೆಲಸ ಮಾಡದೆ ಮನೆಯ ಒಳಗೂ ಇರಲಾಗದೇ, ಹೊರಗೂ ಬರಲಾಗದೆ ಜನತೆ ಪರಿತಪಿಸುವಂತಾಗಿದೆ. ಕಾದ ಹೆಂಚಿನಂತಾದ ಮನೆಯ ಛಾವಣಿ ರಾತ್ರಿಯಿಡೀ ಬಿಸಿಯಾಗಿ ಜನರ ನಿದ್ದೆಗಡೆಸುತ್ತ ಚಡಪಡಿಸುವಂತೆ ಮಾಡುತ್ತಿದೆ.

WhatsApp Image 2026 04 30 at 2.15.36 PM 1
ಬೀದರ್‌ ನಗರದ ಡಾ.ಬಿ.ಆರ್.‌ ಅಂಬೇಡ್ಕರ್‌ ವೃತ್ತ

ಬಿಸಿಲ ಬೇಗೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತಟ್ಟಿದೆ. ಹಗಲಲ್ಲಿ ಬಿಸಿಲ ಶಾಖ ತಪ್ಪಿಸಿಕೊಳ್ಳಲು ಪರದಾಡುವ ಜನರು, ರಾತ್ರಿಯಾದರೆ ಮನೆಯೊಳಗೆ ಮಲಗೋಕೆ ಒದ್ದಾಡುತ್ತಿದ್ದಾರೆ. ಹಗಲಲ್ಲಿ ಕಾದ ಕಾವಲಿಯಂತಾದ ನೆಲ ರಾತ್ರಿ ಬಿಸಿಗಾಳಿ ಉಗುಳುತ್ತಿದೆ. ಸ್ವಲ್ಪ ತಂಪು ಗಾಳಿ ಬೀಸಿದರೆ ಸಾಕು ಅಬ್ಬಾ! ಎಷ್ಟು ತಣ್ಣನೆ ಗಾಳಿಯಿದೆ ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಕೆಂಡದಂತೆ ಸುರಿಯುತ್ತಿರುವ ಸೂರ್ಯನ ಆರ್ಭಟಕ್ಕೆ ಬಸ್‌ನಲ್ಲಿ ಸಂಚರಿಸುವುದು ಪ್ರಯಾಣಿಕರಿಗೆ ದೊಡ್ಡ ಸಾಹಸವಾಗಿದೆ. ದೂರದ ಊರುಗಳಿಗೆ ಪ್ರಯಾಣಿಸಬೇಕಾದರೆ ದೇಹಪೂರ್ತಿ ಒದ್ದೆಯಾಗುತ್ತದೆ. ಇನ್ನು ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ ದ್ವಿಚಕ್ರ ವಾಹನ ಸವಾರರು ರಸ್ತೆಗಿಳಿಯಲು ಹಿಂದೇಟು ಹಾಕುತ್ತಿದ್ದು, ಅನಿವಾರ್ಯ ಕೆಲಸ ಕಾರ್ಯಗಳಿಗೆ ಮಾತ್ರ ಹೊರಗಡೆ ಬರುತ್ತಿದ್ದಾರೆ. ಪಾದಚಾರಿಗಳು ತಲೆ ಮೇಲೆ ಟೋಪಿ, ಟುವೆಲ್‌ ಹಾಗೂ ಬೈಕ್‌ ಸವಾರರು ಹೆಲ್ಮೆಟ್‌ ಧರಿಸದೇ ಹೊರಗಡೆ ಬರುತ್ತಿಲ್ಲ.

ಬಾನೆತ್ತರಕ್ಕೆ ಎಳೆನೀರು, ನಿಂಬೆ ಹಣ್ಣಿನ ಬೆಲೆ

ಸಾಮಾನ್ಯವಾಗಿ ಬಿರು ಬೇಸಿಗೆಯಲ್ಲಿ ಎಳೆನೀರು, ನಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಈ ಬಾರಿ ಅವುಗಳ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕನ ಜೇಬಿಗೆ ಕತ್ತರಿ ಬೀಳುತ್ತಿದೆ.

