ಹಾಲು ಉತ್ಪಾದಕ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಪ್ರತಿ ಲೀಟರ್ ಹಾಲಿಗೆ ₹7 ಹೆಚ್ಚುವರಿ ದರ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ಅವರು ಸಮಸ್ತ ಹಾಲು ಉತ್ಪಾದಕರ ಹಾಗೂ ಒಕ್ಕೂಟದ ಆಡಳಿತ ಮಂಡಳಿ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಬೆಳಗಾನಹಳ್ಳಿ ಬಳಿಯ ಕೋಮುಲ್ ಕೇಂದ್ರ ಕಚೇರಿಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಹಾಲು ಉತ್ಪಾದಕ ರೈತ ಕುಟುಂಬಗಳಿಗೆ ಆರ್ಥಿಕ ಬಲ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಹಾಲಿನ ಮಾರಾಟ ದರದಲ್ಲಿ ಪ್ರತಿ ಲೀಟರ್‌ಗೆ ₹8 ಹೆಚ್ಚಳ ಮಾಡಿದ್ದು, ಅದರಲ್ಲಿ ₹7 ನೇರವಾಗಿ ಹಾಲು ಉತ್ಪಾದಕ ರೈತರಿಗೆ ಹಾಗೂ ₹1 ಒಕ್ಕೂಟಗಳ ನಿರ್ವಹಣೆಗೆ ನೀಡಲು ನಿರ್ಧರಿಸಿರುವುದು ಇತಿಹಾಸದಲ್ಲೇ ಮಹತ್ವದ ತೀರ್ಮಾನವಾಗಿದೆ ಎಂದರು.
ಅಕ್ಟೋಬರ್ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ನವೆಂಬರ್ 1ರ ಬೆಳಗಿನ ಹಾಲಿನ ಸರತಿಯಿಂದಲೇ ಹೆಚ್ಚುವರಿ ದರ ಜಾರಿಗೆ ಬಂದಿದೆ. ಈ ವರ್ಷ ಮಳೆಯ ಕೊರತೆ, ಬರಗಾಲ, ನೀರು ಮತ್ತು ಮೇವಿನ ಅಭಾವದಿಂದ ಹೈನುಗಾರಿಕೆಯ ಉತ್ಪಾದನಾ ವೆಚ್ಚ ಹೆಚ್ಚಾಗಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಕೋಮುಲ್ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ, ಶೇ.4 ಫ್ಯಾಟ್ ಮತ್ತು ಶೇ.8.5 ಎಸ್‌ಎನ್‌ಎಫ್ ಅಂಶವುಳ್ಳ ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು ₹35.40ರಿಂದ ₹42.40ಕ್ಕೆ ಹೆಚ್ಚಿಸಲಾಗಿದೆ. ಗುಣಮಟ್ಟದ ಆಧಾರದ ಮೇಲೆ ಗರಿಷ್ಠ ಶೇ.12 ಫ್ಯಾಟ್ ಹೊಂದಿರುವ ಹಾಲಿಗೆ ಪ್ರತಿ ಲೀಟರ್‌ಗೆ ₹62.40ರವರೆಗೆ ಹಾಗೂ ಸರ್ಕಾರದ ₹5 ಪ್ರೋತ್ಸಾಹಧನ ಸೇರಿ ಒಟ್ಟು ₹67.40ರವರೆಗೆ ರೈತರು ಪಡೆಯಬಹುದಾಗಿದೆ ಎಂದು ವಿವರಿಸಿದರು.
ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳಲ್ಲಿ ಆಧುನಿಕ ತಂತ್ರಜ್ಞಾನದ ಎಎಂಸಿಎಸ್ (AMCS) ಸಾಫ್ಟ್‌ವೇರ್ ಅಳವಡಿಸಿರುವುದರಿಂದ ಹಾಲಿನ ಗುಣಮಟ್ಟದ ಆಧಾರದ ಮೇಲೆ ಪಾರದರ್ಶಕವಾಗಿ ದರ ನಿಗದಿಪಡಿಸಲು ಸಾಧ್ಯವಾಗಿದೆ. ಉತ್ತಮ ಗುಣಮಟ್ಟದ ಹಾಲು ಪೂರೈಸುವ ರೈತರಿಗೆ ಹೆಚ್ಚಿನ ಹಣ ದೊರೆಯುತ್ತಿದೆ ಎಂದರು.
ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳಿಗೆ ಹೋಲಿಸಿದರೆ ಹಾಲು ಉತ್ಪಾದಕರಿಗೆ ಉತ್ತಮ ಖರೀದಿ ದರ ನೀಡುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಖರೀದಿಸುತ್ತಿರುವುದು ಕೋಮುಲ್‌ಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಸರ್ಕಾರದ ಈ ನಿರ್ಧಾರದಿಂದ ಕೋಲಾರ ಜಿಲ್ಲೆಯಲ್ಲಿ ಸುಮಾರು 41 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಐದು ಜನರಂತೆ ಲೆಕ್ಕ ಹಾಕಿದರೆ ಎರಡು ಲಕ್ಷಕ್ಕೂ ಹೆಚ್ಚು ಜನರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ರಾಜ್ಯದ ಸುಮಾರು 11 ಲಕ್ಷ ಹಾಲು ಉತ್ಪಾದಕ ಕುಟುಂಬಗಳ 50 ಲಕ್ಷಕ್ಕೂ ಅಧಿಕ ಜನರಿಗೆ ಈ ನಿರ್ಧಾರ ನೆರವಾಗಲಿದೆ ಎಂದು ತಿಳಿಸಿದರು.
ಒಕ್ಕೂಟದ ಮುಂದಿನ ಗುರಿ
ಮುಂದಿನ ದಿನಗಳಲ್ಲಿ ಕೋಮುಲ್ ವ್ಯಾಪ್ತಿಯಲ್ಲಿ ಪ್ರತಿದಿನದ ಹಾಲು ಶೇಖರಣೆಯನ್ನು 10 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಾಲಿನ ಗುಣಮಟ್ಟ ಸುಧಾರಣೆ, ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವುದು ಒಕ್ಕೂಟದ ಪ್ರಮುಖ ಆದ್ಯತೆಯಾಗಿದೆ ಎಂದರು.
ಈ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಕೋಮುಲ್‌ನ ಉತ್ಪಾದನಾ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಹಾಲು ಉತ್ಪಾದಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಒಕ್ಕೂಟದ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಐತಿಹಾಸಿಕ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಮತ್ತು ಜಿಲ್ಲೆಯ ಸಮಸ್ತ ಹಾಲು ಉತ್ಪಾದಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಕೊನೆಯಲ್ಲಿ ಒಕ್ಕೂಟದ ವ್ಯಾಪ್ತಿಯ ಸಮಸ್ತ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಡೀಲರ್‌ಗಳು, ಗ್ರಾಹಕರು ಹಾಗೂ ಸಾರ್ವಜನಿಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೆ.ವೈ. ನಂಜೇಗೌಡ ಅವರು ಕೋರಿದರು.
ಇದನ್ನು ಓದಿದ್ದೀರಾ..? ಶ್ರೀನಿವಾಸಪುರ | ರೈತರ ಮೇಲೆ ದೌರ್ಜನ್ಯ ಆರೋಪ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ಪತ್ರಿಕಾಘೋಷ್ಟಿಯಲ್ಲಿ ನಿರ್ದೇಶಕರಾದ ಕೆ ಕೆ ಮಂಜುನಾಥ್ , ಯೂನಸ್ ಶಂಶೀರ್ ಚಂಜಿಮಲೆ ರಮೇಶ್, ಶಂಶೀರ್ ,ಹನುಮೇಶ್ ಉಪಸ್ಥಿತರಿದ್ದರು .




