ರಾಜಧಾನಿ ಬೆಂಗಳೂರಿನಲ್ಲಿ ಇಂದು (ಏ. 30) ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನತೆಗೆ ಮುಂಗಾರು ಪೂರ್ವ ಮಳೆಯು ಕೊಂಚ ತಂಪೆರೆದಿದ್ದು, ಇಂದೂ ಕೂಡ ಇದೇ ವಾತಾವರಣ ಮುಂದುವರಿಯಲಿದೆ. ಮಧ್ಯಾಹ್ನದ ನಂತರ ಅಥವಾ ಸಂಜೆಯ ವೇಳೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.
ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ರಭಸವಾಗಿ ಗಾಳಿ ಬೀಸುವ ಸಾಧ್ಯತೆಯಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನಗರದ ಹಲವೆಡೆ ಮೋಡಕವಿದ ವಾತಾವರಣವಿದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಬಿರುಗಾಳಿಯ ಅಬ್ಬರವಿರಲಿದ್ದ ಹಿನ್ನೆಲೆಯಲ್ಲಿ ಹಳೆಯ ಮರಗಳ ಕೆಳಗೆ ನಿಲ್ಲದಂತೆ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆಯ ವರದಿ ಬೆನ್ನಲ್ಲೇ ಬಿಬಿಎಂಪಿ ಕೂಡ ಸಾರ್ವಜನಿಕರಿಗೆ ಮನವಿ ಮಾಡಿದೆ.
ಬುಧವಾರ (ಏ. 29) ಸಂಜೆ ನಗರದಲ್ಲಿ ದಿಢೀರ್ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಕಚೇರಿ ಬಿಟ್ಟು ಮನೆಗೆ ಮರಳುತ್ತಿದ್ದವರ ಪರದಾಟ ಹೇಳತೀರದಾಗಿತ್ತು. ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ಇಂದಿರಾನಗರ, ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಳೆಯಿಂದಾಗಿ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಹಾಗೂ ವಿವಿಧಡೆ ನಡೆದ ಅವಾಂತರಗಳಲ್ಲಿ ಮೂವರು ಸೇರಿ ಒಟ್ಟು 10 ಮಂದಿ ಮೃತಪಟ್ಟಿದ್ದರು.
ಇದನ್ನು ಓದಿದ್ದೀರಾ? ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲು; ಪಶ್ಚಿಮ ಬಂಗಾಳದಲ್ಲಿ ಮಣ್ಣುಮುಕ್ಕಿದ್ದ ‘ಎಕ್ಸಿಟ್ ಪೋಲ್’
ಕೆ.ಆರ್. ವೃತ್ತ ಸೇರಿದಂತೆ ಪ್ರಮುಖ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಫ್ಲೈಓವರ್ ಹಾಗೂ ಮೆಟ್ರೋ ಪಿಲ್ಲರ್‌ಗಳ ಕೆಳಗೆ ಆಶ್ರಯ ಪಡೆದು ಟ್ರಾಫಿಕ್ ದಟ್ಟಣೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.
ಮಳೆಯ ಜೊತೆಗೆ ಬೀಸಿದ ರಭಸವಾದ ಗಾಳಿಗೆ ನಗರದ ವಿವಿಧೆಡೆ ಹತ್ತಾರು ಬೃಹತ್ ಮರಗಳು ಧರೆಗುರುಳಿವೆ. ಜಯನಗರ, ಬಸವನಗುಡಿ, ಆರ್.ಆರ್. ನಗರ ಹಾಗೂ ಮಲ್ಲೇಶ್ವರಂ,ರಾಜಾಜಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಬೆಸ್ಕಾಂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹಲವು ಬಡಾವಣೆಗಳು ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿದ್ದವು.
ತಕ್ಷಣವೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಹಾಗೂ ಬೆಸ್ಕಾಂ ಲೈನ್‌ಮನ್‌ಗಳು, ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಕಾರ್ಯಾಚರಣೆಯಲ್ಲಿ ತಡರಾತ್ರಿಯವರೆಗೂ ನಿರತರಾಗಿದ್ದರು. ಮೈಕೋ ಲೇಔಟ್ ಸೇರಿದಂತೆ ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಚರಂಡಿ ನೀರು ನುಗ್ಗಿ ನಿವಾಸಿಗಳು ಹೈರಾಣಾದ ಘಟನೆಗಳೂ ವರದಿಯಾಗಿವೆ.