WhatsApp Image 2026 04 30 at 2.15.09 PM
ನಿಂಬೆಹಣ್ಣಿನ ಮಾರಾಟ

ಬೀದರ್ ನಗರ‌ ಸೇರಿದಂತೆ ಜಿಲ್ಯಾದ್ಯಂತ ಪಟ್ಟಣ, ಹೋಬಳಿ ಕೇಂದ್ರಗಳ ಪ್ರಮುಖ ವೃತ್ತ, ರಸ್ತೆ ಬದಿಗಳಲ್ಲಿ ಎಳೆನೀರು, ಹಣ್ಣಿನ ಜ್ಯೂಸ್‌, ಕಲ್ಲಂಗಡಿ, ಐಸ್‌ಕ್ರೀಮ್‌ ಮಾರಾಟ ಜೋರಾಗಿದೆ. ಬಿಸಿಲಿನ ಧಗೆಯಿಂದ ಬಳಲುತ್ತಿರುವ ಜನತೆ ಸುಡು ಬಿಸಿಲು ತಾಳಲಾರದೆ ದಣಿವು ನೀಗಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ನೈಸರ್ಗಿಕ ಪಾನೀಯ ಎಳೆನೀರು, ನಿಂಬೆಹಣ್ಣು, ಕಲ್ಲಂಗಡಿ ಸೇರಿದಂತೆ ಇತರೆ ಹಣ್ಣುಗಳ ಬೆಲೆ ಬಾನೆತ್ತರಕ್ಕೇರಿದೆ.

ಒಂದು ಎಳೆನೀರು ₹60-80ಕ್ಕೆ ಮಾರಾಟವಾಗುತ್ತಿದ್ದರೆ, ಒಂದು ನಿಂಬೆ ಹಣ್ಣಿನ ಬೆಲೆ ₹5-10 ತಲುಪಿದೆ. ಆರೋಗ್ಯಕರವಾದ ಎಳೆನೀರು, ನಿಂಬೆಹಣ್ಣು, ಕಬ್ಬಿನ ಹಾಲು, ಕಲ್ಲಂಗಡಿ, ಮಜ್ಜಿಗೆಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೆ ವಿವಿಧ ಹಣ್ಣಿನ ರಸ, ಐಸ್‌ಕ್ರೀಮ್, ಲಸ್ಸಿ ಅಂಗಡಿಗಳ ಮುಂದೆ ಜನಜಂಗುಳಿ ಕಂಡುಬರುತ್ತಿದೆ. ಇನ್ನು ಬಿರುಬಿಸಿಲಿನಲ್ಲಿ ʼಗರಂ ಗರಂ ಚಾಯ್‌ʼ ಹೀರುವ ಜನರ ಸಂಖ್ಯೆಯೂ ಕಡಿಮೆ ಏನಿಲ್ಲ ಬಿಡಿ!.

ಮಡಿಕೆ ಮಾರಾಟ ಜೋರು!

ಬೇಸಿಗೆಯ ಝಳಕ್ಕೆ ತತ್ತರಿಸಿ ಹೋಗಿರುವ ಜನರು ತಂಪು ನೀರಿನ ಮೊರೆ ಹೋಗುತ್ತಿದ್ದಾರೆ. ಈ ಹಿಂದೆ ಶ್ರೀಮಂತರು ಮಾತ್ರಲ್ಲಿ ಮಾತ್ರ ಫ್ರಿಡ್ಜ್‌ ಖರೀದಿಸುತ್ತಿದ್ದರು. ಈಗ ಕಾಲ ಬದಲಾಗಿದೆ, ಬಡವರ ಮನೆಗೂ ಫ್ರಿಡ್ಜ್‌ ಲಗ್ಗೆ ಇಟ್ಟಿದೆ. ಹೀಗಾಗಿ ಕೆಲ ವರ್ಷಗಳ ಹಿಂದೆ ಮಡಿಕೆಗಳಿಗೆ ʼಬಡವರ ಫ್ರೀಡ್ಜ್‌ʼ ಎಂದು ಕರೆಯಲಾಗುತ್ತಿತ್ತು. ಈಗ ಬಡವ-ಶ್ರೀಮಂತರ ಮನೆಯಲ್ಲಿ ಬೆಲೆಬಾಳುವ ಫ್ರಿಡ್ಜ್‌ಗಳಿದ್ದರೂ ʼಮಣ್ಣಿನ ಮಡಿಕೆ ನೀರುʼ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಮನದಟ್ಟಾಗಿದ್ದು, ಜನ ಎಸಿ ಕಾರಿನಲ್ಲಿ ಬಂದು ಮಣ್ಣಿನ ಮಡಿಕೆ ಖರೀದಿಸುತ್ತಿದ್ದಾರೆ.

WhatsApp Image 2026 04 30 at 2.49.56 PM
ಬೀದರ್‌ ನಗರದ ನೆಹರು ಕ್ರೀಡಾಂಗಣದ ಸಮೀಪ ಮಡಿಕೆ ಮಾರಾಟದಲ್ಲಿ ಕುಂಬಾರರು

ಬೀದರ್‌ ನಗರದ ನೆಹರು ಕ್ರೀಡಾಂಗಣ, ಸಾಯಿ ಸ್ಕೂಲ್‌ ಎದುರು, ಬ್ರಿಮ್ಸ್‌ ಮುಂಭಾಗ, ನೌಬಾದ್‌ ಸೇರಿದಂತೆ ನಗರದ ವಿವಿಧೆಡೆ ಮಡಿಕೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕುಂಬಾರರು ಬಗೆ ಬಗೆಯ ಮಣ್ಣಿನ ಮಡಿಕೆಗಳು ಮಾರಾಟಕ್ಕೆ ಇಟ್ಟಿದ್ದಾರೆ.

₹100 ರಿಂದ 300ವರೆಗೂ ಅದಕ್ಕಿಂತ ಹೆಚ್ಚಿನ ಬೆಲೆಯ ಮಡಿಕೆಗಳಿವೆ, ಮಡಿಕೆ ಆಕಾರದ ಮೇಲೆ ಬೆಲೆ ನಿಗದಿಯಾಗಿದೆ. ಒಬ್ಬೊಬ್ಬರು ದಿನಕ್ಕೆ ₹8-10 ಸಾವಿರ ಮಡಿಕೆ ವ್ಯವಹಾರ ನಡೆಸುತ್ತಿದ್ದಾರೆ. ಬೇಸಿಗೆ ಬಂತಂದ್ರೆ ಕುಂಬಾರರಿಗೆ ಸುಗ್ಗಿ ಕಾಲವೆಂಬಂತೆ ನೆತ್ತಿಸುಡುವ ಬಿಸಿಲಿನಲ್ಲಿಯೇ ಕುಳಿತು ವ್ಯಾಪಾರದಲ್ಲಿ ತೊಡಗಿದ್ದಾರೆ. ಸ್ವಂತ ಅಂಗಡಿ ಇಲ್ಲದ ಕುಂಬಾರರು ಹಲವು ವರ್ಷಗಳಿಂದ ರಸ್ತೆಬದಿಯಲ್ಲೇ ವಹಿವಾಟು ನಡೆಸುತ್ತಿದ್ದಾರೆ.

ಪ್ರಾಣಿ-ಪಕ್ಷಿಗಳ ಮೇಲೆ ಇರಲಿ ದಯೆ

ಕೆರೆ-ಕಟ್ಟೆಗಳ ಒಡಲು ಬರಿದಾಗಿದ್ದು, ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಆಹಾರ, ಕುಡಿಯಲು ನೀರು ಸಿಗದಂತಾಗಿದೆ. ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗಿಸಲು ಜನಸಾಮಾನ್ಯರು ತಮ್ಮ ಮನೆಯ ಮಹಡಿ ಮೇಲೆ ಪಕ್ಷಿಗಳಿಗೆ ಕುಡಿಯಲು ನೀರಿಟ್ಟು, ಆಹಾರ ಧಾನ್ಯಗಳನ್ನು ನೀಡುವ ಮೂಲಕ ಜೀವಸಂಕುಲ ಉಳಿವಿಗೆ ಶ್ರಮಿಸಬೇಕಿರುವುದು ಮನುಷ್ಯರಾದ ತಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪಕ್ಷಿ ಪ್ರೇಮಿ, ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದು ಪಡಶೆಟ್ಟಿ ಮನವಿ ಮಾಡಿದ್ದಾರೆ.

ಬಿಸಿಲಿನ ತಾಪಮಾನ ಬಗ್ಗೆ ಎಚ್ಚರವಹಿಸಿ

“ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಉಷ್ಣಾಂಶ ಏರಿಕೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ವಿಶೇಷವಾಗಿ ಸಣ್ಣ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸಬೇಕು” ಎಂದು ಗುದಗೆ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸಚಿನ್ ಗುದಗೆ ಮನವಿ ಮಾಡಿದ್ದಾರೆ.

WhatsApp Image 2026 04 30 at 2.15.09 PM 1 1
ಗ್ರಾಮೀಣ ಭಾಗದಲ್ಲಿ ಹಳ್ಳಿ-ಹಳ್ಳಿಗೆ ತೆರಳುವ ಕಬ್ಬಿನ ಹಾಲಿನ ಗಾಡಿ

“ಬಿಸಿಲಿನ ತೀವ್ರತೆಯಿಂದ ಸನ್‌ ಸ್ಟ್ರೋಕ್, ಮೂಗಿನಿಂದ ರಕ್ತಸ್ರಾವ, ರಕ್ತದೊತ್ತಡದಲ್ಲಿ ಏರುಪೇರು, ಬಾಯಾರಿಕೆ, ತಲೆಸುತ್ತು, ಸಕ್ಕರೆ ಕಾಯಿಲೆಯಲ್ಲಿ ಅಸ್ಥಿರತೆ ಹಾಗೂ ನಿಂತಲ್ಲೇ ತಲೆಸುತ್ತಿ ಕುಸಿದು ಬೀಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅತಿಯಾದ ಬಿಸಿಲಿನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು, ಮಜ್ಜಿಗೆ, ಹಣ್ಣು ರಸ ಹಾಗೂ ದ್ರವ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ” ಎಂದು ಅವರು ಸಲಹೆ ನೀಡಿದ್ದಾರೆ.

ಜನರು ಬೇಸಿಗೆಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಅಂಶಗಳು

ಹೆಚ್ಚು ನೀರು ಕುಡಿಯಿರಿ, ನೀರಡಿಕೆ ಆಗದಿದ್ದರೂ ನೀರು ಕುಡಿಯಬೇಕು. ಮಜ್ಜಿಗೆ, ಎಳೆನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬಹುದು. ನೀರಿನ ಅಂಶ ಹೆಚ್ಚಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸಬೇಕು, ಉತ್ತಮ ಸಡಿಲವಾದ ತೆಳು ಹತ್ತಿಯ ಬಟ್ಟೆಯನ್ನು ಧರಿಸಿರಿ, ಗಾಳಿಯಾಡುವ ಪಾದರಕ್ಷೆ ಧರಿಸಬೇಕು. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟುವೆಲ್‌ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು.

ಪತ್ರಿಕೆ, ಮಾಧ್ಯಮಗಳ ಮುಖಾಂತರ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳಬೇಕು. ಮಧ್ಯಾಹ್ನ 12 ರಿಂದ 5ರವರೆಗೆ ಬಿಸಿಲಿನಲ್ಲಿ ಅನಾವಶ್ಯಕವಾಗಿ ಓಡಾಡಬಾರದು. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ವಿಶೇಷವಾಗಿ ರೈತರು, ಕಾರ್ಮಿಕರು ಮಧ್ಯಾಹ್ನದ ವೇಳೆ ಕೆಲಸ ಮಾಡದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಯಾರಿಗಾದರೂ ಬಿಸಿಲಿನ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

WhatsApp Image 2026 04 30 at 3.05.13 PM
ಹುಮನಾಬಾದ್‌ ತಾಲೂಕಿನ ಮೋಳಕೆರಾ ಗ್ರಾಮದಲ್ಲಿ ಮನರೇಗಾ ಕಾರ್ಮಿಕರು ಕೆಲಸ ಮಾಡುತ್ತಿರುವುದು- ಸಂಗ್ರಹ ಚಿತ್ರ

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ಅಳವಡಿಸಿ

ಬೇಸಿಗೆಯ ಬಿಸಿಲಿನ ತಾಪ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಬೀದರ್ ನಗರದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ವಿಶೇಷವಾಗಿ ಟ್ರ್ಯಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಬೇಕಾಗುವ ದ್ವಿಚಕ್ರ ವಾಹನ ಸವಾರರು ಉರಿ ಬಿಸಿಲಲ್ಲಿ ನಿಂತುಕೊಳ್ಳುವುದು ಬಹಳ ಕಷ್ಟಕರವಾಗಿದೆ. ಹೀಗಾಗಿ ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ಪರದೆಯ ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂಬ ಕೂಗು ಕೇಳಿಬಂದಿದೆ.

ಈ ಸಂಬಂಧ ಈಚೆಗೆ ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟ ಸುನೀಲ ಭಾವಿಕಟ್ಟಿ ನೇತ್ರತ್ವದ ತಂಡ ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿದ್ದಾರೆ.

ಬೀದರ್‌ ನಗರದ ಡಾ.ಬಿ ಆರ್ ಅಂಬೇಡ್ಕರ್‌ ವೃತ್ತ, ಭಗತ್‌ ಸಿಂಗ್‌ ವೃತ್ತ, ಸಾಂಸ್ಕೃತಿಕ ನಾಯಕ ಬಸವಣ್ಣನವರ ವೃತ್ತ, ಶಿವನಗರ ಬರೀದಿ ಶಾಹಿ ಉದ್ಯಾನ ಬಳಿ ಯಾವಾಗಲೂ ವಾಹನ ಸಂಚಾರ ದಟ್ಟಣೆ ಇರುತ್ತದೆ. ಸಿಗ್ನಲ್‌ಗಳಲ್ಲಿ ಬೈಕ್‌ ಸವಾರರು ಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿಯಿದೆ. ಮೇ ತಿಂಗಳಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಗರಿಷ್ಠ ಉಷ್ಣಾಂಶ ದಾಖಲಾಗುವ ಮುನ್ಸೂಚನೆ ಇದೆ. ಹೀಗಾಗಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮೇ ತಿಂಗಳಲ್ಲಿ ತಾತ್ಕಾಲಿಕ ನೆರಳಿನ ಪರದೆ ಅಳವಡಿಸಬೇಕು ಎಂಬುದು ಒಕ್ಕೂಟದ ಕಳಕಳಿಯಾಗಿದೆ.

ಈ ಬಗ್ಗೆ ಬೀದರ್‌ ಮಹಾನಗರ ಪಾಲಿಕೆ ಆಯುಕ್ತ ಮುಕುಲ್‌ ಜೈನ್‌ ಈದಿನ.ಕಾಮ್‌ ಜೊತೆ ಮಾತನಾಡಿ, “ಬೀದರ್‌ ನಗರದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಸವಾರರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒಂದು ವಾರದೊಳಗೆ ತಾತ್ಕಾಲಿಕ ಹಸಿರು ಪರದೆಯ ನೆರಳಿನ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದ್ದಾರೆ.

ಈಜಲು ತೆರಳುವ ಮುನ್ನ ಇರಲಿ ಎಚ್ಚರ :

ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಹಿನ್ನೆಲೆ ಬಹುತೇಕ ಬಹುತೇಕ ಮಕ್ಕಳು ಮನೆಯಲ್ಲಿದ್ದಾರೆ. ಅದರಲ್ಲೂ ಬೇಸಿಗೆ ರಜೆ ಪ್ರಯುಕ್ತ ಒಂದಿಷ್ಟು ದಿನ ಅಜ್ಜ-ಅಜ್ಜಿಯ ಮನೆಯಲ್ಲಿ ಕಾಲಕಳೆಯಲು ಬಂದ ಮೊಮ್ಮಕ್ಕಳು, ಯುವಜನತೆ ತಮ್ಮ ಸ್ನೇಹಿತರ ಜತೆಗೆ ಕೆರೆ, ಬಾವಿ, ನದಿಗಳಲ್ಲಿ ಈಜಲು ಹೋಗುವಾಗ ಎಚ್ಚರವಹಿಸುವುದು ಅಗತ್ಯವಾಗಿದೆ.

WhatsApp Image 2026 04 30 at 2.55.16 PM
ಎಳೆನೀರು ಮಾರಾಟ

ಬಸವಕಲ್ಯಾಣ ತಾಲೂಕಿನಲ್ಲಿ ಗ್ರಾಮವೊಂದರಲ್ಲಿ 20 ವರ್ಷದ ಯುವಕನೊಬ್ಬ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ ವೇಳೆ ಕೆರೆಯ ಆಳ ತಿಳಿಯದೆ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಮೃತಪಟ್ಟಿರುವ ಘಟನೆ ಇದೇ ವಾರ ನಡೆದಿದೆ. ಈಜು ಬಾರದಿದ್ದರೂ ಸ್ನೇಹಿತರ ಒತ್ತಾಯದಿಂದಾಗಿ ನೀರಿಗಿಳಿಯುವ ಮುನ್ನ ಯೋಚಿಸಬೇಕು. ಮನೆಯಿಂದ ಹೊರಹೋಗುವ ಮಕ್ಕಳ ಮೇಲೆ ಪೋಷಕರು ಗಮನಹರಿ ಇಡುವುದು ಒಳಿತು.

ಬೀದರ ಜಿಲ್ಲೆಯಾದ್ಯಂತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಗಾಳಿ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ) ಸ್ಟೋಕ್‍ನಿಂದಾಗಿ ಸಾರ್ವಜನಿಕರ, ಕಾರ್ಮಿಕರ, ರೈತರ, ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.

ಬಿಸಿಲಿನ ಬೇಗೆಗೆ ಬಸವಳಿದ ಕಾರ್ಮಿಕರು

ಒಪ್ಪತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವ ರೈತರು, ಕೂಲಿ ಕಾರ್ಮಿಕರು ಮೈಚುರುಗುಟ್ಟಿಸುವ ಬಿಸಿಲಿನಲ್ಲಿಯೂ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಬಿಸಿಲು ಎಂದು ಕುಳಿತರೆ ದುಡಿಮೆ ಇಲ್ಲದೆ ಹೊಟ್ಟಿಗೆ ಅನ್ನ ಸಿಗಲ್ಲವೆಂದು ಗಾರೆ ಕೆಲಸಗಾರರು, ಸೆಂಟ್ರಿಂಗ್ ಹಾಕುವ ಕಾರ್ಮಿಕರು ಇತರೆ ಕೂಲಿಕಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ಕಸರತ್ತು ನಡೆಸುತ್ತ ತಮ್ಮ ಶ್ರಮದ ಕಾಯಕವನ್ನು ಮಾಡುತ್ತಿರುವುದು ಮರುಕ ಹುಟ್ಟಿಸುವಂತಿದೆ.

ಇದನ್ನೂ ಓದಿ : ಔರಾದ್‌ ಸೀಮೆಯ ಕನ್ನಡ | ಸುಡು ಬಿಸಲಾಗ ಭಾಳ ಓಡಾಡಬ್ಯಾಡ; ಬೇಮಾರ ಬಿದ್ದೂರ್ ಹೈರಾಣ ಅದಾ!‌

WhatsApp Image 2026 04 30 at 2.54.30 PM
ರೋಟರಿ ವೃತ್ತ ಬೀದರ್

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಬಿಸಿಲಾಘತಕ್ಕೆ ಒಳಗಾಗುವ ಅಪಾಯದ ಕುರಿತು ಜಿಲ್ಲಾಡಳಿತ, ತಾಲೂಕು ಆಡಳಿತಗಳು ಹಾಗೂ ಕಾರ್ಮಿಕ ಇಲಾಖೆ ಜಾಗೃತಿ ಮೂಡಿಸಬೇಕಾಗಿದ. ಗುತ್ತಿಗೆದಾರರು, ಮಾಲೀಕರು, ಕೂಲಿ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಅವರಿಗೆ ಬೇಸಿಗೆಯ ಬಿಡುವ ನೀಡುವುದು ಅವಶ್ಯಕವಾಗಿದೆ.

ಕಚೇರಿ ಸಮಯ ಬದಲಾವಣೆ :

ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಜಿಲ್ಲೆಯಲ್ಲಿ 2 ತಿಂಗಳು ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ಸರ್ಕಾರಿ ಕಚೇರಿಗಳ ಕೆಲಸದ ಸಮಯ ನಿಗದಿ ಮಾಡಿದ್ದು, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಸರ್ಕಾರಿ ಕಚೇರಿ ಸಮಯ ಬದಲಾವಣೆ ಜಾರಿಯಲ್ಲಿದೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಕಚೇರಿಗಳು ಸೇರಿದಂತೆ ಬಸ್‌ ನಿಲ್ದಾಣ, ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಬೇಕಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೆಲಸ ಕಾರ್ಯಗಳ ನಿಮಿತ್ತ ನಗರ, ಪಟ್ಟಣಗಳಿಗೆ ಆಗಮಿಸುತ್ತಾರೆ. ಹಣಕೊಟ್ಟು ಬಾಟಲಿ ನೀರು ಖರೀದಿಸಲಾಗದವರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಲು ಆಡಳಿತ ವ್ಯವಸ್ಥೆ ಅಣಿಯಾಗಬೇಕಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ʼಸೂಪರ್ ಎಲ್ ನಿನೊʼ ಅಬ್ಬರಕ್ಕೆ ಮಾರ್ಚ್‌ ವೇಳೆಗೆ ಭಾರತದಲ್ಲಿ 55 ಸಾವಿರ ಸಾವು? ಹೊಸ ಟ್ರ್ಯಾಕರ್ ವರದಿ!

ಎಲ್ ನಿನೊ ಹವಾಮಾನ ವಿದ್ಯಮಾನವು ಈ ವರ್ಷ ಜಗತ್ತಿನಾದ್ಯಂತ ತೀವ್ರ ಉಷ್ಣಾಂಶ...

ಈ ದಿನ ಸಂಪಾದಕೀಯ | ಖಾಸಗಿ ಆಸ್ಪತ್ರೆ ದರಪಟ್ಟಿ, ಔಷಧ ಬೆಲೆ- ಆಡಿದ್ದನ್ನು ಮಾಡಿ ತೋರಿಸಲಿ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಕ್ರಮಗಳು, ಸರ್ವೋಚ್ಚ ನ್ಯಾಯಾಲಯದ...

ಇಸ್ರೇಲ್ ಚುನಾವಣೆಯ ಅತಂತ್ರ ಜನಾದೇಶ- ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲ ದಿನ, ಕಾರಣಗಳೇನು?

ಇಸ್ರೇಲ್‌ನಲ್ಲಿ ಅಕ್ಟೋಬರ್ 27ರಂದು ನಡೆದ ಸಂಸದೀಯ ಚುನಾವಣೆಯ (ನೆಸ್ಸೆಟ್) ಮತ ಎಣಿಕೆ...

2011ರ ‘ನೇಮಕಾತಿ ರಕ್ಷಣೆ ಕಾಯ್ದೆ’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; 362 ಕೆಎಎಸ್‌ ಅಧಿಕಾರಿಗಳ ಉದ್ಯೋಗಕ್ಕೆ ಕುತ್ತು!

2011ನೇ ಸಾಲಿನ ‘ಕರ್ನಾಟಕ ಆಡಳಿತ ಸೇವೆ’ (ಕೆಎಎಸ್) ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು...